ಗುಜರಿ ನೀತಿ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ

ದೇಶಾದ್ಯಂತ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿವಿಧ ನಿಯಮ ಮತ್ತು ನೀತಿಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಆರಂಭಿಕ ಹಂತದಲ್ಲಿ ಬಿಎಸ್ 6 ಹೊರಸೂಸುವಿಕೆ ಮಾನದಂಡಗಳನ್ನು ಜಾರಿಗೆ ತರುವುದು. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸುವುದು ಸರ್ಕಾರದ ಯೋಜನೆ ಆಗಿದ್ದು, ಇದಕ್ಕಾಗಿ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ವರದಿಯಾಗಿದೆ.

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರ ಅನ್ವಯ, 15 ವರ್ಷಕ್ಕಿಂತ ಹಳೆಯದಾದ ಕೇಂದ್ರ, ರಾಜ್ಯ ಸರ್ಕಾರದ ಮಾಲೀಕತ್ವದ ಎಲ್ಲಾ ವಾಹನಗಳನ್ನು ಏಪ್ರಿಲ್ 2023ರ ವೇಳೆಗೆ ಬಳಕೆ ಮಾಡುವುದನ್ನು ಹಂತಹಂತವಾಗಿ ನಿಲ್ಲಿಸಬೇಕು. ಈ ಬಗ್ಗೆ ಸ್ವತಃ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದು, 15 ವರ್ಷ ಪೂರೈಸಿರುವ ಎಲ್ಲಾ ಸರ್ಕಾರಿ ವಾಹನಗಳು ಗುಜರಿ ಸೇರಲಿವೆ. ಇದಕ್ಕಾಗಿ ರೂಪಿಸಿರುವ ನಿಯಮ ಮತ್ತು ನೀತಿಗಳ ಕುರಿತಂತೆ ಮಾಹಿತಿಯನ್ನು ಎಲ್ಲಾ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಇದರಲ್ಲಿ ಸಾರಿಗೆ ನಿಗಮಗಳ ಒಡೆತನದ 15 ವರ್ಷಕ್ಕಿಂತ ಹಳೆಯದಾದ ಬಸ್‌ಗಳು ಕೂಡ ಸೇರಿವೆ. ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಬೇಕಾದ ವೇಳಾಪಟ್ಟಿಯನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜೊತೆಗೆ ರಾಜ್ಯ ಸರ್ಕಾರಗಳ ನಿಯಂತ್ರಣದಲ್ಲಿರುವ ಸಾರಿಗೆ ಸಂಸ್ಥೆಗಳ ಬಸ್‍ಗಳನ್ನು ಆಧುನೀಕರಣಗೊಳಿಸುವಂತೆ ಅವರು ತಿಳಿಸಿದ್ದಾರೆ. ಸದ್ಯ ರಾಜ್ಯದ ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ಸಂಸ್ಥೆಗಳು ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಈಗಾಗಲೇ ಪ್ರಾರಂಭ ಮಾಡಿವೆ.

ಕಳೆದ ಸೆಪ್ಟೆಂಬರ್ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ನೋಂದಾಯಿತ ವಾಹನಗಳಿಗಾಗಿ ಸ್ಕ್ರ್ಯಾಪಿಂಗ್ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ವಾಹನ ಗುಜರಿ ನೀತಿ ಜಾರಿಗೆ ಬಂದಿದೆ. ಆಗಸ್ಟ್ 2021ರಲ್ಲಿ ಈ ನೀತಿಯನ್ನು ಪರಿಚಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಇದು ವಾಯು ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸುವ ಜೊತೆಗೆ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.

ಗುಜರಿ ನಿಯಮದ ಪ್ರಕಾರ, 20 ವರ್ಷಕ್ಕಿಂತ ಹಳೆಯದಾದ ವೈಯಕ್ತಿಕ ವಾಹನಗಳು ಮತ್ತು15 ವರ್ಷಕ್ಕಿಂತ ಹಳೆಯದಾದ ವಾಣಿಜ್ಯ ವಾಹನಗಳು ರಸ್ತೆಯಲ್ಲಿ ಸಂಚಾರ ನಡೆಸಬೇಕಾದರೆ, ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅದರಲ್ಲಿ ವಿಫಲವಾದರೆ ಅಥವಾ ಅನರ್ಹವೆಂದು ಕಂಡುಬಂದರೆ ವಾಹನ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ, ಈ ಗುಜರಿ ನೀತಿಯ ಅನ್ವಯ, ಹೊಸದಾಗಿ ಖರೀದಿಸಿದ ವಾಹನಗಳಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು (UTs) ರಸ್ತೆ ತೆರಿಗೆಯಲ್ಲಿ ಶೇಕಡ 25% ತೆರಿಗೆ ವಿನಾಯತಿಯನ್ನು ನೀಡಲಿವೆ.

