ಕೈಗೆಟುಕುವ ಬೆಲೆಯಲ್ಲಿ 100 ಕಿ.ಮೀ ಮೈಲೇಜ್ ನೀಡುವ ಹೊಸ ಇವಿ ಸ್ಕೂಟರ್ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ ಹೆಚ್ಚಾಗಿದೆ. ಪೈಪೋಟಿ ಹೆಚ್ಚಾದಂತೆ ಹಲವು ಕಂಪನಿಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಕೊಮಾಕಿ ಕಂಪನಿ ಹೊಸ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅತ್ಯಂತ ಕಡಿಮೆ ಬೆಲೆ, ಉತ್ತಮ ಡಿಸೈನ್ ಹಾಗೂ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ.

Komaki ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಕಂಪನಿಯಾಗಿದ್ದು, ಭಾರತದಲ್ಲಿ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾಗಿದೆ. ಕಂಪನಿಯು ತನ್ನ ಬ್ರ್ಯಾಂಡ್ ಅಡಿಯಲ್ಲಿ ಮಾರಾಟಕ್ಕೆ ವ್ಯಾಪಕ ಶ್ರೇಣಿಯ ಎಲೆಕ್ಟ್ರಿಕ್ ಬೈಕುಗಳನ್ನು ನೀಡುತ್ತಿದೆ. ಇದರ ಭಾಗವಾಗಿ ಇದೀಗ ಕಂಪನಿಯು ತನ್ನ ಹೊಸ ಉತ್ಪನ್ನವಾದ ಫ್ಲೋರಾ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಬೆಲೆಯು ಎಲ್ಲಾ ವರ್ಗದವರಿಗೂ ಕೈಗೆಟುವಂತಿರಲು ಬಿಡುಗಡೆ ಮಾಡಿದೆ.

ಕೈಗೆಟುಕುವ ಬೆಲೆಯಲ್ಲಿ 100 ಕಿ.ಮೀ ಮೈಲೇಜ್ ನೀಡುವ ಹೊಸ ಇವಿ ಸ್ಕೂಟರ್ ಬಿಡುಗಡೆ

ಕೊಮಾಕಿ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ 78,999 ರೂ. (ಎಕ್ಸ್‌ ಶೋರೂಂ) ಬೆಲೆ ನಿಗದಿಪಡಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಹೈ ಸ್ಪೀಡ್ ಸ್ಕೂಟರ್ ವಿಭಾಗದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಕೊಮಾಕಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಮೂರು ವಿಭಾಗಗಳ ಅಡಿಯಲ್ಲಿ ಮಾರಾಟಕ್ಕೆ ನೀಡುತ್ತಿದೆ. ಅವುಗಳೆಂದರೆ ಸ್ಮಾರ್ಟ್ ಸ್ಕೂಟರ್, ಇ-ರಿಕ್ಷಾ ಹಾಗೂ ಹೆಚ್ಚಿನ ವೇಗದ ವಿಭಾಗಗಳ ಅಡಿಯಲ್ಲಿ ಸ್ಕೂಟರ್‌ಗಳನ್ನು ಮಾರಾಟಕ್ಕೆ ನೀಡುತ್ತಿದೆ. ತನ್ನ ಹಳೆಯ ಮಾದರಿಗಳು ಕೂಡ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿವೆ.

ಕಂಪನಿಯ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಗೇರ್ ಮೋಡ್ ಮತ್ತು ರಿವರ್ಸ್ ಮೋಡ್ ಎಂಬ ಎರಡು ರೀತಿಯ ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ. ಅದರಲ್ಲಿ, ಗೇರ್ ಮೋಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿವಿಧ ವೇಗಗಳಲ್ಲಿ ಬದಲಾಯಿಸಲು ಸಹಾಯ ಮಾಡುತ್ತದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಿಂದಕ್ಕೆ ಓಡಿಸಲು ರಿವರ್ಸ್ ಮೋಡ್ ಸಹಾಯಕವಾಗುತ್ತದೆ. ಕಂಪನಿಯು ಈ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅತ್ಯಂತ ಸೊಗಸಾದ ಮತ್ತು ಕ್ಲಾಸಿಕ್ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ತುಸು ಚೇತಕ್‌ನಂತೆ ಕಾಣುತ್ತದೆ.

ಈ ನೋಟಕ್ಕಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗೆ ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ಮತ್ತು ಬಾಡಿ ಪ್ಯಾನೆಲ್‌ನಲ್ಲಿ ಕ್ರೋಮ್ ಟ್ರಿಮ್ ನೀಡಲಾಗಿದೆ. ಇವುಗಳೊಂದಿಗೆ ಬ್ಲೂಟೂತ್ ಸಂಪರ್ಕ, ವಾಯಿಸ್ ಸಿಸ್ಟಮ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದಲ್ಲದೇ ಫ್ಲೋರಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಡಿಸ್ಕ್ ಬ್ರೇಕ್ ವೈಶಿಷ್ಟ್ಯವನ್ನು ಸಹ ನೀಡಲಾಗಿದೆ. ಫ್ಲೋರಾವನ್ನು ಜೆಟ್ ಬ್ಲಾಕ್, ಗಾರ್ನೆಟ್ ರೆಡ್, ಸ್ಟೀಲ್ ಗ್ರೇ ಮತ್ತು ಸ್ಯಾಕ್ರಮೆಂಟೊ ಗ್ರೀನ್ ಸೇರಿದಂತೆ ವಿವಿಧ ಬಣ್ಣ ಆಯ್ಕೆಗಳಲ್ಲಿ ನೀಡಲಾಗುವುದು ಎಂದು ಕಂಪನಿ ಹೇಳಿದೆ.

