ನ್ಯಾಷನಲ್ ಹೈ ವೇಸ್ ಅವಾಂತರ'ಸ್ ಇನ್ ಇಂಡಿಯಾ

By ಮಹಾಂತ ವಕ್ಕುಂದ

ನನ್ನ ಬಾಲ್ಯದಿಂದಲೂ ನಾನು ಭಾರತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಆ ಬಾಲ್ಯದ ದಿನಗಳಲ್ಲಿ ನನ್ನ ಹುಟ್ಟೂರು ಬೆಳಗಾವಿಯಿಂದ ಬೇಸಿಗೆ ರಜೆಗಳಲ್ಲಿ ಅಜ್ಜಿ ತಾತನ ಮನೆಗೆ, ನಮ್ಮ ಹಳ್ಳಿಗೆ ಹೋಗಬೇಕಾದರೂ ನಾನು ನಮ್ಮ ಪರಿವಾರ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರಯಾಣ ಮಾಡುತ್ತಿದ್ದೆವು. 90ರ ದಶಕವದು - ಬೆಳಗಾವಿಯಿಂದ ರಾಣೇಬೆನ್ನೂರಿಗೆ ಬರಬೇಕಾದರೆ ಸರಕಾರಿ ಕೆಂಪು ಬಸ್ಸಿನಲ್ಲಿ ಕೇವಲ 200 ಕೀ.ಮೀ ಕ್ರಮಿಸಲು ಸುಮಾರು 7 ಘಂಟೆ ಪ್ರಯಾಣಿಸುತ್ತಿದ್ದೆವು. ಆಗ ಅದು ಕೇವಲ ದ್ವೀಪದ (2 ಲೇನ್ ) ರಸ್ತೆ. ಬಸ್ಸಿನ ಚಾಲಕ ಮುಂದಿರುವ ಮಂದಗತಿಯ ವಾಹನವನ್ನು ಹಿಂದೆ ಹಾಕಲಿಕ್ಕಾಗಿಯೇ 2-3 ನಿಮಿಷ ಕಾಯುವ ಪರಿಸ್ಥಿತಿ ಇತ್ತು. ಆತ ಎದುರಿನಿಂದ ಬರುವ ವಾಹನಗಳಿಗೂ ದಾರಿ ನೀಡಿ ನಂತರ ಮುಂದಿನ ವಾಹನಗಳನ್ನು ಓವರ್ ಟೆಕ್ ಮಾಡಬೇಕಿತ್ತು. ರಾತ್ರಿ ಚಾಲನೆಯಂತೋ ಇನ್ನೂ ದುಸ್ತರ. ಭಾರತದ ಅಂದಿನ ರಾಷ್ಟ್ರೀಯ ಹೆದ್ದಾರಿಗಳ ಅಂತಹ ಪರಿಸ್ಥಿತಿಯನ್ನು ಕಂಡು ಮೊದಲ ಬಾರಿಗೆ ಅವುಗಳ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಟ್ಟ ನಮ್ಮ ಮಾಜಿ ಪ್ರಧಾನಿ ಶ್ರೀ ಮಾನ್ ಅಟಲ್ ಬಿಹಾರಿ ವಾಜಪೇಯಿಯವರು ರಾಷ್ಟೀಯ ಹೆದ್ದಾರಿಗಳ ಚತುಷ್ಪತಿಕರಣಕ್ಕೆ ಮುನ್ನುಡಿ ಬರೆದರು. ಅಂತೆಯೇ ಅದೆಷ್ಟೋ ಹೆದ್ದಾರಿಗಳು ಅಭಿವೃದ್ಧಿಯಾದವು, ಅಭಿವೃದ್ಧಿಯಾಗುತ್ತಿವೆ. ಹೆದ್ದಾರಿಗಳು ದೇಶದ ನರ - ನಾಡಿಗಳು, ಅವುಗಳ ಅಭಿವೃದ್ದಿಯಿಲ್ಲದೆ ದೇಶದ ಅಭಿವೃದ್ಧಿ ಕಷ್ಟ ಎಂಬ ಸತ್ಯತೆ ಅರಿಯಲು ನಮಗೆ ಸ್ವಾತಂತ್ರ್ಯಾನಂತರ 50ಕ್ಕೂ ಅಧಿಕ ವರ್ಷಗಳು ಬೇಕಾದವು. ಅದನ್ನು ಸಾಕಾರಗೊಳಿಸಲು ವಾಜಪೇಯಿಯವರಂತಹ ಮಹಾನ್ ನಾಯಕರು ಬರಬೇಕಾಯಿತು.

