Kia Carens Clavis EV: 7-ಸೀಟರ್.. ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ ರಿವ್ಯೂ, ಬೆಲೆಯೂ ಕಮ್ಮಿ.. ಲಕ್ಷುರಿ ಫೀಚರ್ಸ್!
ಹೊಚ್ಚ ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ (Kia Carens Clavis EV) ಬಿಡುಗಡೆಗೊಂಡು ವಾರವಷ್ಟೇ ಕಳೆದಿದೆ. ಇದೊಂದು ಎಲೆಕ್ಟ್ರಿಕ್ ಚಾಲಿತ ಎಂಪಿವಿಯಾಗಿದ್ದು, ಅತ್ಯುತ್ತಮವಾದ ಕಾರ್ಯಕ್ಷಮತೆ ಹಾಗೂ ಐಷಾರಾಮಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರು ಇಂಧನ ಚಾಲಿತ 'ಕ್ಯಾರೆನ್ಸ್ ಕ್ಲಾವಿಸ್'ನ ತದ್ರೂಪದಂತಿದ್ದು, ಬಹುತೇಕ ಅದೇ ರೀತಿಯ ವಿನ್ಯಾಸವನ್ನು ಪಡೆದಿದೆ. ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ರೂ.17.99 ಲಕ್ಷದಿಂದ ರೂ. 24.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡವು ಈ ಕಾರಿನ ಟೆಸ್ಟ್ ಡ್ರೈವ್‌ನ್ನು ನಡೆಸಿದೆ. ಬನ್ನಿ, 'ಕ್ಯಾರೆನ್ಸ್ ಕ್ಲಾವಿಸ್ ಇವಿ' ಹೇಗಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊರಭಾಗದ ವಿನ್ಯಾಸ & ಬಣ್ಣಗಳು (Exterior Design & Colors)
ನೂತನ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿಯು ಹೊರಭಾಗದಲ್ಲಿ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಅದು ಈ ಕಾರಿನತ್ತ ಪ್ರತಿಯೊಬ್ಬರನ್ನು ಸೆಳೆಯುವಂತಿದೆ. ತ್ರೈ-ಅಂಗುಲರ್ ಶೇಪ್ಡ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಫಾಗ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು, ಡೈಮೆಂಡ್ ಕಟ್ ಅಲಾಯ್ ವೀಲ್‌ಗಳು ಹಾಗೂ 215/55 ಆರ್17 ಅಳತೆಯ ಟೈಯರ್‌ಗಳನ್ನು ಪಡೆದಿದೆ. ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಪ್ಯೂಟರ್ ಆಲಿವ್ & ಇಂಪೀರಿಯಲ್ ಬ್ಲೂ ಸೇರಿದಂತೆ 6 ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.

