ಸರ್ವೀಸ್ ಸೆಂಟರ್‌ಗೆ ಬಂಪರ್ ರಿಪೇರಿಗೆಂದು ಕೊಟ್ಟ ಕಾರು ಭಸ್ಮ!

By Nagaraja

ಉತ್ತಮ ನಿರ್ವಹಣೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿರಂತರ ಅವಧಿಯಲ್ಲಿ ನಿಮ್ಮ ಕಾರನ್ನು ಸರ್ವೀಸ್ ಮಾಡಿಸಿಕೊಳ್ಳಬೇಕು ಎಂಬುದನ್ನು ಎಲ್ಲ ವಾಹನ ತಯಾರಕ ಸಂಸ್ಥೆಗಳು ಗ್ರಾಹಕರಿಗೆ ನೀಡುವ ಮ್ಯಾನುವಲ್ ಪುಸ್ತಕದಲ್ಲಿ ಉಲ್ಲೇಖಿಸಿರುತ್ತಾರೆ.

ಆದರೆ ಅದೊಂದು ದಿನ ಸರ್ವೀಸ್‌ಗೆಂದು ಸರ್ವೀಸ್ ಸೆಂಟರ್‌ಗೆ ಕಳುಹಿಸಿಕೊಟ್ಟ ನಿಮ್ಮ ಅಚ್ಚುಮೆಚ್ಚಿನ ಕಾರು ಭಸ್ಮವಾಗಿದೆಯೆಂಬ ಕರೆ ಬಂದರೆ ಹೇಗಾಗಬಹುದು? ಹೌದು, ಇಂತಹದೊಂದು ದುರ್ಗತಿ ಬೆಂಗಳೂರು ಮೂಲದ ವೆಂಕಟೇಶ್ ಎಂಬ ಕಾರು ಮಾಲಿಕರಿಗೆ ಎದುರಾಗಿದೆ.

ಏನಿದು ಘಟನೆ?
ಬೆಂಗಳೂರಿನಲ್ಲಿರುವ ಹ್ಯುಂಡೈನ ಜನಪ್ರಿಯ ಡೀಲರ್ ಬಳಿ ತಮ್ಮ 2009ರ ಹ್ಯುಂಡೈ ಐ20 ಮ್ಯಾಗ್ನಾ ಪೆಟ್ರೋಲ್ ಮಾದರಿಯನ್ನು ಬಂಪರ್ ರಿಪೇರಿ ಮಾಡಲೆಂದು ವೆಂಕಟೇಶ್ ಕಳುಹಿಸಿಕೊಟ್ಟಿದ್ದರು. ಆದರೆ ಅದೊಂದು ದಿನ ರಾತ್ರಿ ವೇಳೆಯಲ್ಲಿ ಸರ್ವಿಸ್ ಸೆಂಟರ್‌ನಿಂದ ತಮ್ಮ ಕಾರು ಬೆಂಕಿಗಾಹುತಿಯಾಗಿದೆಯೆಂಬ ಕರೆ ಬರಲಿದೆ ಎಂಬುದನ್ನು ಕನಸಲ್ಲಿ ಅಂದುಕೊಂಡಿರಲ್ಲ ಎಂದು ವಿವರಿಸುತ್ತಾರೆ.

hyundai i20

ಬೆಂಕಿ ಹೊತ್ತಿಕೊಂಡಿದ್ದಾದರೂ ಹೇಗೆ?
ಇದಕ್ಕೆ ಉತ್ತರ ಇನ್ನು ಸ್ಪಷ್ಟವಾಗಿಲ್ಲ. ಈ ಸಂಬಂಧ ಡೀಲರ್ ಅವರನ್ನು ಸಂಪರ್ಕಿಸಿದಾಗ ತಯಾರಕರಿಗೆ ಸೇರದ ಬಾಹ್ಯ ಸಂಸ್ಥೆಯಿಂದ ಫಾಗ್ ಲೈಟ್ ಲಗತ್ತಿಸಿರುವುದೇ ಸಮಸ್ಯೆಗೆ ಕಾರಣ ಎಂಬ ಉತ್ತರ ದೊರಕಿದೆ. ಆದರೆ ವೆಂಕಟೇಶ್ ಹೇಳುವ ಪ್ರಕಾರ ಸರ್ವೀಸ್ ಸೆಂಟರ್‌ನಲ್ಲಿ ಕಾರಿನ ಇಗ್ನಿಷನ್ ಆನ್ ಮಾಡಿಟ್ಟಿರುವುದೇ ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದಿದ್ದಾರೆ.

