ಮೋಡಿ ಮಾಡುವ ನಿರೀಕ್ಷೆಯಲ್ಲಿ ಮಾರುತಿ ಬಲೆನೊ ಆರ್‌ಎಸ್
ಬಲೆನೊ ಹ್ಯಾಚ್ ಬ್ಯಾಕ್ ಕಾರಿನ ಯಶಸ್ಸಿನಿಂದ ಪ್ರೇರಣೆ ಪಡೆದಿರುವ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಹೆಚ್ಚು ಶಕ್ತಿಶಾಲಿ ಬಲೆನೊ ಆರ್ ಎಸ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
ಈಗಿರುವ ಬಲೆನೊಗೆ ಹೋಲಿಸಿದಾಗ ಬಲೆನೊ ಆರ್ ಎಸ್ ಆವೃತ್ತಿಯು ಹೆಚ್ಚು ವೈಶಿಷ್ಟ್ಯಗಳನ್ನು ಪಡೆಯಲಿದೆ. ಈ ಸಂಬಂಧ ಹೊಸ ಬಲೆನೊ ಆರ್ ಎಸ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ ಮಹತ್ವದ ವಿಚಾರಗಳ ಬಗ್ಗೆ ವಿವರವನ್ನು ಕೊಡಲಿದ್ದೇವೆ.

ಮೊದಲನೇಯದ್ದಾಗಿ ಕಾರಿನ ಮುಂಭಾಗದಲ್ಲಿ ಬೈ-ಕ್ಸೆನಾನ್ ಹೆಡ್ ಲ್ಯಾಂಪ್ ಜೊತೆಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಆಕರ್ಷಣೆಗೆ ಪಾತ್ರವಾಗಲಿದೆ. ಇದಲ್ಲದೆ ರೈನ್ ಸೆನ್ಸಿಂಗ್ ವೈಪರ್, ಡ್ಯುಯಲ್ ಏರ್ ಬ್ಯಾಗ್, ಸ್ಮಾರ್ಟ್ ಪ್ಲೇ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ನೇವಿಗೇಷನ್, ಪಾರ್ಕಿಂಗ್ ಸೆನ್ಸಾರ್ ಜೊತೆ ರಿವರ್ಸ್ ಕ್ಯಾಮೆರಾ ಮತ್ತು ಎಲೆಕ್ಟ್ರಿಕ್ ಔಟ್ ಸೈಡ್ ರಿಯರ್ ವ್ಯೂ ಮಿರರ್ ವ್ಯವಸ್ಥೆಯಿರಲಿದೆ.

ಫಿಯೆಟ್ ಅಬಾರ್ತ್ ಪುಂಟೊ ಬಳಿಕ ಎಲ್ಲ ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಗಿಟ್ಟಿಸಿಕೊಳ್ಳುತ್ತಿರುವ ಹ್ಯಾಚ್ ಬ್ಯಾಕ್ ಕಾರೆಂಬ ಗೌರವಕ್ಕೂ ಬಲೆನೊ ಪಾತ್ರವಾಗಿದೆ. ಇದು ಕಾರಿನ ಸುರಕ್ಷತೆಯನ್ನು ಇಮ್ಮಡಿಗೊಳಿಸಲಿದ್ದು, ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಾಗಲಿದೆ.

ಹೆಸರಲ್ಲೇ ಸೂಚಿಸಿರುವಂತೆಯೇ ಬಲೆನೊದ ಕ್ರೀಡಾತ್ಮಕ ಆವೃತ್ತಿ ಇದಾಗಿರಲಿದೆ. ಇದರಂತೆ ಕಾರಿನ ಹೊರಮೈಯಲ್ಲಿ ಕ್ರೀಡಾತ್ಮಕ ವಿನ್ಯಾಸವನ್ನು ನಿರೀಕ್ಷೆ ಮಾಡಬಹುದಾಗಿದೆ. ಡ್ಯುಯಲ್ ಟೋನ್ ಸ್ಕೀಮ್, ನಿಖರ ರೇಖೆಗಳು ಮತ್ತು ಡೈಮಂಡ್ ಕಟ್ ಅಲಾಯ್ ಚಕ್ರಗಳು ಇರಲಿದೆ.

ಇವೆಲ್ಲದಕ್ಕೂ ಮಿಗಿಲಾಗಿ 1 ಲೀಟರ್ ಬೂಸ್ಟರ್ ಜೆಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಲಿದೆ. ಮಾರುತಿಯ ಮೊದಲ ಟರ್ಬೊಚಾರ್ಜ್ಡ್ ಪೆಟ್ರೋಲ್ ಆವೃತ್ತಿಯು ಇದಾಗಿರಲಿದೆ. ಪ್ರಸ್ತುತ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಈಗಿರುವ ಬಲೆನೊಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲು ಬಲೆನೊ ಆರ್ ಎಸ್ ಸಂಸ್ಥೆ ಹೊಸತಾಗಿ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಗಳ ಮುಖಾಂತರ ಮಾರಾಟವಾಗಲಿದೆ.


Click it and Unblock the Notifications