ಒಂದೆರಡು ದಿನಗಳಲ್ಲಿ ನಿಗದಿಯಾಗಲಿದೆ ಆ್ಯಪ್ ಆಧಾರಿತ ಆಟೋ ಸೇವೆ ದರ

ಬೆಂಗಳೂರು: ಆ್ಯಪ್‌ ಆಧಾರಿತ ಆಟೋ ಸೇವೆಗೆ ದರ ನಿಗದಿಪಡಿಸುವ ಸಂಬಂಧ ರಾಜ್ಯ ಸರ್ಕಾರ ಒಂದೆರಡು ದಿನಗಳಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಉಬರ್, ಓಲಾದಂತಹ ಕಂಪನಿಗಳು ತಮ್ಮ ಪ್ಲಾಟ್‌ಫಾರಂ ಮೂಲಕ ಆಟೋ ಬುಕ್ ಮಾಡುವ ಬಳಕೆದಾರರಿಂದ ಎಷ್ಟು ಪ್ರಯಾಣ ಶುಲ್ಕ ಪಡೆಯಬೇಕೆಂಬುದರ ಬಗ್ಗೆ ಸಾರಿಗೆ ಇಲಾಖೆಯು ಶುಕ್ರವಾರ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬೇಕಾಗಿದೆ.

ಬೆಂಗಳೂರಿನಲ್ಲಿ ಆಟೋ ಸೇವೆ ಸ್ಥಗಿತಗೊಳಿಸುವಂತೆ ಅ.6ರಂದು ಸಾರಿಗೆ ಇಲಾಖೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ, ಉಬರ್, ಓಲಾ ಸಲ್ಲಿಸಿದ ರಿಟ್ ಅರ್ಜಿಗಳನ್ನು ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಕಂಪನಿಗಳು ಕನಿಷ್ಠ ದರವನ್ನು 100 ರೂ.ವರೆಗೆ ವಿಧಿಸುತ್ತಿವೆ. ಆದರೆ, ಸರ್ಕಾರವು ಮೂಲ ದರವನ್ನು 30 ರೂ.ಗೆ ಮಿತಿಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಜಿಎಸ್‌ಟಿ ಹೊರತುಪಡಿಸಿ, ಸೇವಾ ಶುಲ್ಕವನ್ನು 10%ಗೆ ಮಿತಿಗೊಳಿಸಿ, ಅಕ್ಟೋಬರ್ 14ರಂದು ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದನ್ವಯ ಈ ಪ್ಲಾಟ್‌ಫಾರಂಗಳು ಆಟೋ ಸೇವೆಗೆ ಬುಕಿಂಗ್‌ ಸ್ವೀಕರಿಸುತ್ತಿವೆ.

ಈ ಪ್ರಕರಣ ಸೋಮವಾರ ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರ ಪೀಠದ ಮುಂದೆ ವಿಚಾರಣೆಗೆ ಬರಲಿದೆ. ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಈಗಾಗಲೇ ಸಾರಿಗೆ ಕಾರ್ಯದರ್ಶಿ ಎನ್‌.ವಿ.ಪ್ರಸಾದ್, ಸಾರಿಗೆ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮತ್ತು ಇತರ ಹಿರಿಯ ಸಾರಿಗೆ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನ್ಯಾಯಾಲಯದ ಮುಂದೆ ಸರ್ಕಾರದ ನಿಲುವನ್ನು ತಿಳಿಸುವ ಮೊದಲು ಹಿರಿಯ ಅಧಿಕಾರಿಗಳು ಇಂದು ಅಥವಾ ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ.

ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರತಿದಿನ ಸಾವಿರಾರು ಮಂದಿ ಪ್ರಯಾಣಕ್ಕಾಗಿ ಆಟೋಗಳನ್ನು ಬುಕ್ ಮಾಡುತ್ತಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತೀರ್ಮಾನ ನಿರ್ಣಾಯಕವಾಗಿರುತ್ತದೆ. ಅವರ ಯಾವುದೇ ನಿರ್ಧಾರ ಹೆಚ್ಚಿನ ಸಂಖ್ಯೆಯ ಬೆಂಗಳೂರಿಗರ ಮೇಲೆ ಪರಿಣಾಮ ಬೀರುವುದು ಖಚಿತ. ಕಳೆದ ತಿಂಗಳು, ಹಿರಿಯ ಸಾರಿಗೆ ಅಧಿಕಾರಿಗಳು ಆಯೋಜಿಸಿದ್ದ ಸಭೆಯಲ್ಲಿ, ಜಿಎಸ್‌ಟಿಯನ್ನು ಹೊರತುಪಡಿಸಿ, ಆಟೋ ದರಗಳ ಮೇಲೆ 20% ಸೇವಾ ಶುಲ್ಕ ವಿಧಿಸುತ್ತೇವೆ ಎಂದು ಪ್ಲಾಟ್‌ಫಾರಂಗಳು ಕೋರಿದ್ದರು ಎಂದು ವರದಿಯಾಗಿದೆ.