ಅದೆಷ್ಟೋ ಮಹತ್ವಾಕಾಂಕ್ಷೆಗಳೊಂದಿಗೆ ಅಂದು ಆ ಮಹಾನುಭಾವರು ನಿರ್ಮಿಸಿದ್ದ ಆ ಎಲ್ಲ ಹೆದ್ದಾರಿಗಳ ಮೇಲೆ "ಪ್ರಧಾನ ಮಂತ್ರಿ ರಾಷ್ಟ್ರೀಯ ಚತುಷ್ಪಥ ಯೋಜನೆ" ಎಂಬ ನಾಮ ಫಲಕವಿತ್ತು. ಸ್ವಾಮಿ ವಿವೆಕಾನಂದರಂತೆ ಮುಗಿಲತ್ತ ಕೈ ಮಾಡಿ 'ಅದೋ ನೋಡು ನನ್ನ ಭಾರತ ಆಕಾಶದೆತ್ತರಕ್ಕೆ ಮಿನುಗುವುದಿದೆ' ಎಂಬಂತೆ ವಾಜಪೇಯಿಯವರು ಮುಗುಳ್ನಗೆಯಿಂದ ಕೈ ಎತ್ತಿ ತೋರಿಸುತ್ತಿದ್ದ ಅವರ ಭಾವಚಿತ್ರವೂ ಆ ಫಲಕದಲ್ಲಿತ್ತು. ಅಷ್ಟರಲ್ಲೇ 2004ರ ಲೋಕಸಭೆ ಚುನಾವಣೆ ಪ್ರಕಟವಾಯಿತು. ಊರಿಗೊಂದು ಜವಾಹರ್ ಲಾಲ್ ನೆಹರು ಕ್ರೀಡಾಂಗಣವಿದ್ದರೂ, ದೆಹಲಿಯಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾನವಿದ್ದರೂ ಕೂಡ ಅವುಗಳ ಬಗ್ಗೆ ಚಕಾರವೆತ್ತದೆ ಕೇವಲ ರಾಷ್ಟ್ರೀಯ ಹೆದ್ದಾರಿಗಳ ಮೇಲಿದ್ದ ವಾಜಪೇಯಿಯವರ ಭಾವಚಿತ್ರವುಳ್ಳ ನಾಮಫಲಕಗಳನ್ನು ಕೇಂದ್ರ ಚುನಾವಣಾ ಆಯೋಗ ಮುಚ್ಚಿ ಹಾಕಿತು. ಆಮೇಲೆ ಗೆದ್ದಿಲು ಕಟ್ಟಿದ ಹುತ್ತದೊಳಗೆ ನಾಗರ ಹಾವು ಸೇರಿಕೊಂಡ ಹಾಗೆ ಅದೇ ಹೆದ್ದಾರಿಗಳ ಮೇಲೆ UPA ಸರ್ಕಾರ ಆಡಳಿತ ನಡೆಸಿತು. ಇನ್ನೂ 2004-2014ರ ಅವಧಿಯಲ್ಲಿ UPA ಸರ್ಕಾರ ಮಾಡಿದ ಅಭಿವೃದ್ಧಿಕಾರ್ಯಗಳು, ಭ್ರಷ್ಟಾಚಾರಗಳು ನಮ್ಮ ದೇಶದ ಜನಕ್ಕೆ ಗೊತ್ತೇ ಇದೆ.

