ತೇಜಸ್ವಿ ಡ್ರೈವಿಂಗ್: ಕುವೆಂಪು ದಿಗಿಲು, ತಾರಿಣಿ ಪ್ರಾಥನೆ

By * ಡಾ.ಬಿ.ಆರ್.ಸತ್ಯನಾರಾಯಣ

(ಮುಂದುವರೆದ ಭಾಗ)ಆ ಕ್ಷಣ ಕವಿಗನ್ನಿಸಿದ್ದು "ಛೆ ಛೆ ಛೆ! ಏನಪಾಯವಾಗುತಿತ್ತು!!...." ಎಂದು. ಇತ್ತ ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ, ಅತ್ತ ಉದಯರವಿಯಲ್ಲಿ ತಾರಿಣಿಯ ಪ್ರಾರ್ಥನೆ ಮುಂದುವರೆದು ಮುಗಿಯುವ ಹಂತ ತಲುಪಿತ್ತು!

"ಉದಯರವಿ"ಯ ದೇವರ ಮನೆಯಲ್ಲಿ
ಪ್ರಾರ್ಥಿಸುತ್ತಿದ್ದ ತಾರಿಣಿಯ ಕೈ ಮುಗಿಯುತಿತ್ತು.
ಆಗಳಾಗಳೆ ಮುಗಿಯುತಿತ್ತು
ಪ್ರಾರ್ಥನೆಯೂ:
"ಸುಮಗಮವಾಗಲಿ, ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ಣ ಹೋಗಿಬರಲಿ!"

ತಾರಿಣಿಯ ಪ್ರಾರ್ಥನೆ, ಕವಿಯ ಕನಸು, ಡ್ರೈವರನ ಅನುಭವ, ತೇಜಸ್ವಿಯ ಕ್ರಿಯಾಶೀಲತೆಯ ಫಲವಾಗಿ ಕಾರು ಸರಿ ಹೋಗುತ್ತದೆ. ಪಯಣ ಮುಂದುವರೆಯುತ್ತದೆ. ಪಯಣ ಮುಗಿದು, ಬಹುಶಃ ಒಂದು ವಾರದ ನಂತರ ಮೈಸೂರಿಗೆ ಹಿಂದಿರುಗಿದ ಮೇಲೆ, 26-11-1956ರಂದು ಪ್ರಯಾಣದ ಅನುಭವವನ್ನು, ಕಾರಿನಿಂದ ಉಂಟಾದ ಪರಿಪಾಟಲನ್ನು ಮನೆಯಲ್ಲಿ ಮಾತನಾಡುತ್ತಿದ್ದಾಗ, ಆ ಸಮಯದಲ್ಲಿ ಉದಯರವಿಯ ದೇವರ ಮನೆಯಲ್ಲಿ ತಾರಿಣಿ ದೀಪ ಬೆಳಗಿಸುತ್ತಿದ್ದ ವಿಚಾರ ಕವಿಗೆ ತಿಳಿದಿರಬೇಕು. ಅಂದೇ 'ಸಿಡ್ಲೆಹಳ್ಳಿ ಮತ್ತು ತಾರಿಣಿಯ ಪ್ರಾರ್ಥನೆ' ಎಂಬ ಮೇಲಿನ ಕವಿತೆ ರಚಿತವಾಗಿದೆ.
'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯದಲ್ಲಿ, ಕಾಡಿಗೆ ಹೊರಟ ಅಣ್ಣ-ಅತ್ತಿಗೆಯರ ಜೊತೆ ಲಕ್ಷ್ಮಣನೂ ನಿಂತ ನಿಲುವಿನಲ್ಲಿ ಹೊರಡುತ್ತಾನೆ. ಇತ್ತ ಅರಮನೆಯಲ್ಲಿ ಲಕ್ಷ್ಮಣನ ಸತಿ ಊರ್ಮಿಳೆ ಒಂಟಿಯಾಗುತ್ತಾಳೆ. ಆಗ ಕವಿ ಊರ್ಮಿಳೆಯನ್ನು ಕೇಳುತ್ತಾರೆ-

-ಸೌಮಿತ್ರಿ ತಾಂ
ನಿನ್ನನುಮತಿಯನಣ್ಣನೊಡನಡವಿಗೈದಲ್ಕೆ ಪೇಳ್
ಬೇಡಿದನೆ? ಭ್ರಾತೃಭಕ್ತಿಯ ಸಂಭ್ರಮಾಧಿಕ್ಯದೊಳ್
ಪ್ರೀತಿಯಿಂ ಬೀಳ್ಕೊಳ್ವುದಂ ತಾಂ ಮರೆಯನಲ್ತೆ?
ಮರೆಯನೆಂದುಂ ಸುಮಿತ್ರಾತ್ಮಜಂ! ಪೇಳ್ದನೇನಂ,
ಪೇಳ್, ಬನಕೆ ನಡೆವಂದು?

"ಪೇಳ್ವಳೆಂತಯ್ ಮಂತ್ರಮಂ" ಎನ್ನುವ ಕವಿ, ಸತಿಶಿರೋಮಣಿಯಾದ ಊರ್ಮಿಳೆ ತಳೆದ ದಿಟ್ಟ ನಿಲುವನ್ನು ಹೀಗೆ ಪ್ರತಿಪಾದಿಸಿದ್ದಾರೆ.