ಅಕ್ಟೋಬರ್ 14ರಂದು ನ್ಯಾಯಮೂರ್ತಿ ಎಂ.ಜಿ.ಶುಕುರೆ ಕಮಲ್ ಅವರು, ನೀಡಿದ್ದ ಮಧ್ಯಂತರ ಆದೇಶ ಶುಲ್ಕವನ್ನೇ ವಿಧಿಸಲು ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ಒಲವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಗ್ರಾಹಕರ ಹಿತಾಸಕ್ತಿ, ವ್ಯವಹಾರ ನಡೆಸುವವರಿಗೂ ಅನುಕೂಲವಾಗಲಿದೆ ಎಂದು ಅವರ ಅಭಿಪ್ರಾಯವಾಗದೆ. ಆದರೆ, ಈ ಸಂಬಂಧ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದೆ ಆಗಿದ್ದು, ಸದ್ಯ ಎಲ್ಲರ ಕುತೂಹಲ ಅವರ ಮೇಲೆ ನೆಟ್ಟಿದೆ.

ನವೆಂಬರ್ 1ರಂದು ಉಬರ್ ಬಿಡುಗಡೆಗೊಳಿಸಿದ್ದ ತನ್ನ ಹೇಳಿಕೆಯಲ್ಲಿ, 'ಪ್ರಸ್ತುತ, ಬೆಂಗಳೂರಿನಲ್ಲಿ ನಮ್ಮ ಕಮಿಷನ್ ಸಂಗ್ರಹಿಸುವ ದರವನ್ನು 10%ಗೆ ಸೀಮಿತಗೊಳಿಸಲಾಗಿದೆ. ಇದು ಆರ್ಥಿಕವಾಗಿ ಸಮರ್ಥನೀಯವಲ್ಲ. ನಮ್ಮ ವೆಚ್ಚಗಳನ್ನು ಕಮಿಷನ್‌ ಮೂಲಕ ಭರಿಸಲಾಗದಿದ್ದರೆ, ಚಾಲಕರು ಮತ್ತು ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದ್ದು, ವೆಚ್ಚವನ್ನು ಸರಿದೂಗಿಸಲು ಬೇರೆ ಮಾರ್ಗ ಕಂಡುಕೊಳ್ಳಬೇಕಾಗುತ್ತದೆ. ಅಂದರೆ, ಬೆಂಗಳೂರಿನ ಆಯ್ದ ಭಾಗಗಳಿಗೆ ಉಬರ್ ಆಟೋವನ್ನು ಸೀಮಿತಗೊಳಿಸುವ ಕಠಿಣ ನಿರ್ಧಾರವನ್ನು ನಾವು ಮಾಡಬೇಕಾಗುತ್ತದೆ' ಎಂದು ಹೇಳಿತ್ತು.

ಅರ್ಜಿಗಳ ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹಾಜರಾಗಿ, ದರ ನಿಗದಿ ವಿಚಾರ ಕುರಿತು ಸಂಬಂಧಪಟ್ಟವರಿಂದ ಅಹವಾಲು ಆಹ್ವಾನಿಸಲಾಗಿದೆ. ಈ ಬಗ್ಗೆ ನ.25 ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಹಾಗಾಗಿ, ಸರ್ಕಾರ ತೀರ್ಮಾನ ಕೈಗೊಳ್ಳುವರೆಗೂ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಬಾರದು ಎಂದು ಕೋರಿದ್ದರು. ಆ ಮನವಿ ಆಲಿಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಪೀಠ ಅರ್ಜಿ ವಿಚಾರಣೆಯನ್ನು ನ.28ಕ್ಕೆ ಮುಂದೂಡಿತ್ತು.

Most Read Articles

Kannada
English summary
App based auto service rate will be fixed in a couple of days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X