ಹೀಗೆ ಅದೆಷ್ಟೋ ಶ್ರಮ, ಅದೆಷ್ಟೋ ಹಣ, ಕಾಳಜಿ, ಕುಶಲತೆ ಸುರಿದು ನಿರ್ಮಿಸಿದ್ದ ಆ ಹೆದ್ದಾರಿಗಳ ಇಂದಿನ ಪರಿಸ್ಥಿತಿಯ ಒಂದು ವಿಶ್ಲೇಷಣೆ ಮಾಡ ಹೊರಟಿದ್ದೇನೆ . ಮೊನ್ನೆ ಅದೊಂದು ದಿನ ಕಾರು ಓಡಿಸಿಕೊಂಡು ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದೆ. ಸುಮಾರು 500 ಕಿಲೋ ಮೀಟರ್‌ಗಳ ದಾರಿಯದು. ಬೆಂಗಳೂರು ತಲುಪುವಷ್ಟರಲಿ ಒಟ್ಟು 9 ಟೋಲ್ ಗಳನ್ನು ದಾಟಬೇಕು. ಕಾರಿಗೆ ಇಷ್ಟು ಪ್ರಯಾಣಕ್ಕಾಗಿ ಕೊಡುವ ಟೋಲ್ ಹಣ ಒಟ್ಟು 525 ರೂಪಾಯಿಗಳು. ಈ ಹಣ ಹೆಚ್ಚು ಕಡಿಮೆ ಒಬ್ಬ ಪ್ರಯಾಣಿಕನ ಬಸ್ ಪ್ರಯಾಣ ದರಕ್ಕೆ ಸರಿ. ಆದರೆ ಭಾಗಶಃ ಯಾರು ಇಷ್ಟೊಂದು ಹಣ ತೆತ್ತರು ಹೊಟ್ಟೆ ಉರಿದುಕೊಳ್ಳುವುದಿಲ್ಲ, ಉರಿದುಕೊಂಡರು ತೋರಿಸಿಕೊಳ್ಳುವುದಿಲ್ಲ, ಯಾಕೆಂದರೆ ಒಂದು ಕಾಲಕ್ಕೆ ಸರಿಯಾದ ರಸ್ತೆಗಳನ್ನೇ ಕಾಣದ ನಾವು ಇಂದು ಚತುಷ್ಪಥ ರಸ್ತೆಗಳಲ್ಲಿ ಓಡಾಡುತ್ತಿದ್ದೇವೆ, express way, super fast ಕಾರಿಡಾರಗಳು ಏನೆಲ್ಲಾ ನಮ್ಮಲ್ಲಿವೆ ಎಂಬ ಹೆಮ್ಮೆ. 7 ಗಂಟೆಗೆ ನಾವು 200 ಕಿಲೋ ಮೀಟರ್ ತೆರಳಲು ಹೆಣಗಾಡುತ್ತಿದ್ದೆವು. ಆದರೆ ಈಗ ಅದೇ 7 ಗಂಟೆಟೆಗಳಲ್ಲಿ 500 ಕಿಲೋ ಮೀಟರ್ ಗೂ ಅಧಿಕ ಚಲಿಸುತ್ತೆವೆಂಬ ತೃಪ್ತಿ ಇರಬಹುದೇನೋ. ಆದರೆ ಅದೇ ಈ ಹೈ ವೆ ಟೋಲ್ ಗಳಲ್ಲಿ ಇಂದು ಎಲ್ಲಿಲ್ಲದ ಅಡ್ಜಸ್ಟ್ಮೆಂಟ್. ಭ್ರಷ್ಟತೆ ತಾಂಡವವಾಡುತ್ತಿದೆ ಎಂದರೆ ನಂಬುತ್ತೀರಾ ?. ಈ ಅನುಭವವನ್ನು ಕೇಳಿ