ಸಿಸಿಟಿವಿಯಲ್ಲಿ ಸೆರೆ
ಈ ಸಂಬಂಧ ಸಿಸಿಟಿವಿಯಲ್ಲಿ ದೃಶ್ಯ ಸೆರೆ ಹಿಡಿಯಲಾಗಿದ್ದರೂ ತಮಗಿದನ್ನು ಹಸ್ತಾಂತರಿಸಲು ಸರ್ವೀಸ್ ಸ್ಟೇಷನ್ ಅಧಿಕಾರಿಗಳು ನಿರಾಕರಿಸಿರುವುದಾಗಿ ವೆಂಕಟೇಶ್ ವಿವರಿಸುತ್ತಾರೆ.

ಅಜಾಗರೂಕತೆ
ಸರ್ವೀಸ್ ಸ್ಟೇಷನ್ ಅಧಿಕಾರಿಗಳು ಅಜಾಗರೂಕತೆ ತೋರಿರುವುದೇ ಇಂತಹದೊಂದು ಅನಾಹುತಕ್ಕೆ ಕಾರಣ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಅಷ್ಟೇ ಯಾಕೆ ಕಾರಿಗೆ ಬೆಂಕಿ ಹೊತ್ತಿಕೊಂಡರೂ ಕನಿಷ್ಠ ಪಕ್ಷ ಅಗ್ನಿ ಶಾಮಕ ದಳಕ್ಕೆ ಕರೆ ಮಾಡುವುದಾಗಲಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವುದಾಗಲಿ ಸರ್ವೀಸ್ ಸೆಂಟರ್ ಅಧಿಕಾರಿಗಳು ಮಾಡಿರಲಿಲ್ಲ. ಇದನ್ನು ತಾವೇ ಖುದ್ದಾಗಿ ಮಾಡಿರುವುದಾಗಿ ವೆಂಕಟೇಶ್ ವಿವರಿಸುತ್ತಾರೆ.

ವಿಮೆ ಸಂಸ್ಥೆಯಿಂದಲೂ ನಿರಾಕರಣೆ..
ಈ ಸಂಬಂಧ ವಿಮೆ ಸಂಸ್ಥೆಯನ್ನು ಸಂಪರ್ಕಿಸಿದಾಗ ವೆಚ್ಚ ಭರಿಸಲು ನಿರಾಕರಿಸಿರುವುದಾಗಿ ವೆಂಕಟೇಶ್ ತಿಳಿಸಿದ್ದಾರೆ. ಕಾರು ಸರ್ವೀಸ್ ಸ್ಟೇಷನ್‌ನಲ್ಲಿ ಘಟನೆ ನಡೆದಿರುವುದರಿಂದ ವೆಚ್ಚ ಭರಿಸಲು ಸಾಧ್ಯವಿಲ್ಲ. ಬಳಿಕ ಸರ್ವೀಸ್ ಸ್ಟೇಷನ್ ಬಳಿ ಇದೇ ಬೇಡಿಕೆ ವೆಂಕಟೇಶ್ ಮುಂದಿರಿಸಿದಾಗಲೂ ಇಂತಹ ಅಪಘಾತಗಳಿಗೆ ವಿಮೆ ಸೌಲಭ್ಯವಿಲ್ಲವೆಂಬ ಉತ್ತರ ದೊರಕಿರುವುದಾಗಿ ತಿಳಿಸಿದ್ದಾರೆ.

ಇಲ್ಲಿಗೆ ತಮ್ಮ ಹೋರಾಟವನ್ನು ನಿಲ್ಲಿಸದ ವೆಂಕಟೇಶ್ ಸರ್ವೀಸ್ ಸ್ಟೇಷನ್ ಬಳಿ ಕಾರನ್ನು ದುರಸ್ತಿ ಮಾಡಿಕೊಡುವಂತೆ ಬೇಡಿಕೆ ಇರಿಸಿಕೊಂಡಿದ್ದರು. ಇದಕ್ಕೂ ಒಲ್ಲದ ಅಧಿಕಾರಿಗಳು ದುರಸ್ತಿ ವೆಚ್ಚ ರೂಪದಲ್ಲಿ 2.5 ಲಕ್ಷ ರು. ಪಾವತಿಸುವಂತೆ ಬೇಡಿಕೆ ಇರಿಸಿದ್ದರು.

