ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಸರಿ ಸುಮಾರು ಆರು ವರ್ಷಗಳ ಹಿಂದೆ, ಬೆಂಗಳೂರು ಮೂಲದ ಸ್ಟಾರ್ಟಪ್ 'ಅಲ್ಟ್ರಾವೈಲೆಟ್ ಆಟೋಮೋಟಿವ್' ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ತಯಾರಿಸುವ ಕಾರ್ಯವನ್ನು ಆರಂಭಿಸಿತ್ತು. ಅದರಂತೆ ನವೀನ ವೈಶಿಷ್ಟ್ಯಗಳನ್ನು ಒಳಗೊಂಡ ಅತ್ಯಾಕರ್ಷಕ ಅಲ್ಟ್ರಾವೈಲೆಟ್ F77 ಬೈಕ್‌ನ್ನು ಕಳೆದ ವರ್ಷ ಪರಿಚಯಿಸಿತು.

ಈಗಾಗಲೇ ಅಲ್ಟ್ರಾವೈಲೆಟ್ F77 ರೆಕಾನ್ ಆವೃತ್ತಿಯ ಬೆಲೆಯನ್ನು ಬಹಿರಂಗಪಡಿಸಲಾಗಿದೆ. ಅದು ಕೊಂಚ ದುಬಾರಿಯಿದ್ದು, ರೂ.4.5 ಲಕ್ಷ ಎಕ್ಸ್ ಶೋರೂಂ ದರದಲ್ಲಿ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಈ ಮೋಟಾರ್‌ಸೈಕಲ್‌ ಬೇಗನೇ ಮಾರುಕಟ್ಟೆಗೆ ಬರಬೇಕಿತ್ತು. ಆದರೆ, ಕೊರೋನಾ ಕಾರಣ, ಅದು ತಡವಾಯಿತು. ಆದರೂ ಕಂಪನಿ ಈ ಬೈಕ್ ಅನ್ನು ಮತ್ತಷ್ಟು ನವೀಕರಿಸಿತು. ಸದ್ಯ ಬೆಂಗಳೂರಿನ ರಸ್ತೆಯಲ್ಲಿ ಈ ಬೈಕ್ ರೈಡ್ ಮಾಡಲು ನಮಗೆ ಅವಕಾಶ ಸಿಕ್ಕಿದ್ದು, ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ. ಎಂತಹ ವೈಶಿಷ್ಟ್ಯ ಹೊಂದಿದೆ ಎಂಬುದರ ಬಗ್ಗೆ ವಿಮರ್ಶೆ ಮಾಡಲಾಗಿದೆ.

ಅಲ್ಟ್ರಾವೈಲೆಟ್ F77 ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ

'ಅಲ್ಟ್ರಾವೈಲೆಟ್ F77 ರೆಕಾನ್' ವಿನ್ಯಾಸ ಮತ್ತು ವೈಶಿಷ್ಟ್ಯಗಳು:
ಅಲ್ಟ್ರಾವೈಲೆಟ್ F77ಯನ್ನು ರಸ್ತೆಯಲ್ಲಿನ ಸೂಪರ್ ಜೆಟ್ ಎಂದು ಕರೆಯಬಹುದು. ಇದು ಪ್ರಸ್ತುತ ಜಮಾನದ ಯುವಕರು, ಇಷ್ಟಪಡುವಂತಹ ವಿನ್ಯಾಸ ಹೊಂದುವ ಮೂಲಕ ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಇದರ ಫ್ರಂಟ್ ಅಂಗುಲರ್ ಹೆಡ್‌ಲೈಟ್ ಎಲ್ಲರನ್ನು ಸೆಳೆಯಲಿದೆ. 3 ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳಂತೆ ಡ್ಯುಯಲ್ ಪಾಡ್ ಲೈಟಿಂಗ್ ಕಾನ್ಫಿಗರೇಶನ್ ಕೂಡ ಶಾರ್ಪ್ ಆಗಿದೆ. ಏರೋ ಕವರ್‌ಗಳೊಂದಿಗೆ ಅಪ್ಸೆಡ್-ಡೌನ್ ಫೋರ್ಕ್‌ಗಳು ಫ್ರಂಟ್ ಡಿಸೈನ್ ಅನ್ನು ಹೆಚ್ಚು ಆಕರ್ಷಕವಾಗಿಸಿವೆ.

