2023 Hyundai Verna Review: ಹ್ಯುಂಡೈ ವೆರ್ನಾ ವಿಮರ್ಶೆ.. ಇಲ್ಲಿದೆ ಸಂಪೂರ್ಣ ಮಾಹಿತಿ
ಭಾರತದಲ್ಲಿ 'ಸೆಡಾನ್' ಮಾರಾಟ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಗ್ರಾಹಕರು ಎಸ್‌ಯುವಿ ಖರೀದಿಯತ್ತ ಮುಖ ಮಾಡಿರುವುದು. ಅಂತಹದರಲ್ಲಿ ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹ್ಯುಂಡೈ ಇತ್ತೀಚಿಗಷ್ಟೇ ದೇಶೀಯ ಮಾರುಕಟ್ಟೆಯಲ್ಲಿ 2023ರ 'ವೆರ್ನಾ' ಸೆಡಾನ್ ಬಿಡುಗಡೆ ಮಾಡಿದೆ.
6ನೇ ತಲೆಮಾರಿನ ಹ್ಯುಂಡೈ ವೆರ್ನಾವನ್ನು ಭವಿಷ್ಯದ ಕಾರು ಎಂದು ಬಿಂಬಿಸಲಾಗಿದ್ದು, ಈ ಸೆಡಾನ್ ಭಾರತದಂತಹ ರಸ್ತೆಗಳಲ್ಲಿ ಚಲಿಸಲು ಅತ್ಯುತ್ತಮವಾಗಿದೆ. ದೆಹಲಿಯಲ್ಲಿ ವೆರ್ನಾ ಟೆಸ್ಟ್ ಡ್ರೈವ್ ನಡೆಸಲು ನಮ್ಮ ತಂಡಕ್ಕೆ ಅವಕಾಶ ಸಿಕ್ಕಿದ್ದು, ಇದು ಯಾವ ರೀತಿ ಕಾರ್ಯಕ್ಷಮತೆ, ವೈಶಿಷ್ಟ್ಯ, ವಿನ್ಯಾಸವನ್ನು ಹೊಂದಿದೆ. ಜೊತೆಗೆ ಡ್ರೈವಿಂಗ್ ಅನುಭವ ಹೇಗಿದೆ ಎಂಬುದರ ಬಗ್ಗೆ ವಿಮರ್ಶೆ ಮಾಡಿದ್ದೇವೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಹ್ಯುಂಡೈ ವೆರ್ನಾ ಡಿಸೈನ್ & ಫೀಚರ್ಸ್: ಈ ಸೆಡಾನ್ ನೋಡಿದ ತಕ್ಷಣ, ಹಿಂದಿನ ಆವೃತ್ತಿಗಳಿಗಿಂತ ಸಾಕಷ್ಟು ಬದಲಾವಣೆಯಾದಂತೆ ಕಾಣುತ್ತದೆ. ಆಕರ್ಷಕ ಲುಕ್ ಎಲ್ಲರನ್ನು ಸೆಳೆಯಲಿದ್ದು, ಪ್ರತಿಸ್ಪರ್ಧಿ ಸೆಡಾನ್ ಗಳಿಗೆ ನಡುಕ ಹುಟ್ಟಿಸುವುದು ಪಕ್ಕಾ. ಅಲ್ಕಾಜರ್, ಟಕ್ಸನ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಐಯೋನಿಕ್ 5 ಇವಿ ಹೊಂದಿರುವಂತೆ ನೂತನ ವೆರ್ನಾವು ಸ್ಪೋಟಿಯರ್ ಡಿಸೈನ್ ಹೊಂದಿದ್ದು, ಇದು ಎಸ್‌ಯುವಿ ಆಗಿದೆಯೇ ಎಂಬ ಅನುಮಾನ ಮೂಡಲಿದ್ದು, ಅಷ್ಟರಮಟ್ಟಿಗೆ ಚೆನ್ನಾಗಿದೆ.
