'ಟೊಯೊಟಾ ಕಿರ್ಲೋಸ್ಕರ್' ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ವಿಕ್ರಮ್.ಎಸ್.ಕಿರ್ಲೋಸ್ಕರ್ ಅವರು (64) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಕಂಪನಿಯು ತನ್ನ ಹೇಳಿಕೆಯಲ್ಲಿ ಅವರ ಸಾವಿಗೆ ಕಾರಣವೇನು ಎಂಬುದನ್ನು ಉಲ್ಲೇಖಿಸಿಲ್ಲ. ಆದರೆ, ವರದಿಯ ಪ್ರಕಾರ ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಟೊಯೊಟಾ ಇಂಡಿಯಾ, 'ನವೆಂಬರ್ 29, 2022ರಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷ ವಿಕ್ರಂ.ಎಸ್ ಕಿರ್ಲೋಸ್ಕರ್ ಅವರು ಅಕಾಲಿಕವಾಗಿ ನಿಧನರಾಗಿರುವ ವಿಷಯವನ್ನು ತಿಳಿಸಲು ನಾವು ದುಃಖಿತರಾಗಿದ್ದೇವೆ. ಇಂತಹ ಸಮಯದಲ್ಲಿ, ಅವರ ಆತ್ಮಕ್ಕೆ ಶಾಂತಿ ಸಿಗಲು ಪ್ರಾರ್ಥಿಸುವಂತೆ ಎಲ್ಲರಲ್ಲಿಯೂ ವಿನಂತಿಸುತ್ತೇವೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಾವು ಆಳವಾದ ಸಹಾನುಭೂತಿಗಳನ್ನು ವ್ಯಕ್ತಪಡಿಸುತ್ತೇವೆ' ಎಂದು ತಿಳಿಸಿದೆ. ಬುಧವಾರ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ಜರುಗಲಿದೆ.

ಟೊಯೊಟಾ ಕಿರ್ಲೋಸ್ಕರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ನಿಧನ

ಆಟೋಮೊಬೈಲ್ ಉದ್ಯಮದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡುವ ಮೂಲಕ 'ಪ್ಯಾಷನೇಟ್ ಇಂಜಿನಿಯರ್' ಎಂದೇ ಖ್ಯಾತಿಗಳಿಸಿದ್ದ ವಿಕ್ರಮ್.ಎಸ್.ಕಿರ್ಲೋಸ್ಕರ್ ಅವರು, ಕಿರ್ಲೋಸ್ಕರ್ ಜೊತೆ ಟೊಯೋಟಾ ಪಾಲುದಾರಿಕೆಯನ್ನು ಭಾರತದ ಉದ್ಯಮ ಕ್ಷೇತ್ರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕದಲ್ಲಿ ವಾಹನ ತಯಾರಿಕಾ ಉದ್ಯಮವನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಜವಾಬ್ದಾರಿ ಅವರ ಮೇಲಿತ್ತು. ಅದನ್ನು ಯಶಸ್ವಿಯಾಗಿಯೂ ನಿಭಾಯಿಸಿದ್ದರು. ಇದಕ್ಕಾಗಿ ಅವರಿಗೆ ರಾಜ್ಯ ಸರ್ಕಾರದಿಂದ ನೀಡುವ 'ಸುವರ್ಣ ಕರ್ನಾಟಕ' ಪ್ರಶಸ್ತಿಯು ಲಭಿಸಿತ್ತು.

ಕಿರ್ಲೋಸ್ಕರ್ ಅವರು, 1980ರ ದಶಕದಲ್ಲಿ ಸರ್ಕಾರದ ಡೆವಲಪ್‌ಮೆಂಟ್ ಕೌನ್ಸಿಲ್ ಫಾರ್ ಮೆಷಿನ್ ಟೂಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ, ಬೆಂಗಳೂರಿನ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯ ಅಧ್ಯಕ್ಷರು ಆಗಿದ್ದರು. 2013-15ರ ಅವಧಿಯಲ್ಲಿ ಅವರು, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2019 ಮತ್ತು 2020 ರ ನಡುವೆ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ವಿಕ್ರಮ್ ಕಿರ್ಲೋಸ್ಕರ್ ಅವರು, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದರು.

ಮೆಟಲರ್ಜಿಕಲ್ ಇಂಡಸ್ಟ್ರೀಸ್‌ನಲ್ಲಿ ಕಾರ್ಪೊರೇಟ್ ನಾಯಕತ್ವ ವಹಿಸಿದ್ದ ಅವರ ಕಾರ್ಯವನ್ನು ಮೆಚ್ಚಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟಲ್ಸ್ (IIM) JRD ಟಾಟಾ ಪ್ರಶಸ್ತಿ 2020 ಅನ್ನು ಸಹ ಪಡೆದಿದ್ದರು. ಅವರು, ಬದಲಾಗುತ್ತಿರುವ ಹವಾಮಾನ ಬದಲಾವಣೆ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ಅವರ ಆಶ್ರಯದಲ್ಲಿ, ಟೊಯೊಟಾ ಕಿರ್ಲೋಸ್ಕರ್ ಭಾರತದಲ್ಲಿ 2035ರ ವೇಳೆಗೆ ಇಂಗಾಲದ ತಟಸ್ಥತೆ ಗುರಿಯನ್ನು ಹೊಂದಿತ್ತು. ವಿಕ್ರಮ್ ಕಿರ್ಲೋಸ್ಕರ್ ಅವರ ಮೃತಪಡುವ ಕೆಲವೇ ದಿನಗಳ ಮೊದಲು ನವೆಂಬರ್ 25ರಂದು ಟೊಯೋಟಾ ಇನ್ನೋವಾದ ಹೈಬ್ರಿಡ್ ಆವೃತ್ತಿಯಾದ ಇನ್ನೋವಾ ಹೈಕ್ರಾಸ್ ಅನ್ನು ಅನಾವರಣಗೊಳಿಸಿದ್ದರು.

