631 km ರೇಂಜ್ ನೀಡುವ ಹ್ಯುಂಡೈ ಐಯೊನಿಕ್ 5 ವಿಮರ್ಶೆ: ಹೇಗಿದೆ ಗೊತ್ತಾ?
ಜಗತ್ತು ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿಯತ್ತ ಮುಖ ಮಾಡುತ್ತಿದೆ. ಅದಕ್ಕೆ ತಕ್ಕಂತೆ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ, ಕಳೆದ ತಿಂಗಳು ಭಾರತದಲ್ಲಿ ಗರಿಷ್ಠ ರೇಂಜ್ ನೀಡುವ ಹ್ಯುಂಡೈ ಐಯೊನಿಕ್ 5 ಇವಿ ಬಿಡುಗಡೆಯಾಗಿದೆ. ಆ ಕಾರಿನ ಬಗ್ಗೆ ಇಲ್ಲಿದೆ ವಿಮರ್ಶೆ.
ಹ್ಯುಂಡೈ ಐಯೊನಿಕ್ 5 ಹಿನ್ನೆಲೆ:
ಸೆಪ್ಟೆಂಬರ್ 2019ರಲ್ಲಿ ಫ್ರಾಂಕ್‌ಫರ್ಟ್ ನಲ್ಲಿ ಆಯೋಜಿಸಿದ್ದ ಮೋಟಾರ್ ಶೋನಲ್ಲಿ 'ಹ್ಯುಂಡೈ 45' ಎಂಬ ಎಲೆಕ್ಟ್ರಿಕ್ ಕಾರಿನ ಕಾನ್ಸೆಪ್ಟ್ (ಪರಿಕಲ್ಪನೆ) ಅನ್ನು ಪ್ರದರ್ಶಿಸಲಾಗಿತ್ತು. ಇದು ಬಹುತೇಕ 1974ರ ಟುರಿನ್ ಮೋಟಾರ್ ಶೋನಲ್ಲಿ ಬಿಡುಗಡೆಯಾದ ಹ್ಯುಂಡೈ ಪೋನಿ ಕಾರಿಗೆ ಹೋಲಿಕೆಯಾಗುತ್ತಿತ್ತು. ಕೊರೋನಾ ಸೋಂಕಿನ ಬಳಿಕ, ಹ್ಯುಂಡೈ 45 ಕಾನ್ಸೆಪ್ಟ್ ಕಾರನ್ನು ಐಯೊನಿಕ್ 5 ಎಂದು ನಾಮಕರಣ ಮಾಡಿ, ಉತ್ಪಾದನೆಯನ್ನು ಆರಂಭ ಮಾಡಲಾಗಿತ್ತು. ಇದು ಅತಿಹೆಚ್ಚು ರೇಂಜ್ ನೀಡುವ ಸಾಮರ್ಥ್ಯ, ಶಕ್ತಿಯುತ ಬ್ಯಾಟರಿ ಪ್ಯಾಕ್ ಹಾಗೂ ವೇಗದ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದೆ.

ಇದು ಐಷಾರಾಮಿ ಟೆಸ್ಲಾ ಮಾಡೆಲ್ 3 ಕಾರಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಆಟೋಮೊಬೈಲ್ ತಜ್ಞರು ಹೇಳುತ್ತಾರೆ. ಹ್ಯುಂಡೈ ಅಯೋನಿಕ್ 5 ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಅಂತಿಮವಾಗಿ ದೆಹಲಿಯ ಆಟೋ ಎಕ್ಸ್‌ಪೋ ಮೂಲಕ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದು ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿದ್ದು, ನೋಡಲು ಅತ್ಯಾಕರ್ಷಕವಾಗಿದೆ. ಬಹುನೀರಿಕ್ಷಿತ ಈ ಕಾರನ್ನು ಗೋವಾದಲ್ಲಿ ಟೆಸ್ಟ್ ಡ್ರೈವ್ ಮಾಡುವ ಅವಕಾಶ ನಮ್ಮ ತಂಡಕ್ಕೆ ಸಿಕ್ಕಿದೆ. ಹೇಗಿದೆ ನೋಡೋಣ...