nitioanl highway

ಆ ದಿನ ಒಂದು ಟೋಲ್ ನಲ್ಲಿ ನಾನು ಕಾರಿಗೆ 55 ರುಪಾಯಿ ಕೊಡಬೇಕಾಗಿತ್ತು. ಚಿಲ್ಲರೆ ಇಲ್ಲದ ಕಾರಣ ನಾನು 60 ರುಪಾಯಿ ಕೊಟ್ಟೆ, ಆಗ ಟೋಲ್ ನಲ್ಲಿದ್ದ ಸಿಬ್ಬಂದಿ ನನಗೆ 5 ರುಪಾಯಿ ಕೊಡುವ ಬದಲು ಒಂದು ಬಿಸ್ಕೆಟ್ ಪ್ಯಾಕೆಟ್ ಕೊಟ್ಟ ನಾನು ಅದನ್ನು ಮರಳಿಸಿ ಅವನಿಗೆ 5 ರುಪಾಯಿ ಹಣ ಕೊಡುವಂತೆ ಕೇಳಿದಾಗ ಆತ ಅದೇನೇನೋ ಗೊಣಗಾಡಿಕೊಂಡು 5 ರುಪಾಯಿ ನೀಡಿದ. ಇದ್ಯಾವುದೋ ಸಣ್ಣ ವಿಷಯವೆಂಬಂತೆ ನಾನು ಜಾಸ್ತಿ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಮುಂದೆ ಸಾಗಿದೆ. ಸಾಗುತ್ತಾ ನಾನು ರಾಣೇಬೆನ್ನೂರು ಹರಿಹರ ಮಧ್ಯದಲ್ಲಿರುವ ಚಳಗೆರಿ ಟೋಲ್ ಗೆ ಬಂದು ತಲುಪಿದೆ, ಕಾರಿಗೆ ಏಕ ಮುಖ ಪ್ರಯಾಣ 95 ರುಪಾಯಿ ಎಂದು ಸೂಚಿಸಿತ್ತು. ನಾನು ಅಲ್ಲಿದ್ದ ಸಿಬ್ಬಂದಿಗೆ 100 ರುಪಾಯಿ ಕೊಟ್ಟೆ. ಅವನು ನನಗೆ 5 ರುಪಾಯಿ ಚಿಲ್ಲರೆ ನೀಡುವಂತೆ ಕೇಳಿದ, ನಾನು ಇಲ್ಲವೆಂದೆ. ಆಗ ಕಾಯ್ದಿತ್ತು ಆಶ್ಚರ್ಯ, ಆತಂಕ . ನಾನು ೫ ರುಪಾಯಿ ಚಿಲ್ಲರೆ ಇಲ್ಲವೆಂದಾಗ ಆ ಟೋಲ್ ನ ಸಿಬ್ಬಂದಿ ನಮ್ಮ ಉತ್ತರ ಕರ್ನಾಟಕದ ಭಾಷೆಯಲ್ಲಿ ನನ್ನನ್ನು ಕೇಳಿದ "5 ರುಪಾಯಿ ಚಿಲ್ಲರ ಇಲ್ಲ ಅಲ್ಲರಿ, ನಾ ಅರ್ಧ ಮುರಕೊಳ್ಳಲಿ ಏನ್ರಿ ?? ", ನನಗೆ ಅವನ ಪ್ರಶ್ನೆ ಸರಿಯಾಗಿ ಅರ್ಥವಾಗಲಿಲ್ಲ, ನಾನು ಇನ್ನೊಮ್ಮೆ ಏನದು ಅಂತ ಕೇಳಿದೆ, ಅದಕ್ಕವನು ನನಗೆ ಅರ್ಥವಾಗುವ ಭಾಷೆಯಲ್ಲಿ ವಿವರವಾಗಿ ಹೇಳಿದ " ಸಾಹೆಬರ್, ನಿಮ್ಮ ಕಡೆ ಚಿಲ್ಲರ್ ಇಲ್ಲ ಅಲ್ಲರಿ ಅದಕ ನಾ ಅರ್ಧ ಮುರಕೊಳ್ಳತೆನ್ರಿ, 50 ರುಪಾಯಿ ನೀವ್ ತೊಗೊಳ್ರಿ , ಇನ್ನ 50 ನಾ ಇಟ್ಕೊತೆನಿ, ಆದರ ಟಿಕೆಟ್ ಕೊಡೋದಿಲ್ಲ, ನೀವೇನ್ ತಲಿ ಕೆಡಸ್ಕೊ ಬ್ಯಾಡ್ರಿ ಮುಂದ ದಾರಿಯೊಳಗ ನಿಮ್ಮನ್ನ ಯಾರು ಕೆಳುದಿಲ್ಲ". ಅವನ ಮಾತು ಕೇಳಿ ಒಂದು ಕ್ಷಣ ಗಾಬರಿ, ಗಲಿ-ಬಿಲಿಗಳಾದರೂ ಸ್ವಲ್ಪ ನಿಧಾನಿಸಿ, ಅವನಿಗೆ ನನಗೆ ತಿಳಿದಷ್ಟು ಬುದ್ದಿವಾದ ಹೇಳಿ ಟಿಕೆಟ್ ಪಡೆದೆ. ಅಲ್ಲಿನ ಮೇಲ್ವಿಚಾರಕರಾದ ಸಂಜೀವ ಎಂಬಾತರಿಗೂ ಈ ವಿಷಯದ ಬಗ್ಗೆ ತಿಳಿಸಿ, ಈ ತರಹದ ಲೋಪಗಳಾಗದ ಹಾಗೆ ಎಚ್ಚರ ವಹಿಸಿರೆಂದು ವಿನಂತಿಸಿದೆ.