ಈ ಎಲೆಕ್ಟ್ರಿಕ್ ಬೈಕ್, MRF ರಬ್ಬರ್‌ನೊಂದಿಗೆ 17 ಇಂಚಿನ ವೀಲ್ಸ್ ಹೊಂದಿರುವುದನ್ನು ನೋಡಬಹುದಾಗಿದೆ. ಇದರ ಸೈಡ್ ಪ್ರೊಫೈಲ್‌ ನೋಡಿದಾಗ ಅದು ಜೆಟ್ ಫೈಟರ್‌ ವಿಮಾನದಂತೆ ಕಾಣಲಿದ್ದು, ಪ್ರತಿ ಪ್ಯಾನೆಲ್ ಕೂಡ ಪ್ರೆಸ್ ಫಿಟ್ ಆಗಿದೆ. ಆದ್ದರಿಂದ ಇಲ್ಲಿ ಯಾವುದೇ ನಟ್ಸ್ ಅಥವಾ ಬೋಲ್ಟ್‌ಗಳು ಕಾಣುವುದಿಲ್ಲ. ಅಲ್ಟ್ರಾವೈಲೆಟ್ F77 ಬೈಕಿನ ಚಾರ್ಜಿಂಗ್ ಪಾಯಿಂಟ್ ಸಾಮಾನ್ಯ ಬೈಕ್‌ಗಳಂತೆ ಫ್ಯುಯೆಲ್ ಟ್ಯಾಂಕ್‌ ಇರುವ ಭಾಗದಲ್ಲಿದೆ ಎನ್ನುವುದು ಗಮನಾರ್ಹ. ಬ್ಯಾಟರಿ ತುಂಬಾ ರಕ್ಷಣಾತ್ಮಕವಾಗಿದ್ದು, ಸಂಪೂರ್ಣವಾಗಿ ಮುಚ್ಚಲಾಗಿದೆ.

ಅಲ್ಟ್ರಾವೈಲೆಟ್ F77 ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ

ಈ ಬೈಕ್ ಸಣ್ಣ ಏರೋ ವಿಂಗ್ಲೆಟ್ ಅನ್ನು ಪಡೆದಿದೆ. ಇದು ಕ್ರ್ಯಾಶ್ ಗಾರ್ಡ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, 2 ಹಂತದ ಆಸನ ವ್ಯವಸ್ಥೆ ಹೊಂದಿದ್ದು, ರೈಡರ್ ಸೀಟ್ ಕಡಿಮೆ ಎತ್ತರದಲ್ಲಿದ್ದು, ಪಿಲಿಯನ್ ಸೀಟ್ ಹೆಚ್ಚಿನ ಹೈಟ್ ನಲ್ಲಿ ಇರುವುದನ್ನು ಕಾಣಬಹುದು. ರೇರ್, ಫುಲ್ ಎಲ್ಇಡಿ ಲೈಟಿಂಗ್ ಸೆಟಪ್ ಪಡೆದಿದ್ದು, ಅಲ್ಲಿರುವ ವೀಲ್ಸ್ ಕೂಡ ಈ ಬೈಕಿಗೆ ಹೊಂದಿಕೊಳ್ಳುವ ರೀತಿ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವು ಖರೀದಿದಾರರಿಗೆ ಖಂಡಿತ ಇಷ್ಟವಾಗಲಿದೆ.