ಹ್ಯುಂಡೈ ಅಯೋನಿಕ್ 5 ವಿನ್ಯಾಸ ಮತ್ತು ವೈಶಿಷ್ಟ್ಯಗಳು:
ಈ ಕಾರಿನ ವಿನ್ಯಾಸವು ಹ್ಯುಂಡೈಯ 70ರ ದಶಕದ ಪೋನಿ ಕೂಪ್ ಕಾರಿಗೆ ಹೋಲುತ್ತದೆ ಎಂದು ಹೇಳಬಹುದು. ಆದರೆ, ಅಯೋನಿಕ್ 5 ಅನ್ನು ಮತ್ತಷ್ಟು ನೋಡಲು ಆಕರ್ಷಕವಾಗಿರುವಂತೆ ವಿನ್ಯಾಸ ಮಾಡಲಾಗಿದೆ. ರೆಟ್ರೋ ಶೈಲಿಯ ವಿನ್ಯಾಸ ಹೊಂದಿರುವುದರಿಂದ ಪ್ರಸುತ್ತ ದಿನದಲ್ಲಿಯುವ ಖರೀದಿದಾರರನ್ನು ಸೆಳೆಯುತ್ತದೆ. ಈ ಅಯೋನಿಕ್ 5, ದೊಡ್ಡ ಗಾತ್ರದ ಕಾರಾಗಿದ್ದು, ಮುಂಭಾಗದಲ್ಲಿರುವ ಕ್ಲಾಮ್‌ಶೆಲ್ ಬಾನೆಟ್ ಕೊಂಚ ಅಗಲವಾಗಿವೆ.

ಎಲ್ಇಡಿ ಹೆಡ್‌ಲೈಟ್ಸ್ ನೋಡಲು ಚೆಂದವಾಗಿದ್ದು, ಟರ್ನ್ ಇಂಡಿಕೇಟರ್‌ಗಳಂತೆ ಡಬಲ್ ಡ್ಯೂಟಿ ಮಾಡುವ ಡಿಆರ್‌ಎಲ್‌ಗಳು ಈ ಕಾರಿಗೆ ಮತ್ತಷ್ಟು ಮೆರುಗು ನೀಡುತ್ತದೆ. ಮುಂಭಾಗದ ಬಂಪರ್ ಕೆಳಗೆ ಎಲೆಕ್ಟ್ರಿಕ್ ಪವರ್‌ಟ್ರೇನ್ ಕೊಲ್ ಮಾಡಲು ಏರೋಡೈನಾಮಿಕ್ ಫ್ಲಾಪ್‌ಗಳನ್ನು ಒಳಗೊಂಡಿದೆ. ಈ ಕಾರಿನ ಸೈಡ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹ್ಯುಂಡೈ ಅದನ್ನು ಅಂದವಾಗಿ ರೆಡಿ ಮಾಡಿದೆ. 20-ಇಂಚಿನ ಅಲಾಯ್ ವೀಲ್ಸ್, ನೋಡುಗರನ್ನು ಸೆಳೆಯುತ್ತೇವೆ. ಅಲ್ಲದೆ, ಹ್ಯುಂಡೈ ಅಯೋನಿಕ್ 5, ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಕೂಡ ಪಡೆದುಕೊಂಡಿದೆ.
ಹ್ಯುಂಡೈ ಅಯೋನಿಕ್ 5, ಹಿಂಭಾಗದ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಈ ಕಾರಿನ ಬ್ಯಾಡ್ಜ್ ಮೇಲೆ ಹಾಗೂ ಟೈಲ್‌ಲೈಟ್‌ಗಳ ನಡುವೆ ಅಯೋನಿಕ್ ನೇಮ್‌ಪ್ಲೇಟ್ ನೋಡಲು ಕಾಣಸಿಗುತ್ತದೆ. ಹಿಂಬದಿಯ ಬಂಪರ್ ಕೂಡ ಅತ್ಯುತ್ತಮವಾಗಿದೆ. ಹೊರಭಾಗದ ವಿನ್ಯಾಸವನ್ನು ನೋಡಿದಾಗ ಈ ಕಾರು ದೊಡ್ಡದಾಗಿ ಕಾಣುತ್ತದೆ. ಆದರೆ, ಒಳಒಕ್ಕಾಗ ಮಾತ್ರ ನಿಜವಾದ ಗ್ರಾತ್ರದ ಬಗ್ಗೆ ಅರಿವಾಗುತ್ತದೆ. ಕ್ಯಾಬಿನ್ ಅಚ್ಚುಕಟ್ಟಾಗಿದ್ದು, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಉಪಯೋಗಿಸಿ ಡೋರ್ ಗಳನ್ನೂ ತಯಾರಿಸುವುದು ವಿಶೇಷವಾಗಿದೆ.

