Maruti Suzuki Victoris Review: 29 ಕಿ.ಮೀ ಮೈಲೇಜ್, ಮಾರುತಿ ಸುಜುಕಿ ವಿಕ್ಟೋರಿಸ್ ರಿವ್ಯೂ.. ಚಿನ್ನದಂತಹ ಕಾರಿದು!
ಇದೇ ಸೆ.16ರಂದು ಹೊಚ್ಚ ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ (Maruti Suzuki Victoris) ಕಾರನ್ನು ಬಿಡುಗಡೆಗೊಳಿಸಲಾಗಿತ್ತು. ಇದೊಂದು ಮಿಡ್-ಸೈಜ್ ಎಸ್‌ಯುವಿಯಾಗಿದ್ದು, ಅರೆನಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಈ ಕಾರು ರೂ.10.50 ಲಕ್ಷದಿಂದ ರೂ.19.99 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಗ್ರಾಹಕರ ಖರೀದಿ ಲಭ್ಯವಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಜಡ್ಎಕ್ಸ್ಐ, ಜಡ್ಎಕ್ಸ್ಐ (ಒ), ಜಡ್ಎಕ್ಸ್ಐ ಪ್ಲಸ್ ಮತ್ತು ಜಡ್ಎಕ್ಸ್ಐ (ಒ) ಪ್ಲಸ್ ಎಂಬ ರೂಪಾಂತರಗಳ ಆಯ್ಕೆಯನ್ನು ಹೊಂದಿದೆ. ಈಗಾಗಲೇ, ಬುಕ್ಕಿಂಗ್ ಶುರುವಾಗಿದ್ದು, ಆಸಕ್ತರು, ರೂ.11,000 ಮುಂಗಡ ಹಣ ಕಟ್ಟಿ ಆರ್ಡರ್ ಮಾಡಬಹುದಾಗಿದೆ.
ಈಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡಕ್ಕೆ ರಾಜಸ್ಥಾನದ ಜೈಪುರದಲ್ಲಿ ನೂತನ 'ಮಾರುತಿ ವಿಕ್ಟೋರಿಸ್' ಕಾರು ಟೆಸ್ಟ್ ಡ್ರೈವ್ ನಡೆಸುವುದಕ್ಕೆ ಲಭ್ಯವಾಗಿತ್ತು. ಬನ್ನಿ, ನೂತನ ಎಸ್‌ಯುವಿಯ ವಿನ್ಯಾಸವೇನು.. ವೈಶಿಷ್ಟ್ಯಗಳೇನು.. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಕುರಿತಂತೆ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

ವಿನ್ಯಾಸ & ಬಣ್ಣಗಳು (Design & Colors):
ಹೊಸ ಮಾರುತಿ ವಿಕ್ಟೋರಿಸ್ ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದ್ದು, ನೋಡಿಗರ ಸೆಳೆಯುವಂತಿದೆ. ವಿಶೇಷವಾಗಿ' ಗ್ರ್ಯಾಂಡ್ ವಿಟಾರಾ' ಕಾರಿನ ಪ್ಲಾಟ್‌ಫಾರ್ಮ್‌ನ್ನು ಆಧರಿಸಿದೆ. ಗ್ರಿಲ್‌ನಲ್ಲಿ ಬ್ರಷ್ಡ್ ಅಲ್ಯೂಮಿನಿಯಂ ಸ್ಟ್ರಿಪ್ ಇದೆ. ಶಾರ್ಪ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಸ್ಲಿಮ್ ಪಿಕ್ಸೆಲ್ ಟೈಪ್ ಎಲ್ಇಡಿ ಡಿಆರ್‌ಎಲ್‌ಗಳು, ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು, ಶಾರ್ಕ್ ಫಿನ್ ಆಂಟೆನಾ, ಕನೆಕ್ಟ್ಡ್ ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು 18 ಇಂಚಿನ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.
ಈ ವಿಕ್ಟೋರಿಸ್ ಎಸ್‌ಯುವಿಯು ಹಲವು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿದಾರರಿಗೆ ದೊರೆಯುತ್ತದೆ. ಬಹುಮುಖ್ಯವಾಗಿ ಆರ್ಕ್ಟಿಕ್ ವೈಟ್, ಸ್ಪ್ಲೆಂಡಿಡ್ ಸಿಲ್ವರ್, ಎಟರ್ನಲ್ ಬ್ಲೂ, ಸಿಜ್ಲಿಂಗ್ ರೆಡ್, ಬ್ಲೂಯಿಶ್ ಬ್ಲ್ಯಾಕ್, ಮ್ಯಾಗ್ಮಾ ಗ್ರೇ ಹಾಗೂ ಮಿಸ್ಟಿಕ್ ಗ್ರೀನ್ ಒಳಗೊಂಡಂತೆ ಹಲವು ಬಣ್ಣಗಳನ್ನು ಪಡೆದಿದೆ.

