Kia EV6 Facelift Review: 2025ರ ಕಿಯಾ ಇವಿ6 ಫೇಸ್‌ಲಿಫ್ಟ್ ರಿವ್ಯೂ.. ಈ ಕಾರಿಗೆ ಸರಿ ಸಾಟಿಯೇ ಇಲ್ಲ!
ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ (kia motors) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದೇ ಜನವರಿಯಲ್ಲಿ ಆದ್ದರಿಯಾಗಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಕಿಯಾ ಕಂಪನಿಯು ಹೊಚ್ಚ ಹೊಸ 'ಇವಿ6 ಫೇಸ್‌ಲಿಫ್ಟ್' ಕಾರನ್ನು ಪರಿಚಯಿಸಿತ್ತು. ಈ ಎಲೆಕ್ಟ್ರಿಕ್ ಎಸ್‌ಯುವಿ ಹಲವು ಹೊಸತನಗಳಿಗೂ ಸಾಕ್ಷಿಯಾಗಿದ್ದು, ರೂ.65.8 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.
ಇತ್ತೀಚೆಗೆ, ನಮ್ಮ ತಂಡಕ್ಕೆ ನೂತನ ಕಿಯಾ ಇವಿ6 ಫೇಸ್‌ಲಿಫ್ಟ್ (Kia EV6 Facelift) ಕಾರನ್ನು ಟೆಸ್ಟ್ ಡ್ರೈವ್ ನಡೆಸಲು ಆಂಧ್ರ ಪ್ರದೇಶದಲ್ಲಿರುವ ಕಂಪನಿಯ ತಯಾರಿಕಾ ಘಟಕಕ್ಕೆ ಆಹ್ವಾನಿಸಲಾಗಿತ್ತು. ಬನ್ನಿ, ಈ ಎಲೆಕ್ಟ್ರಿಕ್ ಎಸ್‌ಯುವಿ ವಿನ್ಯಾಸವೇನು.. ವೈಶಿಷ್ಟ್ಯಗಳು ಹೇಗಿವೆ.. ಯಾವ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿದೆ ಎಂಬುದನ್ನು ತಿಳಿಯೋಣ.

ಹೊಸ ಕಿಯಾ ಇವಿ6 ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಏನೆಲ್ಲ ಬದಲಾಗಿದೆ?
ಈ ಕಾರಿನ ಹೊರಭಾಗದ ವಿನ್ಯಾಸದಲ್ಲಿ ಅಂದರೆ ಡಿಸೈನ್‌ನಲ್ಲಿ ಒಂದಷ್ಟು ಪ್ರಮುಖವಾದ ಮಾರ್ಪಾಡುಗಳನ್ನು ಗುರುತಿಸಬಹುದು. ಮುಂಭಾಗ (ಫ್ರಂಟ್) ನವೀಕರಿಸಿದ ಬಂಪರ್ ಮತ್ತು ಆಕರ್ಷಕವಾದ ಹೆಡ್‌ಲೈಟ್‌ಗಳು ಒಳಗೊಂಡಿದೆ. ಇದರೊಟ್ಟಿಗೆ ಗ್ರಿಲ್‌ನ ಉದ್ದಕ್ಕೂ ಎಲ್ಇಡಿ ಲೈಟ್ ಬಾರ್‌ನಿಂದ ಕನೆಕ್ಟ್ ಆಗಿರುವ ಇಂಟಿಗ್ರೇಟೆಡ್ ಹುಕ್-ಶೇಪ್ಡ್ ಡಿಆರ್‌ಎಲ್‌ಗಳನ್ನು ನೋಡಬಹುದು. ಜೊತೆಗೆ ಹಿಂಭಾಗವು (ರೇರ್) ಉತ್ತಮವಾಗಿರುವ ವಿನ್ಯಾಸವನ್ನು ಹೊಂದಿದೆ. 19-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ.
ನೂತನ ಕಿಯಾ ಇವಿ6 ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಎಸ್‌ಯುವಿಯ ಒಳಭಾಗದಲ್ಲೂ ಕೆಲವೊಂದು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಇದು 'ಇವಿ9' ಎಲೆಕ್ಟ್ರಿಕ್ ಕಾರಿನಲ್ಲಿ ಕಂಡುಬರುವಂತೆ 3-ಸ್ಪೋಕ್ ಸ್ಟೀರಿಂಗ್ ವೀಲ್ ಆಯ್ಕೆಯನ್ನು ಹೊಂದಿದೆ. ಈ ಎಸ್‌ಯುವಿಯಲ್ಲಿ ಡ್ರೈವ್ ಮೋಡ್‌ಗಳನ್ನು ಸಂದರ್ಭಕ್ಕೆ ತಕ್ಕಂತೆ ಬದಲು ಮಾಡಲು ಬಟನ್‌ನ್ನು ಕೊಡಲಾಗಿದೆ. ಸೆಂಟ್ರಲ್ ಕನ್ಸೋಲ್‌ಗೆ ಒಳ್ಳೆಯ ರೀತಿಯಲ್ಲಿ ಫಿನಿಶ್ ನೀಡಲಾಗಿದೆ. ವಿಶೇಷವಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಇದ್ದು, 'ಕೀ'ಯನ್ನು ಬಳಕೆ ಮಾಡದೆಯೇ ಕಾರನ್ನು ಚಾಲು ಮಾಡಬಹುದು.

