ಓದಿಕೊಳ್ಳುತ್ತಿದ್ದ ಮಕ್ಕಳು ನಡುರಸ್ತೆಯಲ್ಲಿ ರಾತ್ರಿ ಹೆಣವಾಗಿದ್ದರು!

ಬುಧವಾರ, ಫೆಬ್ರವರಿ 22, 2012, 15:52 [IST]
Have A Safe Night Journey
ಮಕ್ಕಳು ರೂಂನಲ್ಲಿ ಓದಿಕೊಳ್ಳುತ್ತಿದ್ದಾರೆಂದು ತಿಳಿದು ಮನೆಯವರು ನೆಮ್ಮದಿಯಿಂದ ನಿದ್ದೆ ಮಾಡಿದ್ದರು. ಆದರೆ ಮುಂಜಾನೆ ಬಂದ ಫೋನ್ ಕರೆಯೊಂದು ಅವರನ್ನು ದಂಗುಬಡಿಸಿತ್ತು. ಓದಿಕೊಳ್ಳುತ್ತಿದ್ದರೆಂದು ಅಂದುಕೊಂಡಿದ್ದ ಮಕ್ಕಳು ನಡುರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದರು. ಹೆಣ ನೋಡುವರೆಗೂ ಈ ಘಟನೆ ಹೆತ್ತವರಿಗೆ ಅರ್ಥವೇ ಆಗಿರಲಿಲ್ಲ.

ಹೆತ್ತವರು ಮಲಗುವರೆಗೂ ಈ ಹುಡುಗರು ಓದಿಕೊಳ್ಳುತ್ತಿದ್ದರು. ಮಧ್ಯರಾತ್ರಿಯಾಗುತ್ತಿದ್ದಂತೆ ಜಾಲಿ ಡ್ರೈವಿಂಗ್ ಮಾಡುತ್ತಿದ್ದರು. ಕಾಫಿ ಕೆಫೆಗೆ ಹೋಗುವ ನೆಪದಲ್ಲಿ ಬೆಂಗಳೂರು ಸಿಟಿ ರಸ್ತೆ ಬಿಟ್ಟು ಹೆದ್ದಾರಿ ಪ್ರವೇಶಿಸುತ್ತಿದ್ದರು. ಇದೇ ರೀತಿ ನಿನ್ನೆ ರಾತ್ರಿ ಮನೆಯವರಿಗೆ ತಿಳಿಸದೇ ಮನೆ ಬಿಟ್ಟಿದ್ದರು.

ಇದು ನಿನ್ನೆ(ಫೆ 20) ನಡೆದ ಘಟನೆ. ಈ ನಾಲ್ಕು ಯುವಕರು ರಾತ್ರಿ ಜಾಲಿ ಡ್ರೈವಿಂಗ್ ಮಾಡುತ್ತಿದ್ದ ಹೋಂಡಾ ಸಿಟಿ ಕಾರು ಟ್ರಕ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿತ್ತು. ರಾತ್ರಿ ಪ್ರಯಾಣದಲ್ಲಿ ಮೈಮರೆತು ವಾಹನ ಚಾಲನೆ ಮಾಡಿದಕ್ಕೆ ಮೂವರು ಯುವಕರು ಪ್ರಾಣವನ್ನೇ ಕಳೆದುಕೊಂಡಿದ್ದರು. ಉಳಿದ ಒಬ್ಬನ ಪರಿಸ್ಥಿತಿ ಸೀರಿಯಸ್ ಅಂತೆ.

ಪ್ರತಿನಿತ್ಯ ಬೆಂಗಳೂರಿನಂತಹ ನಗರಗಳಲ್ಲಿ ಜಾಲಿ ರೈಡ್ ಅಥವಾ ಡ್ರೈವಿಂಗ್ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದೆ. ಅಚ್ಚರಿಯೆಂದರೆ ಇಂತಹ ಜಾಲಿ ಡ್ರೈವಿಂಗ್ ಮಾಡುವರಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ.

ಬೆಂಗಳೂರಿನ ಶ್ರೀಮಂತರ ಮಕ್ಕಳು ಇಂತಹ ಜಾಲಿ ಡ್ರೈವಿಂಗ್ ಮಾಡುವುದು ಹೆಚ್ಚು. ಸ್ನೇಹಿತರ ಜೊತೆ ರಾತ್ರಿ ಮನೆಬಿಡುತ್ತಾರೆ. ಮನೆಯಲ್ಲಿ ಒಪ್ಪಿಗೆ ದೊರಕದು ಎಂದು ತಿಳಿದರೆ ಓದುವ ನೆಪದಲ್ಲಿ ಮನೆಯಿಂದ ಹೊರಕ್ಕೆ ಹೋಗುತ್ತಾರೆ ಅಥವಾ ಮನೆಯವರು ಮಲಗಿದ ನಂತರ ಮನೆಬಿಡುತ್ತಾರೆ.