ಸುತ್ತಳತೆ (Dimensions):
ನೂತನ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ವಿಶಾಲ ಗಾತ್ರದಲ್ಲಿದೆ. 4,360 ಎಂಎಂ ಉದ್ದ, 1,655 ಎಂಎಂ ಅಗಲ ಹಾಗೂ 1,795 ಎಂಎಂ ಎತ್ತರವಿದೆ. ಜೊತೆಗಿದು 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,600 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 1305 ಕೆಜಿವರೆಗೂ ತೂಗುತ್ತದೆ. 45 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್ ಹಾಗೂ 55 ಲೀಟರ್‌ನಷ್ಟು ಸಿಎನ್‌ಜಿ ಟ್ಯಾಂಕ್‍ನ್ನು ಒಳಗೊಂಡಿದೆ.
ಆಸನ ಆಯ್ಕೆ ಬೂಟ್ ಸ್ಪೇಸ್ (Seating Capacity & Boot Space):
ಇದು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸ್ಟ್ಯಾಂಡರ್ಡ್ ಆಗಿ 373 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಕಾರ್ಯಕ್ಷಮತೆ & ಮೈಲೇಜ್ (Performance & Mileage):
ನೂತನ ವಿಕ್ಟೋರಿಸ್ ಎಸ್‌ಯುವಿಯು ಹೆಚ್ಚು ಶಕ್ತಿಯುತವಾದ 3 ಪವರ್‌ಟ್ರೇನ್‌ನ್ನು ಒಳಗೊಂಡಿದೆ. ಇದರ 1.5-ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 103 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 137 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 21.06 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಮತ್ತೊಂದು 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಎಂಜಿನ್, 116 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 141 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇ-ಸಿವಿಟಿ ಗೇರ್‌ಬಾಕ್ಸ್‌ನ್ನು ಹೊಂದಿದೆ. 28.65 ಕಿ.ಮೀ ವರಗೆ ಮೈಲೇಜ್ ಕೊಡುತ್ತದೆ.

ಇನ್ನೊಂದು 1.5-ಲೀಟರ್ ಸಿಎನ್‌ಜಿ ಎಂಜಿನ್, 88 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 121 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ಒಳಗೊಂಡಿದೆ. 27.02 ಕಿ.ಮೀ ಮೈಲೇಜ್ ನೀಡುತ್ತದೆ.
ಒಳಾಂಗಣ & ವೈಶಿಷ್ಟ್ಯಗಳು (Interior & Features):
ವಿಕ್ಟೋರಿಸ್‌ನ ಕ್ಯಾಬಿನ್ ವಿನ್ಯಾಸವು ತುಂಬಾ ಅಚ್ಚುಕಟ್ಟಾಗಿದೆ. ಪ್ರತಿಯೊಬ್ಬರನ್ನು ಪ್ರಯಾಣಿಸುವಂತೆ ಪ್ರೇರೇಪಿಸುತ್ತದೆ. ಅದಕ್ಕೆ ತಕ್ಕಂತೆ 10.1-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಹೆಡ್‌ರೆಸ್ಟ್‌ಗಳು, ಕಪ್ ಹೋಲ್ಡರ್‌ಗಳು, ಬಾಟಲ್ ಹೋಲ್ಡರ್‌ಗಳು, 64-ಕಲರ್ ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್ ಹಾಗೂ ಆಟೋ ಎಸಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು (Safety Features):
ನೂತನ ಮಾರುತಿ ವಿಕ್ಟೋರಿಸ್‌ನ್ನು ಗ್ಲೋಬಲ್ ಎನ್‌ಸಿಎಪಿ (Global NCAP) ಹಾಗೂ ಭಾರತ್ ಎನ್‌ಸಿಎಪಿ (Bharat NCAP) ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದ್ದು, 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿವೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಚಾಲನಾ ಅನುಭವ (Driving Impressions):
ಹೊಸ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿಯು ಅದ್ಭುತವಾದ ಚಾಲನಾ ಅನುಭವವನ್ನು ಒದಗಿಸಿತು. ಇದು ಲೀಲಾಜಾಲವಾಗಿ ಚಲಿಸಿತು. ಸ್ಟೀರಿಂಗ್ ವೀಲ್ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲದು. ತ್ವರಿತ ಪಥ ಬದಲಾಯಿಸಲು ನೆರವಾಗುತ್ತದೆ. ಆದರೂ, ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ವೇಗವರ್ಧನೆಯೂ ಕೊಂಚ ನಿಧಾನವೆಂಬಂತೆ ಭಾಸವಾಗುತ್ತದೆ.

ಇದನ್ನು ಯಾವುದೇ ರಸ್ತೆಯಲ್ಲಿ ಬೇಕಾದರೂ ಸುಲಭವಾಗಿ ಓಡಿಸಬಹುದು. ತಿರುವುಗಳಲ್ಲಿ ಸಸ್ಪೆನ್ಷನ್ ಸೆಟಪ್ ಮತ್ತು ಡಿಸ್ಕ್ ಬ್ರೇಕಿಂಗ್ ಸಿಸ್ಟಮ್‌ಗಳು ತುಂಬಾ ಚೆನ್ನಾಗಿ ಕೆಲಸ ಮಾಡಬಲ್ಲವು. ಹೆಚ್ಚಿನ ವೇಗದಲ್ಲಿರುವ ಹೊರಭಾಗ ಶಬ್ದವು ಕ್ಯಾಬಿನ್ ಒಳಭಾಗದಲ್ಲಿ ಕೇಳಿಸುವುದಿಲ್ಲ. ಈ ಕಾರಿನಲ್ಲಿರುವ ಲೆವೆಲ್ 2 ಎಡಿಎಎಸ್ ವೈಶಿಷ್ಟ್ಯವು ಅತ್ಯುತ್ತಮವಾಗಿದೆ.
ಒಟ್ಟಾರೆ ಅಭಿಪ್ರಾಯ (Overall Opinion):
ನೂತನ ಮಾರುತಿ ಸುಜುಕಿ ವಿಕ್ಟೋರಿಸ್ ಎಸ್‌ಯುವಿ ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಸೆ.22ರಿಂದ ವಿತರಣೆಗಳು ಶುರುವಾಗಲಿದೆ. ಆ ಬಳಿಕ, ದೇಶೀಯ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