ಅಲ್ಟ್ರಾವೈಲೆಟ್ F77 ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, TFT ಡಿಸ್ಪ್ಲೇಯನ್ನು ಹ್ಯಾಂಡಲ್ ಬಾರ್ ನಲ್ಲಿ ಹೊಂದಿರುವುದನ್ನು ಕಾಣಬಹುದು. ಆದರೆ, ಇದು ಟಚ್‌ಸ್ಕ್ರೀನ್ ಅಲ್ಲ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ. ಈ ಬೈಕ್‌ನ ಎಡಭಾಗದಲ್ಲಿ ಸ್ವಿಚ್‌ಗಳು ಮತ್ತು ಬಟನ್‌ಗಳನ್ನು ಪಡೆದಿದ್ದು, ನಿಮ್ಮ ಫೋನ್‌ನನ್ನು ಸುಲಭವಾಗಿ ಕನೆಕ್ಟ್ ಮಾಡಬಹುದು. ಬೈಕ್ ಸ್ವೀಡ್, ರೈಡಿಂಗ್ ಮೋಡ್ ಮತ್ತು ನ್ಯಾವಿಗೇಷನ್ ಮುಂತಾದವುಗಳನ್ನು ಡಿಸ್ಪ್ಲೇ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಒಟ್ಟಾರೆಯಾಗಿ ವೈಶಿಷ್ಟ್ಯಗಳು ಸವಾರರಿಗೆ ತುಂಬಾ ಉಪಯುಕ್ತವಾಗಿವೆ ಎಂದು ಹೇಳಬಹುದು.

ಅಲ್ಟ್ರಾವೈಲೆಟ್ F77 ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ

ಅಲ್ಟ್ರಾವೈಲೆಟ್ F77 ಕಾರ್ಯಕ್ಷಮತೆ:
ಈ ಅಲ್ಟ್ರಾವೈಲೆಟ್ F77 ಅಳವಡಿಕೆ ಮಾಡಲಾಗಿರುವ ಬ್ಯಾಟರಿ ಅತ್ಯುತ್ತಮವಾಗಿದೆ. ಇದು ಎರಡು ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಅವುಗಳೆಂದರೇ, 7.1 kWh ಹಾಗೂ 10.3 kWh ಬ್ಯಾಟರಿ ಪ್ಯಾಕ್. ಇವು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ ಎಂದು ಹೇಳಬಹುದು. 7.1 kWh ಬ್ಯಾಟರಿ ಇರುವ ಅಲ್ಟ್ರಾವೈಲೆಟ್ F7 ಬೈಕ್, ಒಂದೇ ಚಾರ್ಜ್‌ನಲ್ಲಿ ಗರಿಷ್ಠ 206 ಕಿಲೋಮೀಟರ್‌ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ, ರಸ್ತೆಗಳಿಗೆ ಅನುಗುಣವಾಗಿ ಅದು ಬೇರೆಯಾಗಿರುತ್ತದೆ. ಇದರ ಎಲೆಕ್ಟ್ರಿಕ್ ಮೋಟಾರ್, 36.2 bhp ಪವರ್ ಮತ್ತು 85 Nm ಟಾರ್ಕ್ ಉತ್ಪಾದಿಸುತ್ತದೆ.

ಅಲ್ಟ್ರಾವೈಲೆಟ್ F77 ರೆಕಾನ್ ಆವೃತ್ತಿಗೆ ಸಂಬಂಧಿಸಿದಂತೆ ಮಾತನಾಡುವುದಾದರೆ, ಇದು 10.3kWh ಬ್ಯಾಟರಿ ಪ್ಯಾಕ್ ಹೊಂದಿರುವ ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಎಂದು ಹೇಳಬಹುದು. ಸಂಪೂರ್ಣ ಚಾರ್ಜ್ ಮಾಡಿದರೆ 307 ಕಿಮೀ ರೇಂಜ್ ನೀಡುತ್ತದೆ. ಆದರೆ, ರಸ್ತೆಗಳಲ್ಲಿ 261 ಕಿಮೀ ರೇಂಜ್ ನೀಡಬಹುದು. ಇದರ ಎಲೆಕ್ಟ್ರಿಕ್ ಮೋಟಾರ್ 38.88 bhp ಪವರ್ ಮತ್ತು 95 Nm ಟಾರ್ಕ್ ಉತ್ಪಾದಿಸಲಿದ್ದು, 3.1 ಸೆಕೆಂಡುಗಳಲ್ಲಿ 0 ರಿಂದ 60 kmph, 8 ಸೆಕೆಂಡುಗಳಲ್ಲಿ 0 ರಿಂದ 100 kmph ಟಾಪ್ ಸ್ವೀಡ್ ಪಡೆಯಲಿದ್ದು, ಈ ಬೈಕ್ ಗರಿಷ್ಠ ವೇಗ, ಗಂಟೆಗೆ 147 ಕಿಮೀ ಇದೆ.