ಇದು ಚಳಗೆರಿ ಟೋಲ್ , ಮಹಾರಾಷ್ಟ್ರ ಮೂಲದ EAGLE INFRA INDIA LTD ಎನ್ನುವ ಕಂಪನಿ ಪ್ರಸಕ್ತ ವರ್ಷದ ಟೋಲ್ ಸಂಗ್ರಹಿಸುವ ಗುತ್ತಿಗೆಯನ್ನ 40 ಕೋಟಿ 58 ಲಕ್ಷ ರುಪಾಯಿಗೆ ಪಡೆದಿದೆ, ಹಾವೇರಿಯಿಂದ ಹರಿಹರದ ಮಧ್ಯೆ ಇರುವ 56 ಕಿ ಮೀ ಉದ್ದದ ಈ ರಸ್ತೆಯನ್ನ GAMMON INDIA LTD ಅನ್ನೋ ಕಂಪನಿ ಸುಮಾರು 196.65 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿತ್ತು. ಇನ್ನು ಗುತ್ತಿಗೆ ಪಡೆದ ಹಣ ಸರ್ಕಾರಕ್ಕೆ ಹೇಗೆ ಸಂದಾಯವಾಗುತ್ತದೋ , ಯಾವ ಆಧಾರದ ಮೇಲೆ ಎಷ್ಟು ವರ್ಷಗಳ ಕಾಲ ಈ ಟೋಲ್ ಗಳಲ್ಲಿ ಹಣ ಸಂಗ್ರಹಿಸಲಾಗುತ್ತದೋ ನನಗೆ ತಿಳಿಯದು. ಆದರೆ ಈ ವರ್ಷದ ಗುತ್ತಿಗೆ ಮೊತ್ತ ನೋಡಿದರೆ ನನ್ನ ಅನಿಸಿಕೆ ಪ್ರಕಾರ 4-5 ವರ್ಷಗಳಲ್ಲಿ ಟೋಲ್ ಸಂಗ್ರಹ ನಿಂತು ಹೋಗಬೆಕು. ಅದು ಹಾಗಿರಲಿ,

ಈ ಸನ್ನಿವೇಶದ ನಂತರ ಅಲ್ಲಿಂದ ದಾರಿಯುದ್ದಕ್ಕೂ ಹಲವು ಪ್ರಶ್ನೆಗಳು ನನ್ನನ್ನು ಕಾಡತೊಡಗಿದವು. ಎಲ್ಲರೂ ನನ್ನಂತೆಯೇ ಯೋಚಿಸುತ್ತಾರೆಯೇ ? ರಸೀದಿ ಕೊಡದಿದ್ದರೆ ಪ್ರಶ್ನಿಸೋರು ಎಷ್ಟು ಜನ? ಈ ತರಹ ಹಣ ಉಳಿಸುವ ಅಥವಾ ಸರ್ಕಾರಕ್ಕೆ ಮಣ್ಣು ಮುಕ್ಕಿಸುವ ಅವಕಾಶ ಸಿಕ್ಕರೆ ಅದರ ಸದುಪಯೋಗ ಪಡೆದುಕೊಳ್ಳುವವರು ಎಷ್ಟು ಜನ ? ಕಾರಿಗೆ 95 ರುಪಾಯಿ ಟೋಲ್ ಶುಲ್ಕವಾದರೆ ಲಾರಿ, ಬಸ್ಸುಗಳಿಗೆಷ್ಟು ? (ಅದು 315 ರುಪಾಯಿ ). ಹಾಗಾದರೆ ಅಲ್ಪ ಲಾಭಕ್ಕಾಗಿ ಸಮಾಜ ಮುಖಿಯಾಗಿ ಚಿಂತನೆ ಮಾಡದವರು ದುಡ್ಡು ಕೊಟ್ಟು ರಸೀದಿ ಕೆಳುತ್ತಾರಾ? ಅಲ್ಪ ಲಾಭಕ್ಕಾಗಿ ನೂರೋ, ನೂರೈವತ್ತೋ ತೊಗೊಂಡು ಲಾರಿ ಬಸ್ಸುಗಳನ್ನು ಹಾಗೆಯೇ ಬಿಟ್ಟು ಬಿಡುತ್ತಾರಾ ? ಹಾಗಾದರೆ ತಿಂಗಳ ಮಟ್ಟಿಗೆ ಅಡ್ಜಸ್ಟ್ ಮಾಡಿಕೊಂಡಿರಬಹುದಾದ ಜನ ಎಷ್ಟು ? ಇತ್ಯಾದಿ ಇತ್ಯಾದಿ

