ವೆಂಕಟರತ್ನಂ ಅನುಭವ: ನ್ಯಾನೊ ಪ್ರವಾಸ ಪ್ರಯಾಸಕರ
"ನ್ಯಾನೊ ನಾಟ್ ಗುಡ್ ಫಾರ್ ಲಾಂಗ್ ಡ್ರೈವ್" ಅಂತ ವೆಂಕಟರತ್ನಂ ಹೇಳಿದಾಗ ನನಗೆ ಅಚ್ಚರಿ. ಬಹುಶಃ ಬೇರೆ ಯಾರಾದರೂ ಈ ಮಾತನ್ನು ಹೇಳಿದ್ದರೆ "ಹೌದೌದು.. ನಾಟ್ ಗುಡ್" ಅಂತ ತಲೆಯಾಡಿಸುತ್ತಿದ್ದೆ. ಆದರೆ ಈಗಾಗಲೇ ನ್ಯಾನೊ ಕಾರಲ್ಲಿ ದಾಖಲೆ ಮಟ್ಟದಲ್ಲಿ ಪ್ರವಾಸ ಕೈಗೊಂಡಿರುವ ವ್ಯಕ್ತಿಯೊಬ್ಬರ ಬಾಯಲ್ಲಿ ಇಂತಹ ಮಾತು ನನಗೆ ಅನಿರೀಕ್ಷಿತ.
ಬೆಂಗಳೂರಿನ ಉದ್ಯಮಿ ರವಿ ಕುಮಾರ್ ನ್ಯಾನೊ ಕಾರಿನಲ್ಲಿ ಕ್ರೇಝಿಯಾಗಿ ದೂರ ಪ್ರಯಾಣ ಕೈಗೊಳ್ಳುವ ಬಗ್ಗೆ ಕೆಲವು ದಿನಗಳ ಹಿಂದೆ ಕನ್ನಡ ಡ್ರೈವ್‌ಸ್ಪಾರ್ಕ್ ವರದಿ ಮಾಡಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಓದುಗರಾದ ಸಿ. ಎನ್. ರಮೇಶ್, ಕಳೆದ ಒಂದೂವರೆ ವರ್ಷದಿಂದ ನ್ಯಾನೊ ಕಾರಲ್ಲಿ ದೂರ ಪ್ರಯಾಣ ಕೈಗೊಳ್ಳುವ ವೆಂಕಟರತ್ನಂ ಬಗ್ಗೆ ಮಾಹಿತಿ ನೀಡಿದ್ದರು.
ಮೂಲತಃ ಮೈಸೂರಿನವರಾದ ವೆಂಕಟರತ್ನಂ ಸದ್ಯ ಬೆಂಗಳೂರಿನಲ್ಲಿ ಅಕೌಂಟೆಟ್ ಆಗಿದ್ದಾರೆ. ಅವರಲ್ಲಿ ಹಳೆಯ ಟಾಪ್ ಎಂಡ್ ಆವೃತ್ತಿ ನ್ಯಾನೊ ಎಲ್ಎಕ್ಸ್ ಇದೆ. ಖರೀದಿಸಿ ಒಂದೂವರೆ ವರ್ಷ ಕಳೆದಿದೆ. ಅಂದಿನಿಂದ ಲೆಕ್ಕವಿಲ್ಲದಷ್ಟು ಲಾಂಗ್ ಟ್ರಿಪ್ ನಡೆಸಿದ್ದಾರೆ.
ಟಾಟಾ ನ್ಯಾನೊ ಕಾರಿನಲ್ಲಿ ವೆಂಕಟರತ್ನಂ ಬೆಂಗಳೂರಿನಿಂದ ಚೆನ್ನೈ, ಮಂಗಳೂರು, ಮೈಸೂರು, ಶೃಂಗೇರಿ, ಹೊರನಾಡು ಸೇರಿದಂತೆ ದೂರದೂರುಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಇವರ ಲಾಂಗ್ ಡ್ರೈವ್ ದಿನಕ್ಕೆ 400 ಕಿ.ಮೀ. ದಾಟಿದ್ದೂ ಇದೆ. ಇಷ್ಟು ದೂರ ಪ್ರಯಾಣ ಕೈಗೊಳ್ಳುವ ಇವರು, ನ್ಯಾನೊ ದೂರ ಪ್ರಯಾಣಕ್ಕೆ ಸೂಕ್ತವಲ್ಲವೆಂದಾಗ ಅಚ್ಚರಿಯಾಗದೇ ಇದ್ದೀತೇ?
ನ್ಯಾನೊ ಕಾರಿನಲ್ಲಿ ದೂರ ಪ್ರವಾಸ ಪ್ರಯಾಸಕರವಾಗುವಲ್ಲಿ ಅದರ ಸೀಟಿನ ಕೊಡುಗೆ ಅಪಾರ. 2012ರ ನ್ಯಾನೊ ಕಾರಿಗೆ ಹೋಲಿಸಿದರೆ ಇವರಲ್ಲಿರುವ ಹಳೆಯ ನ್ಯಾನೊ ಕಾರಿನ ಸೀಟ್ ಗುಣಮಟ್ಟ ಆರಾಮದಾಯಕವಾಗಿಲ್ಲ. "ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಕುಳಿತಂತೆ ಆಗುತ್ತದೆ" ಎನ್ನುತ್ತಾರೆ ವೆಂಕಟರತ್ನಂ.