ಈ ವೆರ್ನಾ ಸೆಡಾನ್ ಮುಂಭಾಗದಲ್ಲಿ ಹ್ಯುಂಡೈನ ಇತರೆ ಎಸ್‌ಯುವಿಗಳಿಗೆ ಹೋಲಿಕೆಯಾಗುವಂತಹ ಸ್ಪ್ಲಿಟ್ ಹೆಡ್‌ಲೈಟ್ ಡಿಸೈನ್ ಹೊಂದಿದೆ. ಅದಕ್ಕೆ ಕನೆಕ್ಟ್ ಆಗಿರುವ LED ಡೇಟೈಮ್ ರನ್ನಿಂಗ್ ಲೈಟ್ ಕೊಂಚ ಹೆಚ್ಚೆ ಆಕರ್ಷಕವಾಗಿ ಕಾಣುತ್ತದೆ. ಕಾರ್ನರಿಂಗ್ ಲೈಟ್‌ಗಳು ಫ್ರಂಟ್ ಎಂಡ್ ಲೋಯರ್ ಡೌನ್ ನಲ್ಲಿದ್ದು, ಬ್ಲ್ಯಾಕ್ ಕಲರ್ ಪ್ಯಾರಾಮೆಟ್ರಿಕ್ ಗ್ರಿಲ್ ಬೊಂಬಾಟ್ ಆಗಿದೆ. ಹ್ಯುಂಡೈ ಬ್ಯಾಡ್ಜ್ ಅನ್ನು ಬಾನೆಟ್‌ನಲ್ಲಿ ನೋಡಬಹುದು.

ಹ್ಯುಂಡೈ ವೆರ್ನಾ ಸೆಡಾನ್‌ನ ಫಾಸ್ಟ್‌ಬ್ಲ್ಯಾಕ್ ಸ್ಟೈಲ್ ರೂಫ್ ಎಲ್ಲರನ್ನು ಸೆಳೆಯುತ್ತದೆ. ರೂಪಾಂತರಗಳಿಗೆ ಅನುಗುಣವಾಗಿ ಈ ಕಾರು, 15 ಅಥವಾ 16-ಇಂಚಿನ ವೀಲ್ಸ್ ಹೊಂದಿದ್ದು, ಅದು ಸಿಲ್ವರ್ ಅಥವಾ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಪಡೆದಿವೆ. ಇದರ ಸ್ಪೋರ್ಟಿ ನೇಚರ್ ಗೆ Z-ಶೇಪ್ಡ್ ಕ್ಯಾರೆಕ್ಟರ್ ಲೈನ್ ಸೇರಿದೆ. ಜೊತೆಗೆ ವಿಂಡೋ ಸುತ್ತಲೂ ಕ್ರೋಮ್ ಇದ್ದು, ಅದನ್ನು ಡೋರ್ ಹ್ಯಾಂಡಲ್ ನಲ್ಲಿಯು ಕಾಣಬಹುದು.
ಈ ವೆರ್ನಾ ಕಾರಿನ ಹಿಂಭಾಗವು ನೋಡಲು ತುಂಬಾ ಆಕರ್ಷಕವಾಗಿದ್ದು, ಕನೆಕ್ಟ್ದ್ LED ಟೈಲ್‌ಲೈಟ್‌ಗಳು ಹ್ಯುಂಡೈ ಹಾಗೂ ಎಂಬೆಡೆಡ್ ವೆರ್ನಾ ಲೋಗೋವನ್ನು ಒಳಗೊಂಡಿದ್ದು, ಸೂಪರ್ ಆಗಿ ಕಾಣಿಸುತ್ತದೆ. ಅಲ್ಲದೆ, ಹೊಚ್ಚ ಹೊಸ ಹ್ಯುಂಡೈ ವೆರ್ನಾ ಸೆಡಾನ್ ಸ್ಪಲ್ಪ ದೊಡ್ಡದಾದ 528 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಹೊಂದಿದ್ದು, ನೀವು ವಾರಾಂತ್ಯದಲ್ಲಿ ಕಾರಿನಲ್ಲಿ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದರೆ ಸುಲಭವಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.