ಒಳಭಾಗದ ವಿನ್ಯಾಸ & ವೈಶಿಷ್ಟ್ಯಗಳು (Interior Design & Features):
ಈ ಕಾರು ವಿಶಾಲವಾದ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ. ಅದಕ್ಕೆ ತಕ್ಕಂತೆ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಲು ಸಾಧ್ಯವಾಗಲಿದೆ. ಲೆಗ್‌ರೂಮ್ ಕೂಡ ಸಾಕಷ್ಟಿದೆ. ದೂರದ ಊರುಗಳಿಗೆ ಹೋಗುವಾಗ ಹೆಚ್ಚಿನ ಲಗೇಜ್ ತೆಗದುಕೊಂಡು ಹೋಗಲು 216 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ. ಇದರೊಂದಿಗೆ ಅತ್ಯಾಧುನಿಕವಾದ ಡ್ಯಾಶ್‌ಬೋರ್ಡ್‌ನ್ನು ಒಳಗೊಂಡಿದೆ.
ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ ವೈಶಿಷ್ಟ್ಯಗಳ ಕುರಿತಂತೆ ಯಾರು ಮರು ಮಾತಾಡುವಂತಿಲ್ಲ. ಅವು ಎಲ್ಲರನ್ನು ತಿರುಗಿ ನೋಡುವಂತೆ ಮಾಡಬಲ್ಲವು. ಈ ಕಾರು 12.3-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿರುವ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಏರ್ ಪ್ಯೂರಿಫೈಯರ್ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, 8 ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆದಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):
ಸುರಕ್ಷತೆಯ ವಿಚಾರದಲ್ಲಿ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.
ಕಾರ್ಯಕ್ಷಮತೆ (Performance):
ಈ ಕಾರು ಶಕ್ತಿಯುತವಾದ ಎರಡು ಪವರ್‌ಟ್ರೇನ್‌ನ್ನು ಒಳಗೊಂಡಿದೆ. 42 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 404 ಕಿಲೋಮೀಟರ್ ಕ್ರಮಿಸುತ್ತದೆ. ಇದರಲ್ಲಿವ ಎಲೆಕ್ಟ್ರಿಕ್ ಮೋಟಾರ್, 135 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 255 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಇನ್ನೊಂದು 51.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 490 ಕಿಲೋಮೀಟರ್ ಓಡುತ್ತದೆ. ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್, 171 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 255 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಚಾಲನಾ ಅನುಭವ (Driving Experience):
ನಮ್ಮ ತಂಡಕ್ಕೆ ಟೆಸ್ಟ್ ಡ್ರೈವ್ ಮಾಡುವಾಗ ನೂತನ 'ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ' ಅದ್ಭುತವಾದ ಚಾಲನಾ ಅನುಭವವನ್ನು ನೀಡಿತು. ಇದು ಇಕೋ, ನಾರ್ಮಲ್ & ಸ್ಪೋರ್ಟ್ ಎಂಬ ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ನಾರ್ಮಲ್ ಮೋಡ್ ಸಮತೋಲನವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ. ಸ್ಪೋರ್ಟ್ ಮೋಡ್ ವೇಗವಾಗಿ ಹೋಗಲು ನೆರವಾದರೆ, ಇಕೋ ಮೋಡ್‌ನಿಂದ ಚಾರ್ಜ್ ಉಳಿಸಬಹುದು.

ಈ ಕಾರು ಯಾವುದೇ ರಸ್ತೆಯಲ್ಲಿ ಬೇಕಾದರೂ ಸುಲಭವಾಗಿ ಹೋಗಬಲ್ಲದು. ಅದರಲ್ಲೂ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್‌ಗಳು ತುಂಬಾ ಚೆನ್ನಾಗಿ ಕೆಲಸ ಮಾಡಿದವು. ಬಾಡಿ ರೋಲ್ ಸಹ ಕಡಿಮೆಯಿದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್ 100 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ಉಪಯೋಗ 10-80% ಚಾರ್ಜ್ ಆಗಲು 39 ನಿಮಿಷಗಳನ್ನು ತೆಗದುಕೊಳ್ಳುತ್ತದೆ. ಆದರೆ, 3.3 ಕೆಡಬ್ಲ್ಯೂ ಆನ್‌ಬೋರ್ಡ್ ಚಾರ್ಜರ್ ಬಳಕೆಯಲ್ಲಿ ತುಂಬಾ ನಿಧಾನಗತಿಯಲ್ಲಿ ಚಾರ್ಜ್ ಆಗುತ್ತದೆ. ಅದು ಮಾತ್ರ ಸುಧಾರಣೆಗೊಳ್ಳಬೇಕಾಗಿದೆ.
ಒಟ್ಟಾರೆ ಅಭಿಪ್ರಾಯ (Total Verdict):
ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಇವಿ ಅತ್ಯಾಕರ್ಷಕವಾಗಿರುವ ಕಾರಾಗಿದ್ದು, 2 ಸಣ್ಣ ಕುಟುಂಬಗಳು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು. ವಿಶೇಷವಾಗಿ ಎಲೆಕ್ಟ್ರಿಕ್ ಎಂಪಿವಿ ಹುಡುಕುತ್ತಿರುವವರಿಗೆ ಈ ಕ್ಯಾರೆನ್ಸ್ ಕ್ಲಾವಿಸ್ ಇವಿಯು ಅತ್ಯುತ್ತಮ ಆಯ್ಕೆಯಾಗಲಿದ್ದು, ಬೆಲೆಗೆ ತಕ್ಕ ಉತ್ಪನ್ನವಾಗಿದೆ. ಇಂದಿನಿಂದ ಬುಕ್ಕಿಂಗ್‌ನ್ನು ತೆರೆಯಲಾಗಿದೆ. ಆಸಕ್ತರು ಸಮೀಪದ ಡೀಲರ್‌ಶಿಪ್ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ.25,000 ಮುಂಗಡ ಹಣ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು.


Click it and Unblock the Notifications