"ನೂರೈವತ್ತು ಕಿ.ಮೀ. ಪ್ರಯಾಣಕ್ಕೊಮ್ಮೆಯಾದ್ರೂ ರೆಸ್ಟ್ ತಗೋಬೇಕು. ಗಾಡಿಗಿಂತ ಹೆಚ್ಚು ನಮಗೆ ಆಯಾಸವಾಗಿರುತ್ತದೆ. ಇಲ್ಲಾಂದ್ರೆ ಬ್ಯಾಕ್ ಪೈನ್ ಕಟ್ಟಿಟ್ಟ ಬುತ್ತಿ" ಎನ್ನುತ್ತಾರೆ. ದೂರ ಪ್ರಯಾಣಕ್ಕೆ ಸೂಕ್ತವಲ್ಲ ಎನ್ನುವುದಕ್ಕೆ ವೆಂಕಟರತ್ನಂ ನೀಡುವ ಎರಡನೇ ಕಾರಣ ಟೈರ್ ಅಳತೆ. ಮುಂಭಾಗದ ಮತ್ತು ಹಿಂಭಾಗದ ಟೈರ್ ಗಾತ್ರ ವಿಭಿನ್ನವಾಗಿದೆ. ಸುರಕ್ಷಿತ ದೂರ ಪ್ರಯಾಣಕ್ಕೆ ಪೂರಕವಲ್ಲವೆನ್ನುತ್ತಾರೆ.
"ಮೂರನೇ ಕಾರಣವೆಂದ್ರೆ ಇದ್ರಲ್ಲಿ ಸ್ಟೆಫ್ನಿ ಇಲ್ಲ. ಕತ್ತಲ ರಾತ್ರಿಯಲ್ಲಿ, ಅಪರಿಚಿತ, ನಿರ್ಜನ ಸ್ಥಳಗಳಲ್ಲಿ ಬಾಕಿಯಾಗುವ ಅಪಾಯವಿದೆ. ನಾಲ್ಕನೆಯದಾಗಿ ಕಾರಿನಲ್ಲಿರುವ ಏರ್ ಕಂಡಿಷನ್ ನೇರ ರಸ್ತೆಗೆ ಓಕೆ. ಆದ್ರೆ ಲಾಂಗ್ ಡ್ರೈವಿಂಗಿಗೆ ಕಂಫರ್ಟ್ ಅಲ್ಲ. ಈಗ ಕಿಟಕಿಗಳಿಗೆ ಬಣ್ಣದ ಕಾಗದವೂ ಹಾಕೋ ಆಗಿಲ್ಲ. ಕಾರಿನೊಳಗಿದ್ದ ವಸ್ತುಗಳೆಲ್ಲ ಹೊರಗಿನವರಿಗೆ ಕಾಣುತ್ತದೆ. ಕಳ್ಳತನದ ಅಪಾಯವೂ ಜಾಸ್ತಿ. ಬಣ್ಣದ ಕಾಗದವಿಲ್ಲದಿರುವುದರಿಂದ ಏಸಿ ಸಾಕಾಗದು"
"ಟಾಟಾ ನ್ಯಾನೊ ಹೆಡ್ ಲ್ಯಾಂಪ್ ಲಾಂಗ್ ಡ್ರೈವಿಗೆ ಸಾಕಾಗದು. ಬದಲಾಯಿಸಲು ಆಗದು. ಹೆಚ್ಚು ಪವರ್ ಫುಲ್ ಹೆಡ್ ಲ್ಯಾಂಪ್ ಬಳಸಿದರೆ ಪೈಬರ್ ಬಿಸಿಯಾಗುತ್ತದೆ. ಹೈವೈ ರಸ್ತೆಯಲ್ಲಿ ರಾತ್ರಿ ಪ್ರಯಾಣಕ್ಕೆ ಹೆಡ್ ಲೈಟ್ ಸಾಕಾಗಲ್ಲ" ಎಂದು ದೂರ ಪ್ರಯಾಣಕ್ಕೆ ನ್ಯಾನೊ ಯಾಕೆ ಸೂಕ್ತವಲ್ಲವೆನ್ನುವ ಕಾರಣಗಳನ್ನು ನೀಡಿದ್ದಾರೆ.
"ಇವುಗಳೆಲ್ಲದರ ಹೊರತಾಗಿಯೂ ನ್ಯಾನೊ ನನಗೆ ಇಷ್ಟ. ಲೀಟರಿಗೆ ಸುಮಾರು 20 ಕಿ.ಮೀ. ಮೈಲೇಜ್ ನೀಡುತ್ತದೆ. ಅಗ್ಗದ ದರ ಮರೆಯೋ ಹಾಗಿಲ್ಲ. ಪಾರ್ಕಿಂಗ್ ಸುಲಭ, ಹೆಚ್ಚು ಸ್ಥಳಾವಕಾಶ ಬೇಕಿಲ್ಲ. ಸಿಟಿ ರಸ್ತೆಗೆ ಇದು ಬೆಸ್ಟ್ ಕಾರು" ಎಂದು ವೆಂಕಟರತ್ನಂ ಹೇಳುತ್ತಾರೆ.
"ಕಡಿಮೆ ದರಕ್ಕೆ ಇಷ್ಟು ಒಳ್ಳೆ ಕಾರನ್ನು ನಿರ್ಮಿಸಿದ ರತನ್ ಟಾಟಾ ಮತ್ತು ಅವರ ಎಂಜಿನಿಯರುಗಳ ತಂಡವನ್ನು ಅಭಿನಂದಿಸಲೇಬೇಕು" ಎಂದು ಹೇಳಿ ನ್ಯಾನೊ ಬಗೆಗಿನ ಮಾತನ್ನು ವೆಂಕಟರತ್ನಂ ಮುಗಿಸಿದರು.


Click it and Unblock the Notifications









