"ಪುಕ್ಕಟ್ಟೆ ಸಿಕ್ರೆ ನನಗೂ ಇರಲಿ, ನನ್ನ ಕುಟುಂಬಕ್ಕೂ ಇರಲಿ" ಅನ್ನೋ ಜನಕ್ಕೆ ಬಿಯರ್ ಪುಕ್ಕಟೆ ಸಿಕ್ತು !!

ಪುಕ್ಕಟ್ಟೆ ಸಿಕ್ಕಿದ್ರೆ ನನಗೂ ಇರಲಿ, ನನ್ನ ಕುಟುಂಬಕ್ಕೂ ಇರಲಿ ಎಂಬ ಗಾದೆಯಂತೆ ಸಾರ್ವಜನಿಕರು ಬಿಯರ್ ಬಾಟಲ್‍ಗಳನ್ನು ತುಂಬಿಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿದ್ದು ರಾಷ್ಟ್ರೀಯ ಹೆದ್ದಾರಿ-4 ನಂದಿಹಳ್ಳಿ ಬಳಿ. ಅಷ್ಟಕ್ಕೂ ಏನಿದು ಘಟನೆ ತಿಳಿಯಿರಿ.

Written By:

ಎಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ಅಪಘಾತ ಸಂಭವಿಸಿದಾಗ ಪ್ರತಿಯೊಬ್ಬರೂ ಅಪಘಾತದ ಬಗ್ಗೆ ಅನುಕಂಪ ಸೂಚಿಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಪದ್ಧತಿ ಮತ್ತು ಮನುಷತ್ವ ಕೂಡ. ಆದರೆ ಇಂದು ಬೆಳಗ್ಗೆ ನೆಡೆದ ಅಪಘಾತ ಸಂಭವಿಸಿದರೂ ಸಹ ಜನ ಖುಷಿಯಾಗಿ ಇದ್ರೂ, ಕೆಲ ಗ್ರಾಮಸ್ಥರು ಹಬ್ಬವನ್ನೇ ಮಾಡಿದರು.

ಏನಪ್ಪಾ, ಏನ್ ಏನೋ ಹೇಳ್ತ ಇದ್ದಾರೆ, ಅನ್ಕೊಂಡ್ರಾ !! ಮುಂದೆ ಓದಿ ನಿಮಗೇ ಎಲ್ಲ ತಿಳಿಯುತ್ತೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಿಯರ್ ಲಾರಿಯಿಂದ ಕೆಳಗೆಬಿದ್ದ ಬಿಯರ್ ಬಾಟಲ್`ಗಳನ್ನ ಆಯ್ದುಕೊಳ್ಳಲು ಜನ ಮುಗಿಬಿದ್ದ ಘಟನೆ ತುಮಕೂರಿನ ಕ್ಯಾತ್ಸಂದ್ರ ಬಳಿ ನಂದಿಹಳ್ಳಿ ಬಳಿ ನಡೆದಿದೆ.

ಯುಬಿ ಕಂಪೆನಿಗೆ ಸೇರಿದ ಮದ್ಯದ ಬಾಟಲ್‍ಗಳನ್ನು ತುಂಬಿಕೊಂಡು ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಅಪ್ಪಳಿಸಿದ ಪರಿಣಾಮ ಪಲ್ಟಿ ಹೊಡೆದಿದೆ.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ನಡೆದಿದ್ದು, ಲಾರಿ ಪಲ್ಟಿಯಾದ ಪರಿಣಾಮ ರಸ್ತೆ ಮೇಲೆ ಬಿಯರ್ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

ಈ ಸಂದರ್ಭ ಮುಗಿಬಿದ್ದ ಜನ ಒಡೆಯದ ಬಾಟಲುಗಳನ್ನ ಆಯ್ದುಕೊಂಡು ಹೋಗಿದ್ದು, ಬಿಯರ್ ಬಾಟಲಿ ತೆಗೆದುಕೊಂಡ ಹಲವರು ಅದನ್ನು ಅಲ್ಲಿಯೇ ಸೇವಿಸಿದರೆ, ಕೆಲ ಮಹಿಳೆಯರೂ ಕೂಡಾ ಬಿಯರ್ ಬಾಟಲಿ ಆಯ್ದುಕೊಳ್ಳಲು ಹಿಂದೆ ಬೀಳಲಿಲ್ಲ.

ಬಿಯರ್ ಬಾಟಲಿಗಳನ್ನು ಕೊಂಡೊಯ್ಯಲು ಹಲವರು ಮುಗಿಬಿದ್ದಿದ್ದು, ಇದರ ಪರಿಣಾಮ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಪ್ರಯಾಣಿಕರು ಮತ್ತು ವಾಹನ ಸವಾರರು ರಸ್ತೆಯಲ್ಲೇ ಕಾಲ ಕಳೆಯುವಂತಾಯಿತು ಎನ್ನಲಾಗಿದೆ.

ಅದೇ ವೇಳೆ ಸ್ಥಳಕ್ಕಾಗಮಿಸಿದ ಮಾಧ್ಯಮದವರು ಘಟನೆ ಚಿತ್ರೀಕರಿಸುತ್ತಿದ್ದಂತೆಯೇ `ಫೋಟೋ ತಗಿಬೇಡಿ ಸಾರ್, ಒಂದೇ ಬಾಟ್ಲು ತಗಂಡಿರೋದು" ಎಂದು ಬಾಟಲಿ ಮರೆಮಾಚುತ್ತಾ ಜಾಗ ಖಾಲಿ ಮಾಡಿದರು. ಕೆಲವು ಯುವಕರಂತೂ ತಮ್ಮಿಂದ ಸಾಧ್ಯವಾದಷ್ಟು ಬಿಯರ್ ಬಾಟಲಿಗಳನ್ನು ಎದೆಗವುಚಿಕೊಂಡು ಒಯ್ದರು.

ತುಮಕೂರಿನ ಕ್ಯಾತಸಂದ್ರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಟ್ಟಿದ್ದು, ನಂತರ ಕ್ರೇನ್ ಸಹಾಯದಿಂದ ಲಾರಿಯನ್ನು ಮೇಲೆತ್ತಿ 10 ಗಂಟೆ ಸುಮಾರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಲಾರಿಯಲ್ಲಿ ಸುಮಾರು 8 ಲಕ್ಷ ಮೌಲ್ಯದ ಮದ್ಯ ತುಂಬಿತ್ತು ಎನ್ನುವ ವರದಿಯಾಗಿದ್ದು, ಘಟನೆ ಇಂದಾಗಿ ಸುಮಾರು 5ರಿಂದ 6 ಲಕ್ಷ ಮೌಲ್ಯದ ಬಿಯರ್ ನಷ್ಟವಾಗಿದೆ. ಬಿಯರ್ ಲಾರಿ ಚಾಲಕನನ್ನ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Story first published: Wednesday, April 19, 2017, 16:59 [IST]
English summary
A beer truck crashes near Tumkur, Karnataka and bystanders help themselves with beer from the streets. Here’s the video.
Please Wait while comments are loading...

Latest Photos