ಈ ವಾಹನದಲ್ಲಿ ಮೃದುವಾದ ಸೀಟ್ ಮತ್ತು ಬೂಟ್ ಸ್ಪೇಸ್ ಅನ್ನು ಸಹ ಒದಗಿಸಲಾಗಿದೆ, ಇದು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ. ಇದರೊಂದಿಗೆ ಡ್ಯುಯಲ್ ಫೂಟ್ ರೆಸ್ಟ್, ಫ್ಲಾಟ್ ಫೂಟ್ ಬೋರ್ಡ್ ಮುಂತಾದ ವೈಶಿಷ್ಟ್ಯಗಳನ್ನು ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ನೀಡಲಾಗಿದೆ. ಆದ್ದರಿಂದ ಸವಾರಿ ಮಾಡುವಾಗ ನಾವು ವಿಶಿಷ್ಟವಾದ ಪ್ರಯಾಣದ ಅನುಭವವನ್ನು ಪಡೆಯಬಹುದು. ಇದರ ವ್ಯಾಪ್ತಿಯ ಸಾಮರ್ಥ್ಯವೂ ಸ್ವಲ್ಪ ಹೆಚ್ಚಾಗಿರುತ್ತದೆ. ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 100 ಕಿ.ಮೀ ವರೆಗೆ ಪ್ರಯಾಣಿಸಬಹುದು.

ಇನ್ನು ಕಂಪನಿಯ ಸ್ಮಾರ್ಟ್ ಸ್ಕೂಟರ್‌ಗಳ ವಿಭಾಗದಲ್ಲಿ XGT-KM, XGT-X-One, XGT-X Vogue, XGT-X3, XGT-X4, XGT-X5, XGT ಕ್ಲಾಸಿಕ್, XGT VP, MX 3, XGT ಕ್ಯಾಟ್-2.0 ಅನ್ನು ನೀಡಲಾಗುತ್ತಿದೆ. ಇವೆಲ್ಲವೂ ಸ್ವಲ್ಪ ನಿಧಾನವಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಎಂಬುದು ಗಮನಿಸಬೇಕಾದ ಸಂಗತಿ. ಇವುಗಳಲ್ಲಿ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಬೈಕ್ ಮತ್ತು ಅಂಗವಿಕಲರಿಗಾಗಿ ಮೂರು ಚಕ್ರಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸೇರಿರುವುದರಿಂದ ವೇಗವನ್ನು ಕಡಿಮೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಅದೇ ರೀತಿ, ಹೈಸ್ಪೀಡ್ ಸ್ಕೂಟರ್ ವಿಭಾಗದಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಕ್ಕೆ ನೀಡಲಾಗುತ್ತಿದೆ. ಕಂಪನಿಯು ರೇಂಜರ್, ವೆನಿಸ್, TN-95, SE, LY, DD-3000 ಮತ್ತು ವೆನಿಸ್ ಇಕೋ ಸೇರಿದಂತೆ ಎಲೆಕ್ಟ್ರಿಕ್ ಬೈಕ್‌ಗಳ ಶ್ರೇಣಿಯನ್ನು ನೀಡುತ್ತದೆ. ಇವುಗಳಿಗೆ ಅನುಗುಣವಾಗಿ ಹೊಸ ಫ್ಲೋರಾವನ್ನು ಪರಿಚಯಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹೀಟ್ ಮತ್ತು ಬೆಂಕಿ ನಿರೋಧಕ ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿದೆ. ಇದರಿಂದ ವಾಹನದ ಬ್ಯಾಟರಿ ಹೆಚ್ಚು ಬಿಸಿಯಾದರೂ ಬೆಂಕಿ ತಗುಲದಂತೆ ನೋಡಿಕೊಳ್ಳುತ್ತದೆ.

ಈ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ನ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ. LiFePO4 ಬ್ಯಾಟರಿ ಪ್ಯಾಕ್ ಅನ್ನು ಫ್ಲೋರಾದಲ್ಲಿ ಬಳಸಲಾಗಿದೆ. ಇದು ಲಿಥಿಯಂ ಐಯಾನ್ ಫೆರೋ ಫಾಸ್ಫೇಟ್ ಬ್ಯಾಟರಿಯಾಗಿದ್ದು ಇದನ್ನು ಪ್ರತ್ಯೇಕವಾಗಿ ಬೇರ್ಪಡಿಸಬಹುದು ಹಾಗೂ ಜೋಡಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇನ್ನೂ ಹಲವು ವಿಶೇಷತೆಗಳನ್ನು ನೀಡಲಾಗಿದೆ. ಸೆಲ್ಫ ಡಯಾಗ್ನೋಸಿಸ್ ಮೀಟರ್, ಬ್ಯಾಕ್ ರೆಸ್ಟ್, ಪಾರ್ಕಿಂಗ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗಿದೆ.

Most Read Articles

Kannada
English summary
New ev scooter launch with 100 km mileage at affordable price
Story first published: Friday, November 25, 2022, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X