ಗ್ರಾಹಕರ ಕೈ ಸೇರಿದ ಅಥೆರ್ 450 ಎಲೆಕ್ಟ್ರಿಕ್ ಸ್ಮಾರ್ಟ್ ಸ್ಕೂಟರ್..

ನಮ್ಮ ಬೆಂಗಳೂರು ನಗರ ಮೂಲದ ಅಥೆರ್ ಎನರ್ಜಿ ಸಂಸ್ಥೆಯು ಕಳೆದ ಜೂನ್ ತಿಂಗಳಿನಲ್ಲಿ ತಮ್ಮ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಸಂಸ್ಥೆಯು ಈ ಸ್ಕೂಟರ್‍‍ಗಳನ್ನು ಖರೀದಿಸಿದ ಗ್ರಾಹಕರ ಕೈ ತಲುಪಿಸಿದೆ. ಅಥೆರ್ 340 ಸ್ಕೂಟರ್‍‍ನ ಬೆಲೆಯು ರೂ. 1.09 ಲಕ್ಷ ಮತ್ತು ಅಥೆರ್ 450 ಸ್ಕೂಟರ್ ರೂ. 1.24 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

ಆಯ್ಕೆ ಮಾಡಲಾದ ಗ್ರಾಹಕರನ್ನು ಬೆಂಗಳೂರಿನ ವೈಟ್‍‍ಫೀಲ್ಡ್ ನಲ್ಲಿರುವ ಎಥೆರ್ ಅಸೆಂಬ್ಲಿ ಯೂನಿಟ್‍‍ಗೆ ಆಹ್ವಾನಿಸಿ ಸಂಸ್ಥೆಯು ಗ್ರಾಹಕರ ಕೈಗೆ ಹೊಸ ಸ್ಕೂಟರ್‍‍ನ ಕೀಲಿಯನ್ನು ಹಸ್ತಾಂತರಿಸಿದ್ದಾರೆ. ಗ್ರಾಹಕರ ಕೈಗೆ ಕೀಲಿಯನ್ನು ಕೊಡುವುದಕ್ಕಿಂತ ಮುನ್ನಾ ಅಥೆರ್ ಸಂಸ್ಥೆಯು ಗ್ರಾಹಕರ ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಒದಗಿಸಲಾಗಿದೆ ಮತ್ತು ನಗರದ ಇನ್ನಿತರೆ ಪ್ರದೇಶದಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ಇನ್ಸ್ಟಾಲ್ ಮಾಡಲಾಗಿದೆ.

ಇಷ್ಟೆ ಅಲ್ಲದೇ ಗ್ರಾಹಕರು ಅಥೆರ್ 450 ಸ್ಮಾರ್ಟ್ ಸ್ಕೂಟರ್ ಅನ್ನು ಖರೀದಿಸಲು ಇಚ್ಛಿಸುವಲ್ಲಿ ಸಂಸ್ಥೆಯ ಅಧಿಕೃತ ವೆಬ್‍‍ಸೈಟ್‍‍ಗೆ ಭೇಟಿನೀಡಬೇಕಿದ್ದು, ಜೊತೆಗೆ ವೆಬ್‍ಸೈಟ್‍‍ನಲ್ಲಿ ಟೆಸ್ಟ್ ರೈಡಿಂಗ್‍ಗಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.

ಸಂಸ್ಥೆಯು ಅಥೆರ್ ಒನ್ ಎಂಬ ಚಂದಾದಾರರ ಯೋಜನೆಯನ್ನು ಶುರುಮಾಡಿದ್ದು, ಈ ಯೋಜನೆಯು ಗ್ರಾಹಕರ ಡೆಟಾ ಬೆಲೆ, ನಿವಾಸದಲ್ಲಿ ಅಥವಾ ಹೊರಗಡೆಯಾಗುವ ಚಾರ್ಜಿಂಗ್ ವೆಚ್ಚ, ಸ್ಕೂಟರ್‍‍ನ ನಿಯತಕಾಲಿಕ ಡೋರ್‍‍ಸ್ಟೆಪ್ ಸೇವೆ ಮತ್ತು ಸಾಮಾನ್ಯ ಬಿಡಿಭಾಗಗಳ ವೆಚ್ಚವು ಒಳಗೊಂಡಿರುತ್ತದೆ.

ಅಥೆರ್ ಎನರ್ಜಿ ಸಂಸ್ಥೆಯು ಬಿಡುಗಡೆ ಮಾಡಿರುವ 450 ಎಲೆಕ್ಟ್ರಿಕ್ ಸ್ಕೂಟರ್ ನೋಡಲು ಒಂದೇ ರೀತಿಯಲ್ಲಿದ್ದರೂ ತಾಂತ್ರಿಕ ವಿಚಾರವಾಗಿ ವಿಭಿನ್ನತೆ ಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ರೂಸ್‌ಲೆಸ್ ಡಿಸಿ ಮೋಟಾರ್(ಬಿಎಲ್‌ಡಿಸಿ) ಬಳಕೆ ಮಾಡಿದೆ.