ಈ ಎಲೆಕ್ಟ್ರಿಕ್ ಬೈಕ್ ಸುತ್ತಳತೆ ಬಗ್ಗೆ ಮಾತನಾಡುವುದಾದರೆ, ಇದು 1,340 ಎಂಎಂ ವೀಲ್ ಬೇಸ್, 800 ಎಂಎಂ ಸೀಟ್ ಹೈಟ್ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಎರಡೂ ರೂಪಾಂತರಗಳಲ್ಲೂ ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್ ಎಂಬ ರೈಡಿಂಗ್ ಮೋಡ್‌ಗಳಿವೆ. ಬ್ಯಾಟರಿ ಚಾರ್ಜ್ ಶೇಕಡ 70%ಕ್ಕಿಂತ ಹೆಚ್ಚಿರುವಾಗ ಬ್ಯಾಲಿಸ್ಟಿಕ್ ಮೋಡ್ ಬಳಕೆ ಮಾಡಬಹುದು. ಅಲ್ಲದೆ, ಇದರ ಆಕರ್ಷಕ ಕಾರ್ಯಕ್ಷಮತೆ ಖರೀದಿದಾರರಿಗೆ ಇಷ್ಟವಾಗುವುದು ಖಂಡಿತ.

ಅಲ್ಟ್ರಾವೈಲೆಟ್ F77 ಮತ್ತು F77 ರೆಕಾನ್ ಎರಡು ವಿವಿಧ ಚಾರ್ಜರ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಕೇವಲ ಒಂದು ಗಂಟೆ ಚಾರ್ಜ್ ಮಾಡಿದರೆ 35 ಕಿ.ಮೀ ದೂರ ಕ್ರಮಿಸಬಹುದು. ಬ್ರೇಕಿಂಗ್‌ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, F77 ರೆಕಾನ್ ಫ್ರಂಟ್, 4 ರೇಡಿಯಲ್ ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ರೇರ್, ಸಿಂಗಲ್ ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ 230 ಎಂಎಂ ಬ್ರೇಕ್ ಅನ್ನು ಹೊಂದಿದೆ. ಫ್ರಂಟ್, 110/70 ಅಳತೆಯ ಟೈರ್ ಮತ್ತು ರೇರ್, 150/60 ಅಳತೆಯ ಟೈರ್ ಅನ್ನು ಹೊಂದಿದ್ದು, 17 ಇಂಚಿನ ವೀಲ್ಸ್ ಪಡೆದುಕೊಂಡಿದೆ.

ರೈಡಿಂಗ್ ಅನುಭವ ಹೇಗಿದೆ:
ಈ ಬೈಕ್‌ನ ರೈಡಿಂಗ್ ಅನುಭವದ ಬಗ್ಗೆ ಹೇಳಬೇಕಾದರೆ, ಅಲ್ಟ್ರಾವೈಲೆಟ್ F77 ರೆಕಾನ್ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಅವು ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್. ಈ ಬೈಕ್ ಅನ್ನು ಓಡಿಸುವಾಗ ರೈಡರ್ ಗ್ಲೈಡ್ ಮೋಡ್ ಆಯ್ಕೆ ಮಾಡುವುದು ಉತ್ತಮ ಎಂದು ಹೇಳಬಹುದು. ಇದು ಈ ಬೈಕ್‌ಗೆ ಸುಲಭವಾಗಿ ಹೊಂದಾಣಿಕೆಯಾಗುವ ರೈಡಿಂಗ್ ಮೋಡ್‌ ಆಗಿದ್ದು, ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆ ನಂತರ ಕಾಂಬ್ಯಾಟ್ ಮೋಡ್ ಅನ್ನು ಬಳಸಬಹುದು.