ಈ ಕಾರು, ಒಳಭಾಗದಲ್ಲಿ ಡಾರ್ಕ್ ಪೆಬಲ್ ಗ್ರೇ ಥೀಮ್ ನಲ್ಲಿ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ. ಅಲ್ಲಿ ಇನ್ಸ್ರುಮೆಟಲ್ ಕ್ಲಸ್ಟರ್ ಹಾಗೂ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೆಟಪ್‌ಗಳಿವೆ. ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಟಚ್ ಸ್ಕ್ರೀನ್ ಆಗಿದ್ದು, ಪ್ರಯಾಣಿಕರಿಗೆ ಒಳ್ಳೆಯ ಅನುಭವನ್ನು ನೀಡುತ್ತದೆ. 8 - ಸ್ಪೀಕರ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ರಿಮೋಟ್ ಡೋರ್ ಲಾಕ್/ಅನ್‌ಲಾಕ್, ರಿಮೋಟ್ ಕ್ಲೈಮೇಟ್ ಕಂಟ್ರೋಲ್, ಅಮೆಜಾನ್‌ನ ಅಲೆಕ್ಸಾದಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಅಯೋನಿಕ್ 5 ಕಾರಿನ ಆಸನಗಳನ್ನು ಪ್ರಯಾಣಿಕರಿಗೆ ಸರಿಹೊಂದಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಆರಾಮದಾಯಕವಾಗಿ ಪ್ರಯಾಣಿಸಲು ಸಹಕಾರಿಯಾಗಿದೆ. ವಿಶೇಷವಾಗಿ ಸ್ಪೋರ್ಟ್ ಲೆಗ್ ರೆಸ್ಟ್ ಅನ್ನು ಒಳಗೊಂಡಿದೆ. ಅಲ್ಲದೆ, ದೊಡ್ಡದಾದ ಗಾಜಿನ ರೂಫ್ ಕೂಡ ಇದೆ. ಈ ಕಾರಿನ ಇತರೆ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಆಟೋ ಡಿಫೊಗರ್, ರೈನ್-ಸೆನ್ಸಿಂಗ್ ವೈಪರ್ಸ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಡ್ಯುಯಲ್-ಜೋನ್ ಕ್ಲೇಮೇಟ್ ಕಂಟ್ರೋಲ್ ಅನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಪ್ರತಿಯೊಬ್ಬ ಕಾರು ಮಾಲೀಕರು ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆ ದೃಷ್ಟಿಯಲ್ಲಿ ಇದು ಅತ್ಯುತ್ತಮ ಕಾರು ಎಂದು ಹೇಳಬಹುದು. ಇದು 6 ಏರ್‌ಬ್ಯಾಗ್ಸ್, ಆಲ್-ವೀಲ್ ಡಿಸ್ಕ್ ಬ್ರೇಕ್ಸ್, ವರ್ಚುವಲ್ ಎಂಜಿನ್ ಸೌಂಡ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿದಂತೆ ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇಷ್ಟೇಅಲ್ಲದೆ, ಡ್ರೈವರ್ ಗಳಿಗೆ ನೆರವಾಗಲು ಲೇನ್ ಕೀಪಿಂಗ್ ಅಸಿಸ್ಟ್, ಬ್ಲಿಂಗ್ ಸ್ಪಾಟ್ ಕೊಲಿಶನ್ ವಾರ್ನಿಂಗ್, ರಾಡಾರ್-ಗೈಡೆಡ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ಹುಂಡೈ ಅಯೋನಿಕ್ 5 ಕಾರ್ಯಕ್ಷಮತೆ:
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹುಂಡೈ ಅಯೋನಿಕ್ 5 ಕಾರು, 72.6kwh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಲಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 631 km ರೇಂಜ್ ನೀಡಲಿದೆ. ಈ ಬ್ಯಾಟರಿ ಪ್ಯಾಕ್, ರೇರ್ ವೀಲ್ಸ್ ಗೆ ಪವರ್ ಒದಗಿಸುವ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಕನೆಕ್ಟ್ ಆಗಿದ್ದು, 214.5 bhp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಕೇವಲ 7.6 ಸೆಕೆಂಡುಗಳಲ್ಲಿ 0-100km/h ವೇಗವನ್ನು ಪಡೆಯಲಿದ್ದು, 185km/h ಟಾಪ್ ಸ್ವೀಡ್ ಹೊಂದಿದೆ.