ಕೊನೆಗೂ ವಾದ ವಿವಾದದ ಬಳಿಕ 1.75 ಲಕ್ಷ ರು. ವೆಚ್ಚ ಭರಿಸುವಂತೆ ಸರ್ವೀಸ್ ಸ್ಟೇಷನ್ ವಿಭಾಗ ಕೊನೆಗೂ ಒಪ್ಪಿಕೊಂಡಿತ್ತು. ಆದರೆ ಉಳಿದ ವೆಚ್ಚವನ್ನು ವೆಂಕಟೇಶ್ ಅವರೇ ಭರಿಸುವಂತೆ ತಿಳಿಸಿದ್ದರಂತೆ! ತಮಗೆ ನ್ಯಾಯ ದೊರಕುವ ಎಲ್ಲ ನಿರೀಕ್ಷೆ ಕಳೆದುಕೊಂಡ ವೆಂಕಟೇಶ್ ಇದನ್ನು ಲಿಖಿತ ರೂಪದಲ್ಲಿ ಬರೆದು ಕೊಡುವಂತೆ ವಿನಂತಿ ಸಲ್ಲಿಸಿದರೂ ಆರಂಭದಲ್ಲಿ ಒಪ್ಪಿಗೆ ಸೂಚಿಸಿದ ಅಧಿಕಾರಿಗಳು ಬಳಿಕ ನಿರಾಕರಿಸಿರುವುದಾಗಿ ವಿವರಿಸಿದ್ದಾರೆ.

ರಾಜಕೀಯ ಪ್ರಭಾವ...
ಕಾರು ಡೀಲರ್‌ಗೆ ರಾಜಕೀಯ ಪ್ರಭಾವವೇ ತಮಗೆ ನ್ಯಾಯ ದೊರಕುವುದರಿಂದ ವಂಚಿತವಾಗಿಸಿದೆ ಎಂದು ವೆಂಕಟೇಶ್ ಆರೋಪಿಸಿದ್ದಾರೆ.

ಇದಕ್ಕೆಲ್ಲ ಯಾರು ಹೊಣೆ?
ಅಂತೂ ಕೊನೆಗೂ ಉದ್ಭವಿಸುವ ಪ್ರಶ್ನೆಯೆಂದರೆ,

  • ಹಾಗೊಂದು ವೇಳೆ ಕಾರಿನಲ್ಲಿ ವಾಹನ ತಯಾರಕ ಸಂಸ್ಥೆಗೆ ಸೇರದ ಬಾಹ್ಯ ಉಪಕರಣಗಳನ್ನು ಜೋಡಣೆ ಮಾಡಿದ್ದರೆ ಸರ್ವೀಸ್‌ಗಾಗಿ ಬಂದಾಗ ಯಾತಕ್ಕಾಗಿ ಸರ್ವೀಸ್ ಸ್ಟೇಷನ್‌ಗಳು ಅಂತಹ ಕಾರುಗಳನ್ನು ಸ್ವೀಕರಿಸುತ್ತವೆ?
  • ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ವೆಂಕಟೇಶ್ ಅವರು ತಮ್ಮ ಕಾರನ್ನು ಇದೇ ಸರ್ವೀಸ್ ಸ್ಟೇಷನ್‌ನಲ್ಲಿ ಸರ್ವೀಸ್ ಮಾಡಿಸುತ್ತಿರುವುದು. ಹಾಗಿರುವಾಗ ಈವಾಗ ಯಾಕೆ ಬಾಹ್ಯ ಫಾಗ್ ಲ್ಯಾಂಪ್ ಸರಿಯಾಗಿಲ್ಲ ಎಂಬ ಸಬೂಬು ನೀಡುತ್ತಿದೆ?
  • ಅಷ್ಟಕ್ಕೂ ವೆಂಕಟೇಶ್ ಅವರಿಗಾಗಿರುವ ಅನ್ಯಾಯ ಹಾಗೂ ನಷ್ಟಕ್ಕೆ ಬೆಲೆ ಕಟ್ಟುವವರಾದರೂ ಯಾರು? ಈ ಸಂಬಂಧ ಹ್ಯುಂಡೈ ಅಧಿಕೃತರಿಂದ ನ್ಯಾಯವನ್ನು ನಿರೀಕ್ಷಿಸಬಹುದೇ?

ಒಟ್ಟಿನಲ್ಲಿ ಈ ಎಲ್ಲ ಘಟನೆಗಳು ಇತರ ಕಾರು ಗ್ರಾಹಕರಲ್ಲೂ ಆಶ್ಚರ್ಯಯನ್ನುಂಟು ಮಾಡಿದೆ. ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

Most Read Articles

Kannada
English summary
Hyundai i120 car catches fire in service center at Bangalore
Story first published: Monday, November 24, 2014, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X