ಬ್ಯಾಲಿಸ್ಟಿಕ್ ಮೋಡ್‌ಗೆ ಸಂಬಂಧಿಸಿದಂತೆ, ಟ್ರ್ಯಾಕ್‌ನಲ್ಲಿ ಓಡಿಸುವಾಗ ಇದು ಸೂಕ್ತವಾಗಿರಲಿದ್ದು, ಈ ಮೋಡ್ ಖಂಡಿತವಾಗಿಯೂ ಈ ಬೈಕಿನ ಸಾಮರ್ಥ್ಯ ತಿಳಿಯಲು ಸಹಾಯ ಮಾಡುತ್ತದೆ. ಈ ಬೈಕ್ ಅನ್ನು ಗರಿಷ್ಠ ವೇಗದಲ್ಲಿ ಓಡಿಸಿದಾಗ ಬ್ಯಾಲಿಸ್ಟಿಕ್ ಮೋಡ್‌ನಲ್ಲಿ ರೈಡ್ ಮಾಡುವ ಅನುಭವ ಖುಷಿ ಕೊಡಲಿದೆ. ಈ ಬೈಕ್‌ನಲ್ಲಿರುವ ಅತ್ಯುತ್ತಮ ಸಸ್ಪೆನ್ಷನ್ ಸೆಟಪ್, ರೇರ್ ಸೆಟ್ ಫುಟ್‌ಪೆಗ್‌ಗಳು, ಸಪೋರ್ಟಿವ್ ಫೇರಿಂಗ್ ಮತ್ತು ಫ್ಯುಯೆಲ್ ಟ್ಯಾಂಕ್ ಪ್ಯಾಡ್ ನಿಮಗೆ ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ಹೇಳಬಹುದು.

ಅಲ್ಲದೇ, ಈ ಅಲ್ಟ್ರಾವೈಲೆಟ್ F77, ಉತ್ತಮ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿದ್ದು ಅದು ಯಾವುದೇ ರಸ್ತೆಗಳಲ್ಲಿ ಸುಲಭವಾಗಿ ಓಡಿಸಲು ನೆರವಾಗುತ್ತದೆ ಎಂದು ಹೇಳಬಹದು. ಇದು ನಿಮಗೆ ಖಂಡಿತವಾಗಿಯೂ ಖುಷಿ ತರುವ ವಿಚಾರವಾಗಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಮಾತನಾಡುವುದಾದರೆ, ಅವು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಒಟ್ಟಾರೆಯಾಗಿ, ಇದು ಉತ್ತಮ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವುದು ಮಾತ್ರವಲ್ಲದೆ, ಕಾರ್ಯಕ್ಷಮತೆಯ ವಿಷಯದಲ್ಲಿ ತುಂಬಾ ಅದ್ಭುತವಾಗಿದೆ ಎಂದು ಹೇಳಿ್ದರೆ ತಪ್ಪಾಗುವುದಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ:
ಭಾರತೀಯ ಮಾರುಕಟ್ಟೆಯಲ್ಲಿ ಇದುವರೆಗೆ ಬಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಒಂದು ರೀತಿಯ ರೇಂಜ್ ಸೆಟ್ ಮಾಡಿದರೆ, ಅಲ್ಟ್ರಾವೈಲೆಟ್ F77 ಅದಕ್ಕಿಂತಲ್ಲೂ ದೊಡ್ಡ ಎತ್ತರಕ್ಕೆ ಸಾಗುವುದರಲ್ಲಿ ಎರಡು ಮಾತಿಲ್ಲ. ಇದರ ವಿನ್ಯಾಸ, ಆಧುನಿಕ ವೈಶಿಷ್ಟ್ಯಗಳು ಮತ್ತು ಉತ್ತಮ ಕಾರ್ಯಕ್ಷಮತೆ ನೀಡುವ ಬ್ಯಾಟರಿ ಆಯ್ಕೆಯು ದೇಶದ ಯುವ ಗ್ರಾಹಕರನ್ನು ಸೆಳೆಯಲಿದ್ದು, ಈ ಬೈಕ್ ಖರೀದಿಸಲು ಮನಸ್ಸು ಮಾಡಬಹುದು. ಅಲ್ಲದೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಬಹುದು.

Most Read Articles

Kannada
English summary
Ultraviolette f77 recon review riding impressions specs details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X