ಮಹೀಂದ್ರಾ ಕಂಪನಿಯ 18 ಸಾವಿರ ಹೊಸ ವಾಹನಗಳು ಮೂಲೆಗುಂಪಾಗಿದ್ದೇಕೆ?

Written By:

ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಹೊಸ ಕಾಯ್ದೆ ಅನುಷ್ಠಾನಗೊಳಿಸಿರುವ ಸುಪ್ರೀಂಕೋರ್ಟ್, ಬಿಎಸ್-3 ಎಂಜಿನ್ ಸಾಮರ್ಥ್ಯದ ಕಾರು ಮತ್ತು ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಹೀಗಾಗಿ ಹೊಸ ಕಾಯ್ದೆಯಿಂದ ಮಹೀಂದ್ರಾ ಸಂಸ್ಥೆಯ ಸುಮಾರು 18 ಸಾವಿರ ವಾಹನಗಳು ಉಪಯೋಗಕ್ಕೆ ಬಾರದಂತಾಗಿವೆ.

ಪರಿಸರಕ್ಕೆ ಧಕ್ಕೆ ಉಂಟು ಮಾಡುವ ಬಿಎಸ್-3 ಎಂಜಿನ್‌ ಸಾಮರ್ಥ್ಯದ ವಾಹನಗಳನ್ನು ಬಂದ್ ಮಾಡುವಂತೆ ಈ ಹಿಂದೆ ಖಡಕ್ ಸೂಚನೆ ನೀಡಿದ್ದ ಸುಪ್ರೀಂಕೋರ್ಟ್, ಕೇಂದ್ರಕ್ಕೆ ಸೂಕ್ತ ಕಾನೂನು ಜಾರಿಗೆ ತರುವಂತೆ ಸಲಹೆ
ನೀಡಿತ್ತು. ಅದರಂತೆ ಇದೀಗ ಹೊಸ ಕಾನೂನು ಜಾರಿಗೆ ಬಂದಿದ್ದು, ಬಿಎಸ್-3 ಸಾಮರ್ಥ್ಯದ ಹೊಸ ವಾಹನಗಳು ಬಂದ್ ಆಗಿವೆ.

'ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡರ್ಡ್' (Bharat stage emission standards) ಎಂಬುದು ಆಂತರಿಕ ದಹನಕಾರಿ ಎಂಜಿನ್ (internal combustion engine) ವಾತಾವರಣಕ್ಕೆ ಬಿಡುಗಡೆ ಮಾಡುವ ಮಾಲಿನ್ಯಕಾರಕ ಹೊಗೆ ನಿಯಂತ್ರಿಸಲು ಭಾರತ ಸರಕಾರವು ಹೊರತಂದಿರುವ ಕಾನೂನಾತ್ಮಕ ಮಾಪನವಾಗಿದೆ.

ಬಿಎಸ್-3 ಎಂಜಿನ್ ನಿಷೇಧಕ್ಕೂ ಮುನ್ನ ಸುಮಾರು 2 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಮಹೀಂದ್ರಾ ಸಂಸ್ಥೆ ಉತ್ಪಾದನೆ ಮಾಡಿತ್ತು. ಆದಾಗಿಯೂ ಮಾರ್ಚ್ 31ರ ಅಂತ್ಯಕ್ಕೆ ಇನ್ನು 18 ಸಾವಿರ ವಾಹನಗಳನ್ನು ಮಾರಾಟಗೊಳಿಸುವಲ್ಲಿ ವಿಫಲವಾಗಿತ್ತು.

ದೇಶಿಯ ಮಾರುಕಟ್ಟೆಯಲ್ಲಿ ತನ್ನದೇ ವೈಶಿಷ್ಟ್ಯತೆಗಳನ್ನು ಹೊಂದುವ ಮೂಲಕ ಮಧ್ಯಮ ವರ್ಗಗಳನ್ನು ಸೆಳೆದಿದ್ದ ಮಹೀಂದ್ರಾ ಸಂಸ್ಥೆಯು, ಕಳೆದ ವರ್ಷಕ್ಕಿಂತ ಶೇ.9ರಷ್ಟು ಹೆಚ್ಚುವರಿ ವಾಹನ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

ಇದೀಗ ಮಹೀಂದ್ರಾ ಸಂಸ್ಥೆಯ ಬಿಎಸ್-3 ಎಂಜಿನ್ ಉತ್ಪಾದಿತ ಸುಮಾರು 18 ಸಾವಿರ ವಾಹನಗಳು ಉಪಯೋಗಕ್ಕೆ ಬಾರದಂತಾಗಿದ್ದು, ಇದರಲ್ಲಿ ಬೃಹತ್ ಪ್ರಮಾಣದ ಬೈಕ್‌ಗಳು, ಕಾರುಗಳು ಮತ್ತು ಗೂಡ್ಸ್ ವಾಹನಗಳು ಸೇರಿವೆ.