ಈ ನೀತಿಯು ಜಾರಿಯು ದೇಶದ ಅಭಿವೃದ್ಧಿಗೂ ತುಂಬಾ ಪೂರಕವಾಗಿದೆ. ಇದು 100 ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು ($1.3 ಶತಕೋಟಿ) ಹೊಸ ಹೂಡಿಕೆಯನ್ನು ಆಕರ್ಷಿಸಬಹುದು. ಜೊತೆಗೆ ವಾಹನ ತಯಾರಿಕೆಗೆ ಬಳಸುವ ಮೆಟಲ್ ಗಳಿಗಾಗಿ ಭಾರತವು ಇತರೇ ದೇಶಗಳ ಮೇಲೆ ಹೆಚ್ಚು ಅವಲಂಬಿತವಾಗುವುದನ್ನು ತಪ್ಪಿಸುತ್ತದೆ ಎಂದು ಕೇಂದ್ರ ಸರ್ಕಾರ ಭಾವಿಸುತ್ತದೆ. ಕಾರು ತಯಾರಿಕೆಯಲ್ಲಿ ಈ ಮೆಟಲ್ ಅನ್ನೇ ಮರು ಬಳಕೆ ಮಾಡುವುದರಿಂದ ಎಷ್ಟೋ ಹಣ ಉಳಿತಾಯವಾಗುತ್ತದೆ. ಇದರಿಂದ ವಾಹನ ಬೆಲೆಯು ಕೊಂಚ ಇಳಿಕೆಯಾಗಲಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ಇಷ್ಟೇ ಅಲ್ಲದೆ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಂತಹ ಅಕ್ಕಿ ಉತ್ಪಾದಿಸುವ ಭಾಗಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಅಲ್ಲಿ ಅಕ್ಕಿ ಹುಲ್ಲು ಸುಡುವುದರಿಂದ ವಾಯು ಮಾಲಿನ್ಯ ಹೇರಳವಾಗಿತ್ತು. ಈಗ ಭತ್ತದ ಹುಲ್ಲಿನಿಂದ ಎಥೆನಾಲ್ ಮತ್ತು ಬಯೋ ಬಿಟುಮೆನ್ ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ 80 ಲಕ್ಷ ಟನ್‌ ಜೈವಿಕ-ಬಿಟುಮೆನ್ ಅಗತ್ಯವಿದೆ. ಅದರಲ್ಲೂ ರಸ್ತೆ ಮಾಡಲು ಸಾರಿಗೆ ಇಲಾಖೆಗೆ ಹೆಚ್ಚಾಗಿ ಬೇಕಾಗಿದೆ. ಸದ್ಯ ದೇಶದಲ್ಲಿ 50 ಲಕ್ಷ ಟನ್‌ ಬಿಟುಮೆನ್‌ ತಯಾರಿಸಲಾಗುತ್ತದೆ. ಸುಮಾರು 25 ಲಕ್ಷ ಟನ್‌ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಗುಜರಿ ನೀತಿಯಿಂದ ಪರಿಸರ ಮಾಲಿನ್ಯ ನಿಯಂತ್ರಣವಾಗಲಿದೆ. 10-12 ವರ್ಷ ಓಡಿರುವ ವಾಹನಗಳಿಂದ ಆಗುತ್ತಿರುವ ಮಾಲಿನ್ಯದಿಂದ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ರಸ್ತೆ ಸುರಕ್ಷತಾ ವಿಚಾರದಲ್ಲೂ ಇದರಿಂದ ದೊಡ್ಡ ಸಮಸ್ಯೆ ಎದುರಾಗಿದೆ. ಭಾರತದಲ್ಲಿ 51 ಲಕ್ಷ ಲಘು ವಾಹನಗಳು (ಕಾರು) 20 ವರ್ಷಕ್ಕೂ ಹೆಚ್ಚು ಅವಧಿ ಮೀರಿವೆ. 17 ಲಕ್ಷ ಮಧ್ಯಮ ವರ್ಗದ ವಾಹನಗಳು 15 ವರ್ಷ ಅವಧಿ ಮುಗಿದರೂ ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲದೇ ರಸ್ತೆಗಳಲ್ಲಿ ಓಡಾಡುತ್ತಿವೆ. ಹಳೆಯ ವಾಹನಗಳಿಗೆ ಮುಕ್ತಿಕೊಟ್ಟು ಪರಿಸರ ರಕ್ಷಣೆ ಮಾಡುವುದು ಸರ್ಕಾರದ ಗುರಿಯಾಗಿದೆ.

Most Read Articles

Kannada
English summary
Important statement of union minister on scrapping policy implementation
Story first published: Monday, November 28, 2022, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X