ಸರ್ವೇ ಒಂದರ ಪ್ರಕಾರ ದಿನ ನಿತ್ಯ ಈ ಟೋಲ್ ಗಳ ಮೂಲಕ ಸಾವಿರಾರು ವಾಹನಗಳು ಓಡಾಡುತ್ತವೆ. ಒಂದು ಟೋಲ್ ನ ಮೂಲಕ ದಾಟಿ ಹೋಗುವ ಸರಾಸರಿ ವಾಹನಗಳ ಸಂಖ್ಯೆ ಅಂದಾಜು ೧೫-೨೦ ಸಾವಿರ. ಇವುಗಳಲ್ಲಿ ಕಾಲು ಭಾಗ ವಾಹನಗಳಿಗೆ ಟಿಕೆಟ್ ನೀಡದೆ ಇದ್ದರೂ ಸುಮಾರು ೧೦ ಲಕ್ಷ ರೂಪಾಯಿಗಳಷ್ಟು ನಷ್ಟವಾಗುತ್ತದೆ, ಅದೂ ಒಂದೇ ಒಂದು ಟೋಲ್ ನಿಂದ, ಹಾಗಾದರೆ ಭಾರತದ ಉದ್ದಗಲಕ್ಕೂ ಇರುವ ಸಾವಿರಾರು ಟೋಲ್ ಗಳಿಂದ ದಿನ ನಿತ್ಯ ಭಾರತ ಸರ್ಕಾರಕ್ಕೆ ಅಥವಾ ಸಾಮಾನ್ಯ ಪ್ರಜೆಗೆ ಆಗುವ ನಷ್ಟ ಅದೆಷ್ಟು ಕೋಟಿ ಎಂದು ಊಹಿಸಬಹುದೇ ? ಒಂದು ಕ್ಷಣಕ್ಕೆ ಮೈ ಜುಮ್ಮೆನ್ನಿಸಿತ್ತು. ಆ ಕ್ಷಣ ಇದೊಂದು 'ಸರಕಾರೀ ಮಾಫಿಯಾ' ಅಂದುಕೊಳ್ಳದೆ ಬೇರೆ ಕಲ್ಪನೆಯೇ ಬರಲಿಲ್ಲ . ಭವ್ಯ ಭಾರತದ ಪ್ರಜೆಯಾಗಿ ಎಲ್ಲ ಒಳ್ಳೆಯ ಕೆಲಸವನ್ನು ಮೋದಿಯೇ ಮಾಡಬೇಕು, ನಾನು ನನ್ನ ಜವಾಬ್ದಾರಿಯನ್ನು ಮರೆಯಬೇಕೆಂಬ ಅದೆಷ್ಟೋ ಜನರ ಕಲ್ಪನೆ ನೆನಪಾಯಿತು. ಆದರೆ ನಾನು ಮೋದಿಯವರ ಹೆಗಲ ಮೇಲೆ ಇನ್ನೊಂದು ಭಾರ ಹೆರುವ ಮೊದಲು ಮನೆಗೆ ಬಂದ ತಕ್ಷಣ ತುರ್ತಾಗಿ WWW.NHAI.ORG ಗೆ ಲಾಗಿನ್ ಆಗಿ ನನ್ನ ದೂರು ದಾಖಲಿಸಿದೆ. ಆದರೆ ಇಂದಿಗೂ ಯಾವ ಪ್ರತಿಕ್ರಿಯೆ ಸಿಗಲಿಲ್ಲ. ನಾನು ಇನ್ನೂ ಕಾಯುತ್ತಿದ್ದೇನೆ, ಸಂಭಂದ ಪಟ್ಟವರು ಇದನ್ನು ಗಮನಿಸಿ ಈ ಸಮಸ್ಯೆಯನ್ನು ಪರಿಹರಿಸುತ್ತಾರೆಂಬ ಅಪೇಕ್ಷೆ ನನ್ನದು. ಆ ಅಪೇಕ್ಷೆಯೊಂದಿಗೆ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ಈ ತರಹದ ಲೋಪಗಳನ್ನು ಪ್ರಶ್ನಿಸುವಂತಾಗಲಿ ಎಂಬ ಒಂದು ಚಿಕ್ಕ ಸ್ವಾರ್ಥ ಕೂಡ ಇದೆ.

