ಟಯೋಟಾ ಸಣ್ಣಕಾರು ಎಟಿಯೋಸ್ ಅನಾವರಣ

ಈ ಸಮಯದಲ್ಲಿ ಅನೇಕ ದೊಡ್ಡದೊಡ್ಡ ಕಂಪನಿಗಳು ತಮ್ಮ ಕಾರುಗಳನ್ನು ಮಾರುಕಟ್ಟೆಗೆ ಬಿಡಲು ಮುಂದಾದವು. ಆದರೆ, ನ್ಯಾನೋ ಕಾರು ಬೆಲೆ ಏರಿಕೆ ಇಲ್ಲ ಎಂದು ಪ್ರಕಟಿಸಿ ಗ್ರಾಹಕರನ್ನು ಮತ್ತೆ ತನ್ನೆಡೆಗೆ ಸೆಳೆಯಿತು. ಈಗ ಸಣ್ಣ ಕಾರುಗಳ ಮಾರುಕಟ್ಟೆ ವಿಸ್ತೀರ್ಣ ಹಿಗ್ಗುತ್ತಿದ್ದು, ನ್ಯಾನೋ ಬೆಲೆಗೆ ಸಮನಾದ ಮತ್ತೊಂದು ಕಾರು ಬಂದಿಲ್ಲವಾದರೂ, ನ್ಯಾನೋಗಿಂತ ಅಧಿಕ ಗುಣಮಟ್ಟದ ಕಾರುಗಳಿಗೇನೂ ಬರವಿಲ್ಲ.
ದೆಹಲಿಯಲ್ಲಿ ನಡೆಯುತ್ತಿರುವ ಆಟೊ ಎಕ್ಸ್ ಪೋ ಮೇಳದಲ್ಲಿ ಸಣ್ಣಕಾರುಗಳದ್ದೇ ಕಾರುಬಾರು. ಕಾರು ಉತ್ಪಾದನಾ ಕ್ಷೇತ್ರದಲ್ಲಿ ಜಗತ್ತಿನ ಅಗ್ರಗಣ್ಯ ಸಂಸ್ಥೆ ಎನಿಸಿರುವ ಟಯೋಟಾ, ಇಂದು ತನ್ನ ಹೊಸ ಮಾದರಿಯ ಸಣ್ಣ ಕಾರು ಎಟಿಯೋಸ್(Etios) ಅನ್ನು ಅನಾವರಣಗೊಳಿಸಿತು. ಬೆಂಗಳೂರಿನ ಬಿಡದಿ ಬಳಿ ತನ್ನ ಉತ್ಪಾದನಾ ಘಟಕವನ್ನು ಇನ್ನಷ್ಟು ವಿಸ್ತರಿಸಲು ಜಪಾನ್ ಮೂಲದ ಟಯೋಟಾ ಮೋಟರ್ಸ್ ಕಾರ್ಪ್ ಮನಸ್ಸು ಮಾಡಿದೆ. ಸುಮಾರು 3,200ಕೋಟಿ ರು.ಗಳನ್ನು ಹೂಡುತ್ತಿದ್ದು, ಟಯೋಟಾ ಕಿರ್ಲೋಸ್ಕರ್ ತನ್ನ ಎರಡನೇ ಉತ್ಪಾದನಾ ಘಟಕವನ್ನು 2011 ರಲ್ಲಿ ಪೂರ್ಣಗೊಳಿಸಲಿದೆ.
"ಗ್ರಾಹಕ ಸ್ನೇಹಿ ಕಾರುಗಳ ಉತ್ಪಾದನೆ ಮಾಡುವಲ್ಲಿ ನಮ್ಮ ಸಂಸ್ಥೆ ಅಗ್ರಗಣ್ಯ ಎನಿಸಿದೆ. ಭಾರತದಲ್ಲಿ ಸಣ್ಣ ಕಾರುಗಳ ಉದ್ಯಮ ಬೆಳೆಯುತ್ತಿದೆ. ಮೊದಲ ವರ್ಷದಲ್ಲಿ ಸುಮಾರು 70 ಸಾವಿರಕ್ಕೂ ಅಧಿಕ ಇಟಿಯೋಸ್ ಸಣ್ಣಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿದೆ" ಎಂದು ಟಯೋಟಾ ಕಿರ್ಲೋಸ್ಕರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಿರೋಷಿ ನಕಗವಾ ಹೇಳಿದರು.
"ಆರ್ಥಿಕ ಬಿಕ್ಕಟ್ಟು ಶಮನಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಟಿಯೋಸ್ ಸಣ್ಣ ಕಾರು ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಸಕಾಲಿಕವಾಗಿದೆ. 2015ರ ಹೊತ್ತಿಗೆ 40 ಲಕ್ಷಕ್ಕೂ ಅಧಿಕ ಕಾರುಗಳನ್ನು ಮಾರುಕಟ್ಟೆಗೆ ಇಳಿಸುವ ಇರಾದೆ ಇದೆ"ಎನ್ನುತ್ತಾರೆ ಟಯೋಟಾ ಮೋಟಾರ್ಸ್ ಸಂಸ್ಥೆಯ ಉಪಾಧ್ಯಕ್ಷ ಕೆ ಒಕಾಮೊಟೊ
ಟಯೋಟಾ ಎಟಿಯೋಸ್ ವಿವರ:
* 1.2 ಲೀ. ಪೆಟ್ರೋಲ್ ಇಂಜಿನ್ ಅಥವಾ 1.4 ಲೀ. ಡೀಸೆಲ್ ಇಂಜಿನ್
* ಪ್ರಮುಖ ಪ್ರತಿಸ್ಪರ್ಧಿ ಮಾರುತಿ ಸ್ವಿಫ್ಟ್, ರಿಜ್ಡ್, ಫಿಯಟ್ ನ ಪಂಟೋ
* ಬೆಲೆ ಸುಮಾರು 5 ರಿಂದ 6 ಲಕ್ಷ ರು.
ದೆಹಲಿಯ ಆಟೋ ಎಕ್ಸ್ ಪೋ 2010 ರಲ್ಲಿ ಅನಾವರಣಗೊಂಡ ಟಯೋಟಾದ ಇತರೆ ಮಾದರಿಗಳು ಇಂತಿವೆ: ಟಯೋಟಾ ಪ್ರಾಡೊ(ಡೀಸೆಲ್). ಟಯೋಟಾ ಕರೋಲಾ ಆಲ್ಟೀಸ್ ಸಿಎನ್ ಜಿ, ಟಯೊಟಾ ಇನ್ನೋವಾ ಸಿಎನ್ ಜಿ, ಟಯೋಟಾ ಪ್ರೈಯಸ್.


Click it and Unblock the Notifications