ಈ ಕಾರಿನಲ್ಲಿ ಪ್ರಯಾಣಿಕರಿಗೆ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ಕೊಡಲಾಗಿದೆ. ಅದಕ್ಕಾಗಿ ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯವನ್ನು ನೀಡಲಾಗಿದೆ. ಇದು ಲೇನ್-ಕೀಪಿಂಗ್, ಫಾಲೋ & ಎಕ್ಸಿಟ್ ಅಸಿಸ್ಟೆನ್ಸ್, ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ಅಲರ್ಟ್ ಸೇರಿದಂತೆ ಹತ್ತಾರು ಅಂಶಗಳನ್ನು ಒಳಗೊಂಡಿದೆ.
ಹೊಸ ಕಿಯಾ ಇವಿ6 ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಶಕ್ತಿಯುತವಾದ ದೊಡ್ಡ ಗಾತ್ರದ 84 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಈ ಮೊದಲು ಇದೇ ಕಾರು 77.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿತ್ತು.

ನೂತನ ಕಾರು ಬೃಹದಾಕಾರದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದುಕೊಂಡಿರುವ ಹಿನ್ನೆಲೆ, ಸಂಪೂರ್ಣ ಚಾರ್ಜ್‌ನಲ್ಲಿ 663 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರ ಬ್ಯಾಟರಿಯು 350 ಕೆಡಬ್ಲ್ಯೂ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ ಶೇಕಡ 10 ರಿಂದ 80% ಚಾರ್ಜ್ ಆಗಲು ಕೇವಲ 18 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 50 ಕೆಡಬ್ಲ್ಯೂ ಡಿಸಿ ಚಾರ್ಜರ್ ಉಪಯೋಗ ಮಾಡಿದಾಗ 73 ನಿಮಿಷಗಳು ಬೇಕಾಗುತ್ತದೆ.
ಚಾಲನಾ ಅನುಭವ..
ಹೊಸ 2025ರ ಕಿಯಾ ಇವಿ6 ಫೇಸ್‌ಲಿಫ್ಟ್ ಕಾರು ಅದ್ಭುತವಾದ ಚಾಲನಾ ಅನುಭವ ಒದಗಿಸಿತು. ಇದರಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ಬಹುಮುಖ್ಯವಾಗಿ ಈ ಎಲೆಕ್ಟ್ರಿಕ್ ಎಸ್‌ಯುವಿಯ ಡುಯಲ್- ಮೋಟಾರ್ ಸೆಟಪ್, 320 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 605 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

ಕಿಯಾ ಕಂಪನಿಯು 'ಇವಿ6 ಫೇಸ್‌ಲಿಫ್ಟ್' 5.3 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ ಎಂದು ಹೇಳಿಕೊಂಡಿದೆ. ನಾವು ಟೆಸ್ಟ್ ಟ್ರ್ಯಾಕ್‌ನಲ್ಲಿ ಈ ಅಂಕಿಅಂಶವನ್ನು ಸುಲಭವಾಗಿ ಸಾಧಿಸುವಲ್ಲಿಯೂ ಸಫಲತೆಯನ್ನು ಕಂಡೆವು. ಎಲ್ಲ ಸನ್ನಿವೇಶದಲ್ಲೂ ಈ ಕಾರಿನ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಉತ್ತಮವಾಗಿಯೇ ಕಾರ್ಯನಿರ್ವಹಿಸಿತು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ..
ಹೊಚ್ಚ ಹೊಸ ಕಿಯಾ ಇವಿ6 ಫೇಸ್‌ಲಿಫ್ಟ್ ಎಲೆಕ್ಟ್ರಿಕ್ ಎಸ್‌ಯುವಿ ಸಾಕಷ್ಟು ಅತ್ಯುತ್ತಮವಾಗಿದೆ. ಈ ಕಾರು ಜಾಸ್ತಿ ರೇಂಜ್ ನೀಡಲಿದ್ದು, ದೂರದ ಊರುಗಳಿಗೂ ಪ್ರಯಾಣ ಮಾಡಬಹುದು. ಆದರೆ, ಇವಿ6 ಹೆಚ್ಚಿನ ಬೆಲೆಯನ್ನು ಹೊಂದಿದ್ದು, ಮಧ್ಯಮ ವರ್ಗದ ಜನರು ಖರೀದಿ ಮಾಡಲು ಹಿಂದೇಟನ್ನು ಹಾಕಬಹುದು. ಮುಂಬರುವ ದಿನಗಳಲ್ಲಿ ಕಿಯಾ ಇವಿ6 ಫೇಸ್‌ಲಿಫ್ಟ್ ಎಸ್‌ಯುವಿಗೆ ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








