ಬಜಾಜ್ ಸಾರಥ್ಯದಲ್ಲಿ ಹಸ್ಕ್ವಾರ್ನಾ ಬೈಕ್ಸ್ ಭಾರತಕ್ಕೆ ಎಂಟ್ರಿ

Written By:

ಕೆಟಿಎಂ ಅಧೀನತೆಯಲ್ಲಿರುವ ಸ್ವೀಡನ್‌ನ ದ್ವಿಚಕ್ರ ವಾಹನ ಸಂಸ್ಥೆ ಹಸ್ಕ್ವಾರ್ನಾ, 2017ನೇ ಸಾಲಿನ ಮೊದಲಾರ್ಧದಲ್ಲಿ ಭಾರತಕ್ಕೆ ಪ್ರವೇಶ ನೀಡಲು ಸಜ್ಜಾಗುತ್ತಿದೆ. ಇಲ್ಲಿ ಗಮನಾರ್ಹ ಅಂಶವೆಂದರೆ ಆಸ್ಟ್ರಿಯಾ ಮೂಲದ ಕೆಟಿಎಂ ಸಂಸ್ಥೆಯ ಒಡೆತನವನ್ನು ಬಜಾಜ್ ಆಟೋ ಹೊಂದಿದೆ.

ಯುರೋಪ್ ನ ಹೆಸರಾಂತ ಡರ್ಟ್ ಬೈಕ್ ಬ್ರ್ಯಾಂಡ್ ಆಗಿರುವ ಹಸ್ಕ್ವಾರ್ನಾ ಮೋಟಾರ್ ಸೈಕಲ್ಸ್ ಭಾರತದಲ್ಲೇ ಪುಣೆಯ ಸಮೀಪ ಚಕನ್ ಘಟಕದಲ್ಲಿ ಬೈಕ್ ನಿರ್ಮಿಸಿ ಇಲ್ಲಿಂದಲೇ ಜಾಗತಿಕ ಮಾರುಕಟ್ಟೆಗೂ ರವಾನಿಸುವ ಮಹತ್ತರ ಯೋಜನೆಯನ್ನು ಹೊಂದಿದೆ.

2016 ನವೆಂಬರ್ ನಲ್ಲಿ ನಡೆದ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ಹಸ್ಕ್ವಾರ್ನಾ, ವಿಟ್ಪಿಲನ್ 401 ಹಾಗೂ ಸ್ವಾರ್ಟ್‌ಪಿಲನ್ 401 ಗಳೆಂಬ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿತ್ತು. ಇದನ್ನೇ ಭಾರತಕ್ಕೆ ತರುವ ಇರಾದೆಯನ್ನು ಹೊಂದಿದೆ.

ಬಲ್ಲ ಮೂಲಗಳ ಪ್ರಕಾರ ಹಸ್ಕ್ವಾರ್ನಾ ಬೈಕ್ ಗಳು ಬಜಾಜ್ ಆಟೋದ ಪ್ರೊಬೈಕಿಂಗ್ ಡೀಲರುಗಳ ಮುಖಾಂತರ ಮಾರಾಟವಾಗಲಿದೆ. ಸದ್ಯಕ್ಕೆ ಪ್ರೊ ಬೈಕಿಂಗ್ ಡೀಲರ್ ಶಿಪ್ ಮುಖಾಂತರ ಕವಾಸಕಿ 650 ಸಿಸಿ ಮತ್ತು ಕೆಟಿಎಂ ಬೈಕ್ ಗಳನ್ನು ಮಾರಾಟ ಮಾಡಲಾಗುತ್ತಿದೆ.

ಮಗದೊಂದು ಮೂಲದ ಪ್ರಕಾರ 2017ನೇ ಸಾಲಿನಿಂದ ಕವಾಸಕಿ ತನ್ನದೇ ಆದ ಸ್ವತಂತ್ರ ಡೀಲರ್ ಶಿಪ್ ಮುಖಾಂತರ ಮಾರಾಟವನ್ನು ಆರಂಭಿಸಲಿದೆ. ಇದರಂತೆ ಪ್ರೊಬೈಕಿಂಗ್ ಡೀಲರ್ ನಲ್ಲಿ ಕವಾಸಕಿ ಸ್ಥಾನವನ್ನು ಹಸ್ಕ್ವಾರ್ನಾ ತುಂಬಲಿದೆ.