ನಮ್ಮಲ್ಲಿ ಪ್ರಶ್ನೆ ಕೇಳುವ ಮನೋಭಾವ ಮೂಡುವವರೆಗೂ ನಮ್ಮ ಜನರೇ ನಮ್ಮನ್ನು ಲೂಟಿ ಮಾಡುತ್ತಾರೆ. ಹಗಲಲ್ಲೇ ದರೋಡೆ ಮಾಡುತ್ತಾರೆ ಎಂಬ ಅನಿಸಿಕೆ ಮತ್ತೊಮ್ಮೆ ಖಚಿತವಾಯಿತು. ಆದರೆ ಅದನ್ನು ಹೋಗಲಾಡಿಸಲು ನಮ್ಮ ನಿಮ್ಮೆಲ್ಲರ ಪರಿಶ್ರಮವು ಬೇಕು. ನನ್ನ ಅನುಭವ ಹಾಗು ಅಭಿಪ್ರಾಯವನ್ನು ಇಲ್ಲಿ ಬರೆದಿದ್ದೇನೆ. ತ್ವರಿತವಾಗಿ ಭವ್ಯ ಭಾರತದ ನಿರ್ಮಾಣ ಯಾರಿಂದಲೂ ಸಾಧ್ಯವಿಲ್ಲ, ಆದರೆ ಈ ತರಹದ ಲೋಪಗಳನ್ನು ಗಮನಿಸಿ ಅವುಗಳನ್ನು ಸರಿ ಪಡಿಸುವಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ನಮ್ಮ ಪ್ರಯತ್ನವನ್ನೂ ಮಾಡೋಣ. ಮೋದಿ ಸರ್ಕಾರ ಭವಿಷ್ಯಕ್ಕೊಂದು ಸುಧಾರಿತ ಭಾರತ ನಿರ್ಮಾಣ ಮಾಡಲಿ ಅದಕ್ಕೆ ನಮ್ಮ ಶ್ರಮವೂ ಇರಲಿ. ಸಾಧ್ಯವಾದಲ್ಲಿ ಸಂಭಂಧಪಟ್ಟವರೆನಾದರೂ ಈ ತರಹದ ಸಮಸ್ಸೆಯ ಬಗ್ಗೆ ಗಮನಿಸಿದ್ದರೆ ಅದರ ಪರಿಹಾರಕ್ಕೆ ಪ್ರಯತ್ನಿಸಿ ಎಂಬ ಒಂದು ಸಣ್ಣ ಕೋರಿಕೆ ನನ್ನದು. ಹೊಸ ಸರ್ಕಾರ ಬದಲಾದ ಭಾರತ ನಿರ್ಮಾಣ ಮಾಡಲಿ. ಇಲ್ಲಿರುವ ಸಾಮಾನ್ಯ ಪ್ರಜೆಗಳಾದ ನಾವು ನಮ್ಮ ಜವಾಬ್ದಾರಿ ನಿಭಾಯಿಸಿ ಆ ನವ ಭಾರತ ನಿರ್ಮಾಣಕ್ಕೆ ನಮ್ಮ ಕೈಲಾದ ಸಹಾಯ ಮಾಡೋಣ.

ಧನ್ಯವಾದಗಳೊಂದಿಗೆ
ಮಹಾಂತ ವಕ್ಕುಂದ

Most Read Articles

Kannada
English summary
An Article about National Highway written by Mahant Vakkund
Story first published: Friday, September 12, 2014, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X