ಮಧ್ಯರಾತ್ರಿಯಲ್ಲಿ ಜಾಲಿ ಡ್ರೈವಿಂಗ್ ಟ್ರೆಂಡ್ ಹೆಚ್ಚಲು ಹಲವು ಕಾರಣಗಳಿವೆ. ಈ ಸಮಯದಲ್ಲಿ ಸಂಚಾರ ದಟ್ಟಣೆ ಇರುವುದಿಲ್ಲ. ಹೆಚ್ಚು ಸ್ಪೀಡಿನಿಂದ ಹೋದರೆ ಕೇಳಲು ಟ್ರಾಫಿಕ್ ಪೊಲೀಸರು ಇರುವುದಿಲ್ಲ.

ಇಂತಹ ಘಟನೆಗಳು ಮತ್ತೆ ನಡೆಯದಿರಲಿ ಎನ್ನುವುದು ಕನ್ನಡ ಡ್ರೈವ್ ಸ್ಪಾರ್ಕ್ ಆಶಯ. ರಾತ್ರಿ ಸುರಕ್ಷಿತ ಪ್ರಯಾಣಕ್ಕೆ ಕೆಲವು ಸಲಹೆ ಇಲ್ಲಿದೆ.

* ಕತ್ತಲಲ್ಲಿ ನಾವು ಹೆಚ್ಚು ದೂರವನ್ನು ನೋಡಲಾರೆವು. ಎದುರಿನಲ್ಲಿ ಬೇರೆ ವಾಹನ ಬರುತ್ತಿದ್ದರೆ ಕಣ್ಣಿಗೆ ಮತ್ತಷ್ಟು ಮಂಕು ಕವಿಯಬಹುದು. ಈ ಕಾರಣಕ್ಕೆ ಹೆಚ್ಚು ವೇಗದಲ್ಲಿ ಹೋಗುವುದು ಅಪಾಯ.

* ರಾತ್ರಿ ಕೇವಲ ಹೆಡ್ ಲೈಟ್ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತೇವೆ. ಹಾಗಾಗಿ ನಮ್ಮ ದೃಷ್ಟಿ ವ್ಯಾಪ್ತಿ ತೀರಾ ಕಮ್ಮಿ. ಇಲ್ಲಿ ಚಾಲಕರಿಗೆ ಕಣ್ಣಲತೆಯ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಅನಿವಾರ್ಯತೆ. ಇಂತಹ ಸನ್ನಿವೇಶದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ.

* ರಾತ್ರಿ ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ರಸ್ತೆಯ ಪರಿಚಯನೂ ಇರುವುದಿಲ್ಲ. ಹೀಗಾಗಿ ನಿದ್ದೆ ಕಣ್ಣಲ್ಲಿ ಪ್ರಯಾಣಿಸುವುದು ಅಪಾಯ. ಶೇ. 90ರಷ್ಟು ಚಾಲಕರು ರಾತ್ರಿ ಪ್ರಯಾಣದಲ್ಲಿ ತೂಕಡಿಸುತ್ತಾರಂತೆ. ಕತ್ತಲಲ್ಲಿ ರಸ್ತೆಯ ಗ್ರಹಿಕೆ ಕಷ್ಟವಾಗುತ್ತದೆ.

* ಕತ್ತಲ ಡ್ರೈವಿಂಗ್ ನಲ್ಲಿ ಆಯಾಸ ಆಗುವುದು ಬೇಗವಂತೆ. ಸೋಮಾರಿತನ, ಆಲಸ್ಯತನ ಕತ್ತಲ ಡ್ರೈವಿಂಗ್ ನ ಶತ್ರುಗಳು. ರಾತ್ರಿ ವಾಹನ ಚಾಲನೆ ಹೆಚ್ಚಿನವರಿಗೆ ಬೋರ್ ಹೊಡೆಸುತ್ತದೆ. ಇದು ಕೂಡ ರಾತ್ರಿ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ.

* ಪ್ರತಿರಾತ್ರಿ ಪ್ರಯಾಣಕ್ಕೆ ಮುನ್ನ ಹೆಡ್ ಲೈಟ್, ಹಿಂಬದಿಯ ಲೈಟ್, ಸಿಗ್ನಲ್ ಲೈಟ್, ಕನ್ನಡಿ, ಕಿಟಕಿಗಳನ್ನು ಕ್ಲೀನ್ ಮಾಡಬೇಕು. ಯಾಕೆಂದರೆ ರಾತ್ರಿ ಸ್ಪಷ್ಟವಾಗಿ ಕಾಣುವುದಕ್ಕೆ ಇವು ಅತ್ಯಂತ ಅಗತ್ಯ.