ಹ್ಯುಂಡೈ ವೆರ್ನಾದ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿಜ್ ಹೊಂದಿರುವ ರೂಪಾಂತರಗಳು ಡುಯಲ್ ಟೋನ್ ಥೀಮ್ ಪಡೆದಿದ್ದರೆ, ಹೊಸ ಟರ್ಬೊ ಪೆಟ್ರೋಲ್ ಎಂಜಿನ್ ರೂಪಾಂತರವು ಡ್ಯಾಶ್ ಬೋರ್ಡ್ ಮತ್ತು ಡೋರ್ಸ್ ಮೇಲೆ ರೆಡ್ ಅಚ್ಛೇನ್ಟ್ಸ್ ಹೋಸ್ಟ್‌ನೊಂದಿಗೆ ಸ್ಪೋರ್ಟಿ ಬ್ಲ್ಯಾಕ್ ಥೀಮ್ ಅನ್ನು ಹೊಂದಿದೆ. ಇದರ ಡ್ಯಾಶ್ ಬೋರ್ಡ್ ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಡಿಸ್ಪ್ಲೇ ಹೆಚ್ಚಿನ ಸ್ಥಳಾವಕಾಶವನ್ನು ಆವರಿಸಿಕೊಂಡಿದ್ದು, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಸಪೋರ್ಟ್ ಮಾಡುತ್ತದೆ.
ಇನ್ಫೋಟೈನ್‌ಮೆಂಟ್ ಸಿಸ್ಟಮ್, 8 ಯುನಿಟ್ ಬೋಸ್ ಸರೌಂಡ್ ಸೌಂಡ್ ಸಿಸ್ಟಮ್‌ಗೆ (7 ಸ್ಪೀಕರ್‌ಗಳು ಮತ್ತು ಸಬ್ ವೂಫರ್) ಕನೆಕ್ಟ್ ಆಗಿದೆ. ಜೊತೆಗೆ ಆಕರ್ಷಕ ಡ್ರೈವರ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಕೆಳಗೆ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್ ಇದೆ. ವೈರ್‌ಲೆಸ್ ಫೋನ್ ಚಾರ್ಜರ್, ಡ್ಯುಯಲ್-ಟೋನ್ ಬೀಜ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹ್ಯುಂಡೈ ವೆರ್ನಾ ಹೊಂದಿದೆ.

ಈ ಕಾರಿನ ಕ್ಯಾಬಿನ್ ವಿಶಾಲವಾಗಿದ್ದು, ಎತ್ತರವಿರುವ ವ್ಯಕ್ತಿಗಳು ಹಿಂಭಾಗದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾವಕಾಶವಿದ್ದು, ನೂತನ ವೆರ್ನಾದ ವೀಲ್‌ಬೇಸ್ ಹಿಂದಿನ ಮಾದರಿಗೆ ಹೋಲಿಸಿದರೆ, ಕೊಂಚ (70 ಎಂಎಂ) ಉದ್ದವಾಗಿದೆ. ಮುಂಭಾಗ ಡ್ರೈವರ್ ಸೀಟ್ ಹಾಗೂ ಪಕ್ಕದ ಸೀಟ್ ಕೂಡ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇದೆ. ಜೊತೆಗೆ ಪ್ರತಿಯೊಬ್ಬರಿಗೆ ಇಷ್ಟವಾಗುವಂತಹ ಕ್ಯೂಟ್ ಸನ್ ರೂಫ್ ಅನ್ನು ಪಡೆದಿದೆ.