ಹುಂಡೈ ಅಯೋನಿಕ್ 5 ಕಾರಿನ ದೊಡ್ಡ ವಿಶೇಷತೆ ಎಂದರೆ, ಅದು ವೇಗದ ಚಾರ್ಜಿಂಗ್ ಆಯ್ಕೆ.. ಇದು ಎಲ್ಲರನ್ನು ಆಕರ್ಷಿಸುತ್ತದೆ ಎಂದು ಹೇಳಬಹುದು. 350kW DC ವೇಗದ ಚಾರ್ಜರ್ ಬಳಕೆಯಲ್ಲಿ ಬ್ಯಾಟರಿ ಪ್ಯಾಕ್ 10-80% ಚಾರ್ಜ್ ಆಗಲು ಕೇವಲ 18 ನಿಮಿಷ ತೆಗೆದುಕೊಳ್ಳುತ್ತದೆ. 50kW DC ಚಾರ್ಜರ್‌ನಲ್ಲಿ ಶೇಕಡ 10 ರಿಂದ 80% ಬ್ಯಾಟರಿ ಚಾರ್ಜ್ ಆಗಲು 57 ನಿಮಿಷ ಬೇಕು. 11kW AC ಚಾರ್ಜರ್‌ನೊಂದಿಗೆ (ಮನೆ ವಿದ್ಯುತ್) 100% ಬ್ಯಾಟರಿ ಚಾರ್ಜ್ ಆಗಲು 6 ಗಂಟೆ ಮತ್ತು 55 ನಿಮಿಷ ತೆಗೆದುಕೊಳ್ಳುತ್ತದೆ.
ಈ ಕಾರು ಗಾತ್ರದಲ್ಲೂ ಕೊಂಚ ದೊಡ್ಡದಾಗಿದ್ದು, 4,635 ಎಂಎಂ ಉದ್ದ, 1,890 ಎಂಎಂ ಅಗಲ ಹಾಗೂ 1,625 ಎಂಎಂ ಎತ್ತರವಾಗಿದ್ದು, 3,000 ಎಂಎಂ ಉದ್ದದ ವೀಲ್‌ಬೇಸ್ ಹಾಗೂ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದ್ದು, ದೊಡ್ಡದಾದ 527 ಲೀಟರ್ ಬೂಟ್ ಸ್ಪೇಸ್ ಅನ್ನು ಪಡೆದಿದೆ. ಇದೊಂದು ಎಲೆಕ್ಟ್ರಿಕ್ ಕಾರಾಗಿರುವುದರಿಂದ ಮುಂಭಾಗದ ಬಾನೆಟ್ ಅಡಿಯಲ್ಲಿ ಸಣ್ಣದಾದ 52 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಇದೆ.