ಆದ್ರೆ ಹೊಸ ತಂತ್ರಜ್ಞಾನ ಬಳಕೆಯ ಮೂಲಕ ಬಿಎಸ್-3 ವಾಹನಗಳನ್ನು ಬಿಎಸ್-4 ಎಂಜಿನ್ ವಾಹನಗಳನ್ನಾಗಿ ಮರುತಯಾರಿ ಮಾಡಬಹುದಾಗಿದೆ. ಇದು ತುಂಬಾ ದುಬಾರಿ ಪ್ರಕ್ರಿಯೆಯಾಗಿದ್ದು, ಹೆಚ್ಚುವರಿಯಾಗಿ ಪ್ರತಿ ವಾಹನಕ್ಕೆ ರೂ.5 ಸಾವಿರ ಖರ್ಚು ಮಾಡಬೇಕಾಗುತ್ತೆ.

ಒಂದು ವೇಳೆ ಹೊಸ ತಂತ್ರಜ್ಞಾನ ಬಳಕೆ ಮಾಡಿ ಬಿಸ್-4 ಎಂಜಿನ್‌ಗೆ ಬದಲಾಯಿಸಿದ್ರೆ ಮಹೀಂದ್ರಾ ವಾಹನಗಳ ಬೆಲೆ ಮತ್ತಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಗ್ರಾಹಕನ್ನು ಕಳೆದುಕೊಳ್ಳುವ ಭೀತಿಯಲ್ಲಿ ಮಹೀಂದ್ರಾ, ಹಳೆ ವಾಹನ ಕುರಿತು ಸದ್ಯದಲ್ಲೇ ಮಹತ್ವದ ನಿರ್ಧಾರ ತೆಗದುಕೊಳ್ಳಲಿದೆ.

 

 

ಬಿಎಸ್-3 ಎಂಜಿನ್ ವಾಹನಗಳ ನಿಷೇಧದಿಂದ ಮಹೀಂದ್ರಾ ಸಂಸ್ಥೆಗೆ ಅಷ್ಟೇ ಅಲ್ಲದೇ ನೂರಾರು ವಾಹನ ಉತ್ಪಾದನಾ ಸಂಸ್ಥೆಗಳಿಗೂ ಸಾಕಷ್ಟು ಹಾನಿಯಾಗಿದೆ. ಒಂದು ಅಂದಾಜು ಪ್ರಕಾರ 3 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎನ್ನಲಾಗುತ್ತಿದೆ.

ಇದಲ್ಲದೇ ಹೊಸ ಕಾನೂನು ಪ್ರಕಾರ ಇನ್ಮುಂದೆ ಬಿಎಸ್-4 ಸಾಮರ್ಥ್ಯದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ಸಾಮರ್ಥ್ಯದ ಕಾರು ಮತ್ತು ವಾಹನಗಳಿಗೆ ಇದು ಯಾವುದೇ ರೀತಿಯಲ್ಲೂ ಅನ್ವಯವಾಗುದಿಲ್ಲ.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ವರ್ಧನೆಯಾಗುತ್ತಿದ್ದು, ಮಿತಿ ಮೀರಿದ ವಾಯು ಮಾಲಿನ್ಯ ಸೃಷ್ಠಿಯಾಗುತ್ತಿದೆ. ಇದರಿಂದ ಸುಸ್ಥಿರ ಪರಿಸರಕ್ಕಾಗಿ ಕೇಂದ್ರ ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹೊಸ ಕಾಯ್ದೆಯನ್ನು ಜಾರಿಗೆ ಮಾಡಲಾಗಿದೆ.

ಹೊಸ ಕಾಯ್ದೆಯಿಂದ ನಿಗದಿತ ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ ಎನ್ನಲಾಗುತ್ತಿದ್ದು, ಇದಕ್ಕಾಗಿಯೇ ಹೊಸ ಕಾನೂನು ಜಾರಿ ತರಲಾಗಿದೆ. ಇದರಿಂದ ಬಿಎಸ್-3 ಎಂಜಿನ್ ಕಾರು ಮತ್ತು ಬೈಕ್‌ಗಳ ಖರೀದಿಗೆ ಬ್ರೇಕ್ ಬಿದ್ದಿದ್ದು, ಇನ್ನು ಖರೀದಿ ಮಾಡಿದ್ರೂ ಅವುಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ.

ಹೊಸ ಕಾಯ್ದೆ ಪ್ರಕಾರ ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್‌ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಆದೇಶ ನೀಡಲಾಗಿದೆ.

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‌ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ.
ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಯಾಗಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿದ್ದ ಲಕ್ಷಾಂತರ ಬಿಎಸ್-3 ಎಂಜಿನ್‌ ವಾಹನಗಳು ಮೂಲೆಗುಂಪಾಗಿರುವುದು ಮಾತ್ರ ನಿಜ.

Story first published: Monday, April 10, 2017, 17:40 [IST]
English summary
Mahindra and Mahindra is left with 18,000 unsold BS-III vehicle stock.
Please Wait while comments are loading...

Latest Photos