ಬೈಕ್ ಅಥವಾ ಕಾರು ಖರೀದಿ ಮಾಡೋ ಪ್ಲ್ಯಾನ್ ಇದೆಯಾ? ಹಾಗಿದ್ರೆ ಹುಷಾರ್ ಕಣ್ರೀ..!!

Written By:

ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಹೊಸ ಕಾಯ್ದೆ ಅನುಷ್ಠಾನಗೊಳಿಸಿರುವ ಸುಪ್ರೀಂಕೋರ್ಟ್, ಇನ್ಮುಂದೆ ಬಿಎಸ್-4 ಮೇಲ್ಪಟ್ಟ ಇಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ಆದೇಶ ಹೊರಡಿಸಿದ್ದು, ಬಿಎಸ್-3 ಸಾಮರ್ಥ್ಯದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ.

ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ವಾಹನಗಳನ್ನು ಹೊರತುಪಡಿಸಿ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಬಂದ್ ಆಗಿದೆ. ಆದ್ರೆ ಕೆಲವು ಬೈಕ್ ಮತ್ತು ಕಾರು ಮಾರಾಟಗಾರರು ಹಳೆಯ ಸ್ಟಾಕ್ ಮಾರಾಟ ಮಾಡುತ್ತಿರುವ ಬಗ್ಗೆ ವರದಿಗಳು ದಾಖಲಾಗಿವೆ.

ಸುಪ್ರೀಂಕೋರ್ಟ್‌ನ ಹೊಸ ಕಾಯ್ದೆಯಿಂದಾಗಿ ಸುಮಾರು 20 ಸಾವಿರ ಹೊಸ ಕಾರುಗಳು, 7.50 ಲಕ್ಷ ಬೈಕ್‌ಗಳು ಮತ್ತು 47 ಸಾವಿರ ಮೂರು ಚಕ್ರದ ವಾಹನಗಳು ಈಗಾಗಲೇ ಮೂಲೆಗುಂಪಾಗಲಿವೆ. ಇವುಗಳನ್ನು ಯಾವುದೇ ಕಾರಣಕ್ಕೂ ಆಫರ್‌ಗಳ ಮೂಲಕ ಮಾರಾಟ ಮಾಡದಂತೆ ಸುಪ್ರೀಂ ಖಡಕ್ ಸೂಚನೆ ನೀಡಿದೆ.

ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಕೆಲಕಡೆ ಕದ್ದುಮುಚ್ಚಿ ಬಿಎಸ್-3 ವಾಹನಗಳನ್ನು ಮಾರಾಟ ಮಾಡುತ್ತಿರುವುದರ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ.

ವಿವಾದದಲ್ಲಿ ಕೆಟಿಎಂ ಡ್ಯೂಕ್ 390
ಇನ್ನು ಕೆಲ ವರದಿಗಳ ಪ್ರಕಾರ ಬಿಎಸ್-3 ಎಂಜಿನ್ ಸಾಮರ್ಥ್ಯದ ಕೆಟಿಎಂ ಡ್ಯೂಕ್ 390 ಬೈಕ್‌‌ಗಳನ್ನು ಕದ್ದುಮಚ್ಚಿ ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿಗಳು ಕೇಳಿಬಂದಿವೆ. ಆದ್ರೆ ಮಾರಾಟಗಾರರನ್ನು ಖುದ್ದು ವಿಚಾರಣೆ ಮಾಡಿದಾಗ ತಾವು ಈಗಾಗಲೇ ಹಳೆಯ ಸ್ಟಾಕ್‌ನ್ನು ಸಂಪೂರ್ಣ ತೆರವು ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಒಂದು ವೇಳೆ ನೀವು ಆಫರ್‌ಗಳಿಗೆ ಮೋಸ ಹೋಗಿ ಬಿಎಸ್-3 ವಾಹನಗಳನ್ನು ಖರೀದಿ ಮಾಡಿದ್ರೆ ಅದು ನಿಮಗೆ ತೊಂದರೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಇಂತಹ ವಾಹನ ಖರೀದಿ ಮಾಡಲೇಬೇಡಿ.

ಕೇವಲ ಬಿಎಸ್-IV ಎಂಜಿನ್ ಕಡ್ಡಾಯ ಮಾತ್ರವಲ್ಲದೇ AHO(ಅಟೋಮೆಟಿಕ್ ಹೆಡ್‌ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‌ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ. ಹೀಗಾಗಿ ಖದೀರಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ಈಗಾಗಲೇ ವಿವಿಧ ದೇಶಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದ್ದು, ಹಗಲು ವೇಳೆಯೂ ಬೈಕ್ ಚಾಲನೆ ವೇಳೆ ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್ ಮಾಡಿಕೊಂಡೇ ಇರಬೇಕಿರುವುದು ಕಡ್ಡಾಯವಾಗಿದೆ. ಜೊತೆಗೆ ಬಿಎಸ್-IV ಎಂಜಿನ್ ಹೊಂದಿರುವುದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ.

ಈಗಾಗಲೇ ಎಲ್ಲ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ರೂಲ್ಸ್ ಅಳವಡಿಸಿಕೊಳ್ಳುವ ಮೂಲಕ ಬಿಎಸ್-IV ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿವೆ.