ಹೊಸ ಸ್ಕೂಟರ್‌‍‍ನಲ್ಲಿ ಜೋಡಿಸಲಾಗಿರುವ ಬ್ಯಾಟರಿ ಮ್ಯಾನೆಜ್‌ಮೆಂಟ್ ಸಿಸ್ಟಂ ಮೇಲೆ ಬರೋಬ್ಬರಿ 3 ವರ್ಷಗಳ ವಾರಂಟಿ ಸಹ ನೀಡಲಾಗಿದ್ದು, ಎಂಜಿನ್ ಪರ್ಫಾಮೆನ್ಸ್ ವಿಚಾರ ಬಂದಲ್ಲಿ 180 ಸಿಸಿ ಬೈಕ್ ಮಾದರಿಯಲ್ಲೇ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಹ ರೈಡಿಂಗ್ ಅನುಭವ ನೀಡಲಿವೆ.

ಸ್ಕೂಟರ್ ಪರ್ಫಾಮೆನ್ಸ್

ಅಥೆರ್ 340 ಎಲೆಕ್ಟ್ರಿಕ್ ಸ್ಕೂಟರ್‌ಗಳು 20ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 450 ಸ್ಕೂಟರ್ ಮಾದರಿಗಳು 20.5-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ. ಜೊತೆಗೆ ಗಂಟೆಗೆ 70 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ 340 ಸ್ಕೂಟರ್‌ಗಳು ಕೇವಲ 5.1 ಸೇಕೆಂಡುಗಳಲ್ಲಿ 40 ಕಿ.ಮಿ ವೇಗ ಪಡೆದುಕೊಂಡರೇ, 450 ಸ್ಕೂಟರ್‌ಗಳು 3.9 ಸೇಕೆಂಡುಗಳಲ್ಲಿ 40 ಕಿ.ಮಿ ವೇಗದಲ್ಲಿ ಚಲಿಸಬಲ್ಲವು.

ಬ್ಯಾಟರಿ ಸಾಮರ್ಥ್ಯ

ಒಂದು ಬಾರಿ ಪೂರ್ಣಪ್ರಮಾಣ ಬ್ಯಾಟರಿ ಚಾರ್ಜ್ ಮಾಡಿದಲ್ಲಿ 340 ಸ್ಕೂಟರ್‌ಗಳು 60 ಕಿ.ಮೀ ಮೈಲೇಜ್ ನೀಡಿದಲ್ಲಿ, 450 ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 75 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇನ್‌ಬಿಲ್ಟ್ ರಿವರ್ಸ್ ಅಸಿಸ್ಟ್ ಫಿಚರ್ಸ್ ನೀಡಲಾಗಿದ್ದು, ಹಿಮ್ಮುಖವಾಗಿ ಪ್ರತಿ ಗಂಟೆಗೆ 5 ಕಿ.ಮಿ ವೇಗದಲ್ಲಿ ಚಲಿಸುವ ಗುಣವಿಶೇಷತೆ ಹೊಂದಿದೆ. ಇದು ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಸ್ಕೂಟರ್‌ಗಳನ್ನು ಹೊರತೆಗೆಯಲು ಹೆಚ್ಚು ಅನುಕೂಲಕರವಾಗಲಿದೆ.

ಬೈಕಿನ ಹೊರ ವೈಶಿಷ್ಟ್ಯತೆಗಳು ಅಥೆರ್ 450 ಸ್ಕೂಟರ್‍‍ನಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ನ್ಯಾವಿಗೆಷನ್, ಸ್ಮಾರ್ಟ್ ಫೋನ್ ಮೂಲಕ ನಿಯಂತ್ರಣ ಮಾಡಬಹುದಾದ ಪಾರ್ಕಿಂಗ್ ಅಸಿಸ್ಟ್, ಚಾರ್ಜಿಂಗ್ ಪಾಯಿಂಟ್ ಟ್ರ್ಯಾಕರ್ ಸೌಲಭ್ಯ ಸಹ ಇದರಲ್ಲಿದೆ.

ಈ ಹೊಸ ಸ್ಕೂಟರ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕೆಲವು ವಿಶೇಷ ಸೌಲಭ್ಯಗಳು ಸಹ ದೊರೆಯಿದ್ದು, ಮನೆ ಅಂಗಳದಲ್ಲಿ ಉಚಿತವಾಗಿ ಚಾರ್ಜಿಂಗ್ ಪಾಯಿಂಟ್ ಮತ್ತು ಸ್ಮಾರ್ಟ್ ಕನೆಕ್ಟಿವಿಟಿ ಮೂಲಕವೇ ಸ್ಕೂಟರಿನಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ತಿಳಿದುಕೊಂಡು ಸಮಸ್ಯೆ ಬಗೆಹರಿಸಲಾಗುತ್ತದೆ.

Read more...