ಪ್ರಾಣೇಶ
ಲಕ್ಷ್ಮಣಂ ರಾಮ ಸೀತೆಯರೊಡನಯೋಧ್ಯೆಯಂ
ಬಿಟ್ಟಂದುತೊಟ್ಟು, ಸರಯೂನದಿಯ ತೀರದೊಳ್
ಪರ್ಣಕುಟಿಯಂ ರಚಿಸಿ, ಚಿರ ತಪಸ್ವಿನಿಯಾಗಿ
ಕಟ್ಟಿದಳ್ ಚಿತ್ತಪೋಮಂಗಳದ ರಕ್ಷೆಯಂ
ಮೈಥಿಲಿಗೆ ರಾಮಂಗೆ ಮೇಣ್ ತನ್ನಿನಿಯ ದೇವನಿಗೆ!

ಅಂದು ಊರ್ಮಿಳೆ ಕಟ್ಟಿದ ಚಿತ್ತಪೋಮಂಗಳದ ಶ್ರೀರಕ್ಷೆಯಿದ್ದುದರಿಂದಲೇ ರಾಮ ಲಕ್ಷ್ಮಣರಿಗೆ, ಸೀತೆಗೆ ಎಲ್ಲ ರೀತಿಯ ಅಗ್ನಿ ಪರೀಕ್ಷೆಯನ್ನು ಗೆದ್ದು ಬರಲು ಸಾಧ್ಯವಾಯಿತು. 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ಮದುವೆ ಮನೆಯಿಂದ, ಪೀಂಚಲು ಜೊತೆ ಹೊರಬಿದ್ದ ಚಿನ್ನಮ್ಮ, ಮಾರಿಯಮ್ಮನ ಗುಡಿಯಲ್ಲಿ, ತನ್ನ ಮತ್ತು ತನ್ನಿನಿಯನ ಕ್ಷೇಮ ಕಾತರಳಾಗಿ ಮಾರಿಯಮ್ಮನ ಪದತಲದಲ್ಲಿ ದೀನಳಾಗಿ ಬೇಡುತ್ತಿರುವುದನ್ನು, ಅದೇ ಸಮಯದಲ್ಲಿ, ದೂರದ ಕಲ್ಕತ್ತಾದ ವರಾಹನಗರದಲ್ಲಿದ್ದ ಹಾಳುಮನೆಯ ಮಠದಲ್ಲಿ, ತರುಣ ಸನ್ಯಾಸಿಯೊಬ್ಬನು, ತಾನು ಗುರುಕೃಪೆಯಿಂದ ಕಂಡ ದರ್ಶನದ ಫಲವಾಗಿ, ತಾನು ಕಂಡ ಆ ಹೆಣ್ಣುಮಗಳ ಸಂಕಟ ಏನಿದ್ದರೂ ಪರಿಹಾರವಾಗಿ, ಆಕೆಗೆ ತಾಯಿ ಕೃಪೆಮಾಡಲಿ! ಎಂದು ತಪೋರಕ್ಷೆಯನ್ನು ಕಟ್ಟುತ್ತಾನೆಯಲ್ಲವೆ!? ಕಾವ್ಯರಂಗದಲ್ಲಿಯಂತೊ, ಅಂತೆಯೇ ಲೋಕರಂಗದಲ್ಲಿ ಯಾರ‍್ಯಾರ ಮಂಗಳಕ್ಕಾಗಿ ಯಾರ‍್ಯಾರು, ಕಾಲ ದೇಶಗಳನ್ನು ಮೀರಿ ತಪೋಮಂಗಳದ ಶ್ರೀರಕ್ಷೆಯನ್ನು ಕಟ್ಟುತ್ತಿದ್ದಾರೋ ಬಲ್ಲವರು ಯಾರು? ಅಣ್ಣನ ಕ್ಷೇಮಕ್ಕಾಗಿ ಮಾಡಿದ ತಾರಿಣಿಯ ಪ್ರಾರ್ಥನೆಯೂ ಅಂತಹುದೊಂದು ತಪೋಶ್ರೀರಕ್ಷೆಯೇ ಆಗಿದ್ದಿರಬಹುದಲ್ಲವೆ?

ರಾಮನ ಕಿರೀಟದಾ
ರನ್ನವಣಿಯೋಲೆ ರಮ್ಯಂ, ಪಂಚವಟಿಯೊಳ್
ದಿನೇಶೋದಯದ ಶಾದ್ವಲದ ಪಸುರ್ ಗರುಕೆಯೊಳ್
ತೃಣಸುಂದರಿಯ ಮೂಗುತಿಯ ಮುತ್ತುಪನಿಯಂತೆ
ಮಿರುಮಿರುಗಿ ಮೆರೆವ ಹಿಮಬಿಂದುವುಂ.

ಎನ್ನುವ ವಿಶ್ವಭಾವದ ಕವಿಗೆ, "ಮಲೆಗಳಲ್ಲಿ ಮದುಮಗಳು" ಕಾದಂಬರಿಯ ಮೊದಲಲ್ಲಿ ಹೇಳಿರುವಂತೆ-

ಇಲ್ಲಿ

ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಃಕಶ್ಚಿತವಲ್ಲ!

ಇಲ್ಲಿ

ಯಾವುದಕ್ಕೂ ಮೊದಲಿಲ್ಲ;
ಯಾವುದಕ್ಕೂ ತುದಿಯಿಲ್ಲ;
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ;
ಕೊನೆ ಮುಟ್ಟುವುದೂ ಇಲ್ಲ!

ಇಲ್ಲಿ

ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ

ಎಲ್ಲಕ್ಕೂ ಇದೆ ಅರ್ಥ;
ಯಾವುದೂ ಅಲ್ಲ ವ್ಯರ್ಥ;
ನೀರೆಲ್ಲ ಊ ತೀರ್ಥ!

(ನಂದೊಂದ್ಮಾತು )

Most Read Articles

Kannada
English summary
Kuvempu, the noted kannada poet has written about his journey in a car from Bangalore to Shimoga driven by his son Purna Chandra Tejasvi. The event has been deftly described by Dr B R Satyanarayana from Bangalore. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X