ಹವಾಮಾನ ಬದಲಾವಣೆ ಬಗ್ಗೆ ನವೆಂಬರ್ 28ರಂದು ಅವರು ಕಡೆಯದಾಗಿ ಟ್ವೀಟ್ ಮಾಡಿದ್ದರು. 'ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯನ್ನು ನಿಭಾಯಿಸುವುದು ನಿರ್ಣಾಯಕವಾಗಿದೆ. ಇದಕ್ಕಾಗಿ ಒಂದು ಕಾರ್ಯತಂತ್ರ ರೂಪಿಸುವ ಅವಶ್ಯಕತೆಯಿದ್ದು, ಇದನ್ನು ಎಲ್ಲ ಉದ್ಯಮಗಳು ಸಾಮೂಹಿಕ ಜವಾಬ್ದಾರಿಯಾಗಿ ಪರಿಹರಿಸಬೇಕು' ಎಂದು ಬರೆದುಕೊಂಡಿದ್ದರು. ಇನ್ನು, ವಿಕ್ರಮ್ ಕಿರ್ಲೋಸ್ಕರ್ ಅವರು ಪತ್ನಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಪುತ್ರಿ ಮಾನಸಿ ಕಿರ್ಲೋಸ್ಕರ್ ಅವರನ್ನು ಅಗಲಿದ್ದಾರೆ. ಟೊಯೊಟಾ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ವಿಕ್ರಮ್ ಕಿರ್ಲೋಸ್ಕರ್ ನಿಧನಕ್ಕೆ ರಾಜಕೀಯ ಗಣ್ಯರು, ವಿವಿಧ ರಂಗದ ಉದ್ಯಮಿಗಳು ಸಂತಾಪವನ್ನು ಸೂಚಿಸುತ್ತಿದ್ದಾರೆ, ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 'ಭಾರತದ ಆಟೋಮೋಟಿವ್ ಉದ್ಯಮದ ದಿಗ್ಗಜರಲ್ಲಿ ಒಬ್ಬರಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಉಪಾಧ್ಯಕ್ಷರಾದ ವಿಕ್ರಮ್ ಕಿರ್ಲೋಸ್ಕರ್ ಅವರ ಅಕಾಲಿಕ ನಿಧನ ತೀವ್ರ ದುಃಖ ತರಿಸಿದೆ. ಹೃತ್ಪೂರ್ವಕ ಸಂತಾಪಗಳನ್ನು ಸೂಚಿಸುತ್ತೇನೆ. ಅವರ ಆತ್ಮಕೆ ಶಾಂತಿ ಸಿಗಲಿ. ದೇವರು ಕುಟುಂಬ ಮತ್ತು ಅವರ ಸ್ನೇಹಿತರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್, 1888ರಲ್ಲಿ ಸ್ಥಾಪಿಸಲಾಯಿತು. ಪುಣೆಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಯುರೋಪ್‌ನ ಬಹುತೇಕ 70 ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ದೇಶದ ಕೈಗಾರಿಕೀಕರಣಕ್ಕೆ ತನ್ನ ಕೊಡುಗೆ ನೀಡಿದ್ದು, ಭಾರತದಲ್ಲಿ ಮೊದಲ ಬಾರಿಗೆ ರೈತರಿಗೆ ಅನುಕೂಲವಾಗಲೆಂದು ಕಬ್ಬಿಣದ ನೇಗಿಲನ್ನು ತಯಾರಿಸಿದ ಹೆಗ್ಗಳಿಕೆ ಕಿರ್ಲೋಸ್ಕರ್ ಕಂಪನಿಗೆ ಸಲ್ಲುತ್ತದೆ. ಇಷ್ಟೇ ಅಲ್ಲದೆ, ರೈತರಿಗೆ ನೀರಾವರಿಗೆ ಅನುಕೂಲವಾಗಲು ಪಂಪ್ ಸೆಟ್ ಅನ್ನು ತಯಾರಿಸುತ್ತಿತ್ತು. ಸದ್ಯ ಜಪಾನ್ ಮೂಲದ ಟೊಯೊಟಾ ಕಂಪನಿ ಸಹಯೋಗದಲ್ಲಿ ದೇಶೀಯ ಮಾರುಕಟ್ಟೆಗೆ ಕಾರುಗಳನ್ನು ಪರಿಚಯಿಸುತ್ತಿದೆ.

Most Read Articles

Kannada
English summary
Toyota kirloskar vice president vikram kirloskar passed away
Story first published: Wednesday, November 30, 2022, 12:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X