* ರಾತ್ರಿ ಕುಡಿದು ಪ್ರಯಾಣಿಸುವುದು ಅಪಾಯಕಾರಿ. ಡ್ರಿಂಕ್ಸ್ ಹಾಕದೇ ರಾತ್ರಿ ಡ್ರೈವಿಂಗ್ ಮಾಡಲಾಗುವುದಿಲ್ಲ ಎಂದು ಹೇಳುವುದು ಅಪಾಯ. ಸ್ವಲ್ಪ ಕುಡಿದು ಕೆಲವು ದೂರ ಪ್ರಯಾಣಿಸಿದರೆ ಆಲಸ್ಯ, ಸೋಮಾರಿತನ, ಆಯಾಸ ಹೆಚ್ಚಾಗುತ್ತದೆ.

* ರಾತ್ರಿ ಡ್ರೈವಿಂಗ್ ಮಾಡುವಾಗ ಸ್ಮೋಕಿಂಗ್ ಮಾಡುವುದನ್ನು ಕಡಿಮೆ ಮಾಡಿ. ಸಾಧ್ಯವಾದರೆ ಬಿಟ್ಟುಬಿಡಿ. ನಿಕೊಟಿನ್ ಮತ್ತು ಕಾರ್ಬನ್ ಮಾನೊಕ್ಷೈಡ್ ರಾತ್ರಿ ದೃಷ್ಟಿಯನ್ನು ಮಂಕಾಗಿಸುತ್ತದೆ. ರಾತ್ರಿ ಪ್ರಯಾಣದಲ್ಲಿ ಸರಿಯಾಗಿ ಕಣ್ಣು ಕಾಣುವುದು ಅತ್ಯಂತ ಅಗತ್ಯ. ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಯಾವುದೇ ಡೌಟ್ ಬಂದರೂ ಬೀಮ್ ಲೈಟ್ ಫೋಕಸ್ ಮಾಡಿ ನೋಡಬೇಕು.

* ರಾತ್ರಿ ಟ್ರಾಫಿಕ್ ನಲ್ಲಿ ಪ್ರಯಾಣಿಸುವಾಗ ನಿಮ್ಮ ವಾಹನಕ್ಕೂ ಮುಂದಿನ ವಾಹನಕ್ಕೂ ಸಾಕಷ್ಟು ಅಂತರವಿರಲಿ. ಕೆಲವೊಮ್ಮೆ ಮುಂದಿನ ವಾಹನ ಎಷ್ಟು ದೂರದಲ್ಲಿದೆ ಎಂದು ಕಣ್ಣು ಗುರುತಿಸುವಲ್ಲಿ ಸೋಲುತ್ತದೆ. ಯಾಕೆಂದರೆ ರಾತ್ರಿಯಲ್ಲಿ ದೃಷ್ಟಿ ಮಂದವಾಗಿರುತ್ತದೆ.

* ಯಾವುದಾದರೂ ವಾಹನವನ್ನು ಹಿಂಬಾಲಿಸುವಾಗ ಲೈಟ್ ಬೀಮ್ ಬಳಕೆ ಮಾಡಬೇಡಿ. ಇದು ಮುಂದೆ ವಾಹನ ಚಲಾಯಿಸುತ್ತಿರುವ ಚಾಲಕನ ದೃಷ್ಟಿಯನ್ನು ಮಂಕಾಗಿಸಬಹುದು.

* ರಾತ್ರಿ ದೂರ ಪ್ರಯಾಣದಲ್ಲಿ ಅಲ್ಲಲ್ಲಿ ಗಾಡಿ ನಿಲ್ಲಿಸಿ ಪ್ರಯಾಣಿಸುವುದು ಒಳ್ಳೆಯದು. ಸಾಧ್ಯವಾದರೆ ಸ್ನಾಕ್ಸ್, ಪಾನೀಯಗಳನ್ನು ಕುಡಿದು ಸಂಚಾರಿಸಿ. ಇದರಿಂದ ನಿಮಗೆ ಡ್ರೈವಿಂಗ್ ಮಾಡಲು ಹೆಚ್ಚು ಶಕ್ತಿ ದೊರಕುತ್ತದೆ. ಬೆಳಗಾಗಲು ಸಾಕಷ್ಟು ಸಮಯವಿರುವಾಗ, ಅಥವಾ ಮುಂಜಾನೆ ಡ್ರೈವಿಂಗ್ ಮಾಡಲು ಸಾಕಷ್ಟು ಕಠಿಣ ಸಮಯ. ಎಚ್ಚರಿಕೆಯಿಂದ ಪ್ರಯಾಣಿಸಿ.

ರಾತ್ರಿ ಜಾಲಿ ಡ್ರೈವಿಂಗ್ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ.

English summary
Three young students out of four from Bangalore lost their lives yesterday after ramming their Honda City in to a parked truck forcing Drivespark to write this tip of the day. People in their late teens and early twenties are increasingly going out on joy rides during late nights.
User Comments
suresh9682 09 May 2012 11:26 pm
GOOD
[ ಅಭಿಪ್ರಾಯ ಬರೆಯಿರಿ ]