83,000 ಮ್ಯಾಜಿಕ್ ಸಂಖ್ಯೆ ದಾಟಿದ ಮಾರುತಿ ಸುಜುಕಿ ವಿಟಾರಾ ಬ್ರಿಝಾ
ಮಾರುತಿ ಸುಜುಕಿ ವಿಟಾರಾ ಬ್ರಿಝಾ ಗರಿಷ್ಠ ಮಾರಾಟವನ್ನು ಕಾಪಾಡಿಕೊಂಡಿದ್ದು, ಉಪಯುಕ್ತ ವಾಹನ ವಿಭಾಗದಲ್ಲಿ ನೆಚ್ಚಿನ ವಾಹನವೆನಿಸಿಕೊಂಡಿದೆ.
ಈಗಷ್ಟೇ 2017 ಭಾರತದ ವರ್ಷದ ಕಾರು ಪ್ರಶಸ್ತಿಗೆ ಭಾಜನವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮಗದೊಂದು ಸಾಧನೆ ಮೆರೆದಿದ್ದು, 83,000 ಯುನಿಟ್ ಗಳ ಮಾರಾಟ ಮೈಲುಗಲ್ಲನ್ನು ತಲುಪಿದೆ.

2016 ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಎಂಟು ತಿಂಗಳ ಅವಧಿಯಲ್ಲೇ 1.72 ಲಕ್ಷಕ್ಕೂಹೆಚ್ಚು ಬುಕ್ಕಿಂಗ್ ಗಳನ್ನು ದಾಖಲಿಸಿಕೊಂಡಿದೆ.

ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಮಾರುತಿ ವಿಟಾರಾ ಬ್ರಿಝಾ, ಇದುವರೆಗೆ 83,000 ಯುನಿಟ್ ಗಳ ಮಾರಾಟವನ್ನು ದಾಟಿದೆ.

ಫೋರ್ಡ್ ಇಕೊಸ್ಪೋರ್ಟ್ ಹಾಗೂ ಮಹೀಂದ್ರ ಟಿಯುವಿ300 ಮುಂತಾದ ಮಾದರಿಗಳನ್ನು ಹಿಂದಿಕ್ಕಿರುವ ವಿಟಾರಾ ಬ್ರಿಝಾ, ಗಮನಾರ್ಹ ಮಾರಾಟವನ್ನು ಕಾಪಾಡಿಕೊಂಡಿದೆ.

ನಿರ್ಮಾಣ ಸಾಮರ್ಥ್ಯವನ್ನು 10,000 ಯುನಿಟ್ ಗಳಿಗೆ ಹೆಚ್ಚಿಸಿದರೂ ಸಹ ವಿಟಾರಾ ಬ್ರಿಝಾ ಕೆಲವು ನಿರ್ದಿಷ್ಟ ಮಾದರಿಗಳ ಕಾಯುವಿಕೆ ಅವಧಿಯು ಆರು ತಿಂಗಳ ವರೆಗೂ ವಿಸ್ತರಿಸಿದೆ.

ಉಪಯುಕ್ತ ವಾಹನ ವಿಭಾಗದಲ್ಲಿ ವಿಟಾರಾ ಬ್ರಿಝಾ ನೆರವಿನೊಂದಿಗೆ ಮಾರುತಿ ಗಮನಾರ್ಹ ಮಾರಾಟವನ್ನು ದಾಖಲಿಸಿದೆ. ಮಾರುತಿ ಸುಜುಕಿ 2016 ಎಪ್ರಿಲ್ ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ 1,09,967 ಯುನಿಟ್ ಗಳ ಮಾರಾಟವನ್ನು ಕಂಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 139ರಷ್ಟು ಏರಿಕೆ ಕಂಡಿದೆ. ಕಳೆದ ಸಾಲಿನಲ್ಲಿ 46,068 ಯುನಿಟ್ ಗಳಷ್ಟು ಮಾರಾಟವನ್ನು ದಾಖಲಿಸಿತ್ತು.

ದೇಶದ ಅಗ್ರ 10 ಮಾರಾಟವಾಗುವ ಸಾಲಿನಲ್ಲಿ ವಿಟಾರಾ ಬ್ರಿಝಾ ಗುರುತಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಾರಾಟವನ್ನು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಮಾರುತಿ ಸುಜುಕಿ ವಿಟಾರಾ ಬ್ರಿಝಾ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ. ಹಾಗೆಯೇ ಅತಿ ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಗಳು ಸೇರ್ಪಡೆಯಾಗಲಿದೆ.

ಇದರಲ್ಲಿರುವ 200 ಡಿಡಿಐಎಸ್ 1248 ಸಿಸಿ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 88.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ.

ನೂತನ ವಿಟಾರಾ ಬ್ರಿಝಾ ಇಂಧನ ಕ್ಷಮತೆಯಲ್ಲೂ ಯಾವುದೇ ರಾಜಿಗೆ ತಯಾರಾಗಿಲ್ಲ. ಇದು ಪ್ರತಿ ಲೀಟರ್ ಗೆ 24.3 ಕೀ.ಮೀ. ಮೈಲೇಜ್ ಕಾಪಾಡಿಕೊಂಡಿದೆ.

ಭಾರತದಲ್ಲಿ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ವಿಟಾರಾ ಬ್ರಿಝಾ 7.19 ಲಕ್ಷ ರು.ಗಳಿಂದ 9.88 ಲಕ್ಷ ರುಪಾಯಿಗಳ ವರೆಗೆ ದುಬಾರಿಯೆನಿಸುತ್ತದೆ.


Click it and Unblock the Notifications