ಹಸ್ಕ್ವಾರ್ನಾ ಭಾರತದ ಪಾಲಿಗೆ ಹೊಸತನವೆನಿಸಿದ್ದಲ್ಲೂ, ಬಜಾಜ್-ಕೆಟಿಎಂ ಸಹಯೋಗದಲ್ಲಿ ಮಾರಾಟ ಆರಂಭಿಸಲು ದೊಡ್ಡ ಸಮಸ್ಯೆ ಆಗಲಾರದು. ಅಷ್ಟೇ ಯಾಕೆ ಕೆಟಿಎಂ 390 ಡ್ಯೂಕ್ ತಳಹದಿಯಲ್ಲಿ ವಿಟ್ಪಿಲನ್ 401 ಹಾಗೂ ಸ್ವಾರ್ಟ್‌ಪಿಲನ್ 401 ಬೈಕ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರೀಮಿಯಂ ಉತ್ಪನ್ನವಾಗಿರುವ ವಿಟ್ಪಿಲನ್ 401 ಹಾಗೂ ಸ್ವಾರ್ಟ್‌ಪಿಲನ್ 401, ಕೆಟಿಎಂ 390 ಡ್ಯೂಕ್ ಬೈಕ್ ಗಿಂತಲೂ ದುಬಾರಿಯೆನಿಸಲಿದೆ. ಇನ್ನು ಪುಣೆ ಘಟಕದಲ್ಲಿ ನಿರ್ಮಾಣವಾಗಲಿರುವುದರಿಂದ ಹೆಚ್ಚಿನ ಹೂಡಿಕೆಯ ಅಗತ್ಯವೂ ಇರುವುದಿಲ್ಲ.

ವಿಟ್ಪಿಲನ್ 401 ಒಂದು ಕೆಫೆರೇಸರ್ ಶೈಲಿಯ ಬೈಕ್ ಆಗಿದ್ದರೆ ಸ್ವಾರ್ಟ್‌ಪಿಲನ್ 401 ಸ್ಕ್ರ್ಯಾಂಬ್ಲರ್ ಶೈಲಿಯ ಬೈಕಾಗಿರಲಿದೆ. ಹಾಗೆಯೇ ವಿಟ್ಪಿಲನ್ 401 ಮಾದರಿಯು ಸ್ಟೀಲ್ ಅಲ್ಯೂಮಿನಿಯಂ ಎಕ್ಸಾಸ್ಟ್ ಮತ್ತು ಸ್ವಾರ್ಟ್‌ಪಿಲನ್ 401 ರೊಬೋಸ್ಟ್ ಪ್ರೊಟೆಕ್ಟರ್ ಗಿಟ್ಟಿಸಿಕೊಳ್ಳಲಿದೆ.

ವಿಟ್ಪಿಲನ್ 401 ಬೈಕ್ ನಲ್ಲಿ ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಹಾಗೂ ಸ್ಟ್ರೀಟ್ ಕೇಂದ್ರಿತ ಮೆಟ್ಜೆಲರ್ ಎಂ5 ಚಕ್ರಗಳು ಜೋಡಣೆಯಾಗಲಿದೆ. ಇನ್ನೊಂದೆಡೆ ಸ್ವಾರ್ಟ್‌ಪಿಲನ್ 401 ಮಾದರಿಯು ಆಫ್ ರೋಡ್ ಶೈಲಿಯ ಹ್ಯಾಂಡಲ್ ಬಾರ್ ಹಾಗೂ ಪೈರಲ್ಲಿ ಸ್ಕಾರ್ಪಿಯನ್ ರಾಲಿ ಎಸ್ ಆರ್ ಟಿ ಚಕ್ರಗಳು ಪ್ರಮುಖ ಆಕರ್ಷಣೆಯಾಗಲಿದೆ.

ಅಂದ ಹಾಗೆ ಈ ಎರಡು ಬೈಕ್ ಗಳು 9.5 ಲೀಟರ್ ಇಂಧನ ಟ್ಯಾಂಕ್ ಗಿಟ್ಟಿಸಿಕೊಳ್ಳಲಿದ್ದು, ಡಬ್ಲ್ಯುಪಿ ಸಸ್ಪೆನ್ಷನ್, ಸ್ಲಿಪರ್ ಕ್ಲಚ್, ಬಾಷ್ 9.11 ಎಂಬಿ ಟು ಚಾನೆಲ್ ಎಬಿಎಸ್ ವ್ಯವಸ್ಥೆಯು ಇರಲಿದೆ. ಇನ್ನುಳಿದಂತೆ ಸ್ಟೀಲ್ ಟ್ರೆಲಿಸ್ ಫ್ರೇಮ್ ಅನ್ನು ಕೆಟಿಎಂ 390 ಡ್ಯೂಕ್ ನಿಂದ ಆಮದು ಮಾಡಲಾಗಿದೆ.

ತಾಂತ್ರಿಕವಾಗಿ ಬಹಳಷ್ಟು ಮುಂದುವರಿದಿರುವ ವಿಟ್ಪಿಲನ್ 401 ಹಾಗೂ ಸ್ವಾರ್ಟ್‌ಪಿಲನ್ 401 ಬೈಕ್ ಗಳು ನೈಜ ಚಾಲನಾ ಅನುಭವವನ್ನು ನೀಡಲಿದೆ. ಅಲ್ಲದೆ ಇದರಲ್ಲಿರುವ 375 ಸಿಸಿ ಎಂಜಿನ್ 37 ಎನ್ ಎಂ ತಿರುಗುಬಲದಲ್ಲಿ 43 ಅಶ್ವಶಕ್ತಿಯನ್ನು ನೀಡಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

Read more on ಬೈಕ್ bike
English summary
Husqvarna Set To Rumble Into India Next Year — Here's What We Know
Please Wait while comments are loading...

Latest Photos