ಡ್ರೈವಿಂಗ್ ಇಂಪ್ರೆಷನ್ಸ್:
ಹುಂಡೈ ಅಯೋನಿಕ್ 5 ಕಾರು, ಮೂರು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳೆಂದರೆ, ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್. ಕಂಪನಿ ಹೇಳಿದಂತೆ ಈ ಕಾರು, 7.6 ಸೆಕೆಂಡ್‌ಗಳಿಂದ 100 km/h ವೇಗವನ್ನು ತಲುಪುತ್ತದೆ ಎಂಬುದನ್ನು ಸುಲಭವಾಗಿ ನಂಬಬಹುದು. ಡ್ರೈವಿಂಗ್ ಅನ್ನು ಆರಾಮದಾಯಕವಾಗಿ ಮಾಡಬಹುದು. ಸಸ್ಪೆನ್ಶನ್ ಸೆಟಪ್ ಅದ್ಬುತವಾಗಿದ್ದು, ರಸ್ತೆಗಳಲ್ಲಿ ಈ ಕಾರು ಅತ್ಯುತ್ತಮವಾಗಿ ಚಲಿಸುತ್ತದೆ. ಈ ಕಾರು, ತೂಕ ಹಾಗೂ ಗಾತ್ರದಲ್ಲಿ ಸಾಕಷ್ಟು ಸಮತೋಲನ ಕಾಯ್ದುಕೊಳ್ಳುತ್ತದೆ.
ಸ್ಟೀರಿಂಗ್ ವೀಲ್ ಅದ್ಭುತವಾಗಿ ಕಾರ್ಯನಿರ್ವಹಿಸಲಿದ್ದು, ಬ್ರೇಕಿಂಗ್ ವ್ಯವಸ್ಥೆ ಕೂಡ ಉತ್ತಮವಾಗಿದೆ. ಕ್ಯಾಬಿನ್ ಕೂಡ ಸೌಂಡ್ ಪ್ರೊಫ್ ಆಗಿದೆ. ಆದರೂ ಟೈರ್ ಶಬ್ದವು ಕ್ಯಾಬಿನ್‌ಗೆ ಸ್ವಲ್ಪಮಟ್ಟಿಗೆ ಕೇಳಿಸುತ್ತದೆ. ಅಲ್ಲದೆ, ಟ್ರಾಫಿಕ್‌ನಲ್ಲಿ ಉತ್ತಮವಾಗಿ ಕಾರನ್ನು ಓಡಿಸಬಹುದು. ಈ ಕಾರು, ಸುಮಾರು 631 km ರೇಂಜ್ ನೀಡಬಹುದು ಎಂದು ಹೇಳಿದರೂ, ದೇಶದ ರಸ್ತೆಯಲ್ಲಿ ಒಂದೇ ಚಾರ್ಜ್‌ನಲ್ಲಿ ಕನಿಷ್ಠ 470 ರಿಂದ 500 km ಸುಲಭವಾಗಿ ಮುಟ್ಟುತ್ತದೆ. ಆದರೆ, ಚಾರ್ಜ್ ಕೂಡ ವೇಗವಾಗಿ ಇಳಿಯುತ್ತದೆ.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ:
ಹುಂಡೈ ಅಯೋನಿಕ್ 5 ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಅತ್ಯುತ್ತಮ ಪ್ರೀಮಿಯಂ ಎಲೆಕ್ಟ್ರಿಕ್ ಕಾರಾಗಿದ್ದು, ಬರೋಬ್ಬರಿ ರೂ.45.95 ಲಕ್ಷ ಎಕ್ಸ್ ಶೋರೊಂ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ದುಬಾರಿ ಬೆಲೆಯ ಕಾರಾಗಿದೆ ಎಂದು ಹೇಳಬಹುದು. ಅಲ್ಲದೆ, ಇದರ ರೇಂಜ್ ಕೂಡ ಉತ್ತಮವಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಜೊತೆಗೆ ವೇಗದ ಚಾರ್ಜಿಂಗ್ ಆಯ್ಕೆ ಎಲ್ಲರಿಗೂ ಇಷ್ಟವಾಗತ್ತದೆ. ಇವಿ ಮಾರುಕಟ್ಟೆ ದೇಶದಲ್ಲಿ ಬೆಳವಣಿಗೆಯಾಗುತ್ತಿದ್ದು, ಅದಕ್ಕೆ ತಕ್ಕಂತೆ ಇದೊಂದು ಐಷಾರಾಮಿ ಕಾರು ಎಂದು ಹೇಳಿದರೆ ತಪ್ಪಾಗುವುದಿಲ್ಲ.


Click it and Unblock the Notifications