ಸುರಕ್ಷತೆಯ ದೃಷ್ಟಿಯಿಂದಲ್ಲೂ ಹ್ಯುಂಡೈ ವೆರ್ನಾ ಸೆಡಾನ್ ಅತ್ಯುತ್ತಮವಾಗಿದ್ದು, 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಟ್ರಾಕ್ಷನ್ ಕಂಟ್ರೋಲ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹೊಂದಿದೆ. ಪ್ರಮುಖವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನ ಪಡೆದಿದ್ದು, ಇದು ಲೇನ್ ಕೀಪ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್, ರೇರ್ ಕ್ರಾಸ್ ಟ್ರಾಫಿಕ್ ಡಿಕ್ಕಿ ಅವಾಯಿಡೆನ್ಸ್ ಅಸಿಸ್ಟ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

ಹ್ಯುಂಡೈ ವೆರ್ನಾ ಸುತ್ತಳತೆ ಹಾಗೂ ಎಂಜಿನ್ ಕಾರ್ಯಕ್ಷಮತೆ: ಹಿಂದಿನ ಮಾದರಿಗೆ ಹೋಲಿಕೆ ಮಾಡಿದರೆ, ನೂತನ ಹ್ಯುಂಡೈ ವೆರ್ನಾ ದೊಡ್ಡದಾಗಿದೆ. ಇದು 4,535 ಎಂಎಂ ಉದ್ದ, 1,765 ಎಂಎಂ ಅಗಲ, 1,475 ಎಂಎಂ ಎತ್ತರವಿದ್ದು, 2,670 ಎಂಎಂ ಉದ್ದದ ವ್ಹೀಲ್ ಬೇಸ್, 170 ಮೀಟರ್ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, ಭಾರತದ ರಸ್ತೆಗಳಲ್ಲಿ ಸಂಚರಿಸಲು ಉತ್ತಮ ಸೆಡಾನ್ ಆಗಿದೆ.
ಈ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 113 bhp ಪವರ್, 144 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಅಥವಾ ಹ್ಯುಂಡೈನ ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್ (ಆಟೋಮೆಟಿಕ್) ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಮತ್ತೊಂದು 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್, 158 bhp ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 6 ಸ್ವೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 7 ಸ್ವೀಡ್ DCT ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ. ಈ ಕಾರು, 15 ಅಥವಾ 16 ಇಂಚಿನ ವೀಲ್ಸ್, 185/65 R15 ಹಾಗೂ 205/55 R16 ಅಳತೆಯ ಟೈಯರ್ ಗಳನ್ನು ಹೊಂದಿದೆ.

ಹ್ಯುಂಡೈ ವೆರ್ನಾ ಡ್ರೈವಿಂಗ್ ಇಂಪ್ರೆಷನ್ಸ್: ಈ ಕಾರು, ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್. ಗೇರ್‌ಸ್ಟಿಕ್‌ನ ಪಕ್ಕದಲ್ಲಿರುವ ಬಟನ್ ಒತ್ತುವ ಮೂಲಕ ನಿಮಗೆ ಬೇಕಿರುವ ಮೋಡ್ ಅನ್ನು ಆಯ್ಕೆ ಮಾಡಬಹುದು. ಇಂಧನ ಉಳಿಸಬೇಕು ಎಂದುಕೊಂಡವರೂ ಸ್ಪೋರ್ಟ್ ಮೋಡ್ ಬದಲಿಗೆ ಇಕೋ ಅಥವಾ ನಾರ್ಮಲ್ ಮೋಡ್ ಆಯ್ಕೆ ಮಾಡಿಕೊಂಡರೆ ಉತ್ತಮ. ಸ್ಟೀರಿಂಗ್ ವೀಲ್ ಕೂಡ ಹೆಚ್ಚು ತೂಕವಿಲ್ಲದೆ, ಚಾಲಕ ಸ್ನೇಹಿಯಾಗಿದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ: ಹ್ಯುಂಡೈ ವೆರ್ನಾ ಸೆಡಾನ್ ಆಗಿದ್ದರೂ ಎಸ್‌ಯುವಿಗಳಿಗೆ ಸೆಡ್ಡು ಹೊಡೆಯುವಂತಹ ಆಕರ್ಷಕ ಲುಕ್ ಹೊಂದಿದೆ. ಇದರ ಎನ್ ಲೈನ್ ರೂಪಾಂತರವನ್ನು ಕೊಂಡುಕೊಳ್ಳಲು ನೀವು ಮತ್ತಷ್ಟು ದಿನ ಕಾಯಲೇಬೇಕು. ಈ ಕಾರು, ರೂ. 10.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.


Click it and Unblock the Notifications