ಆದ್ರೆ ಹಿಂದೆ ಭಾರೀ ಪ್ರಮಾಣದ ಸ್ಟಾಕ್ ಮಾಡಿಕೊಂಡಿರುವ ಕೆಲವು ಉತ್ಪಾದಕರು ಕೆಲಕಡೆ ಕದ್ದುಮುಚ್ಚಿ ಗ್ರಾಹಕರಿಗೆ ಆಫರ್ ನೀಡುವ ಮೂಲಕ ಬಿಎಸ್-3 ಎಂಜಿನ್ ವಾಹನಗಳನ್ನೇ ಮಾರಾಟ ಮಾಡುತ್ತಿದ್ದು, ಖರೀದಿಗೂ ಮುನ್ನ ಹುಷಾರ್ ಆಗಿರಿ.

ಒಂದು ವೇಳೆ ನೀವು ಹೊಸ ಬೈಕ್ ಮತ್ತು ಕಾರು ಖರೀದಿಸುವ ಯೋಚನೆಯಲ್ಲಿದ್ದರೆ ಮೊದಲು ಹೊಸ ಕಾಯ್ದೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳಿ. ಡಿಸ್ಕೌಂಟ್ ಆಸೆಗೆ ಮುಗಿಬಿದ್ದು ಹಳೆ ಎಂಜಿನ್ ಮಾದರಿಯ ವಾಹನಗಳನ್ನ ಖರೀದಿ ಮಾಡಿ ಫಜೀತಿಗೆ ಸಿಲುಕಬೇಡಿ.

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ರೂಲ್ಸ್ ಜಾರಿಗೆ ತರುತ್ತಿದ್ದು, ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಗೊತ್ತಿಲ್ಲ. ಆದ್ರೆ ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡ ಲಕ್ಷಾಂತರ ಬಿಎಸ್-3 ಎಂಜಿನ್‌ ವಾಹನಗಳು ಮೂಲೆಗುಂಪಾಗಿದ್ದು ಮಾತ್ರ ಗ್ಯಾರೆಂಟಿ.

ವರ್ಷದಿಂದ ವರ್ಷಕ್ಕೆ ದೇಶದಲ್ಲಿ ವಾಹನಗಳ ಸಂಖ್ಯೆಯು ಗಣನೀಯವಾಗಿ ವರ್ಧನೆಯಾಗುತ್ತಿದ್ದು, ಮಿತಿ ಮೀರಿದ ವಾಯು ಮಾಲಿನ್ಯ ಸೃಷ್ಠಿಯಾಗುತ್ತಿದೆ. ಇದರಿಂದ ಸುಸ್ಥಿರ ಪರಿಸರಕ್ಕೆ ಮುಂದಾಗಿರುವ ಕೇಂದ್ರ ಪರಿಸರ ಮತ್ತು ಅರಣ್ಯಗಳ ಸಚಿವಾಲಯದ ಅಡಿಯಲ್ಲಿ ಈ ಹೊಸ ಕಾಯ್ದೆಯನ್ನು ಜಾರಿಗೆ ಮಾಡಲಾಗಿದೆ.

2000ನೇ ಇಸವಿಯಲ್ಲಿ ಭಾರತ್ ಸ್ಟೇಜ್ ವಾಹನ ಹೊಗೆ ಮಾಲಿನ್ಯ ನಿಯಂತ್ರಣವು ಮೊದಲ ಬಾರಿಗೆ ಜಾರಿಗೆ ಬಂದಿತ್ತು. ಟು ಸ್ಟ್ರೋಕ್ ಬೈಕ್ ಹಾಗೂ ಮಾರುತಿ 800 ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಇವೆಲ್ಲದರ ಭಾಗವಾಗಿದೆ.

ಓದುಗರಿಗೆ ಡ್ರೈವ್‌ಸ್ಪಾರ್ಕ್ ಸಲಹೆ
ವಾಹನ ಖರೀದಿಗೂ ಮುನ್ನ ಎಂಜಿನ್ ಮಾದರಿಗಳ ಬಗ್ಗೆ ಕುಲಂಕೂಶವಾಗಿ ತಿಳಿದುಕೊಳ್ಳಿ. ಯಾವುದೇ ಕಾರಣಕ್ಕೂ ಕಡಿಮೆ ಬೆಲೆಗೆ ನಿಷೇಧಿತ ವಾಹನಗಳನ್ನು ಖರೀದಿ ಮಾಡಿ ತೊಂದರೆ ಸಿಲುಕಬೇಡಿ. ಇನ್ನೊಂದು ಪ್ರಮುಖ ವಿಚಾರವೆಂದರೇ ವಾಹನ ಖರೀದಿಗೂ ಮುನ್ನ ತಜ್ಞರ ಸಲಹೆ ಪಡೆದು ಖರೀದಿ ಮಾಡುವುದು ಒಳಿತು.

 

Story first published: Friday, April 14, 2017, 17:44 [IST]
English summary
Please Beware of BS-3 Vehicles in Black Market. If Want Buy a van's Check it Before Every Aspects.
Please Wait while comments are loading...

Latest Photos