ಸ್ಸಾಂಗ್ ಖರೀದಿಗೆ ಮಹೀಂದ್ರಾ ಪ್ರಯತ್ನ

ಕೊರಿಯಾ ಎಕನಾಮಿಕ್ ಡೈಲಿ ಯ ವರದಿ ಪ್ರಕಾರ ಮಹೀಂದ್ರಾ ಇತ್ತೀಚೆಗೆ ಸ್ಸಾಂಗ್ ಯೊಂಗ್ ಕಂಪೆನಿಯ ಆಡಳಿತ ಮಂಡಳಿಗೆ ಪತ್ರ ಬರೆದು ತಾನು ಕಂಪೆನಿಯ ಬಹುತೇಕ ಪಾಲನ್ನು ಖರೀದಿಸಲು ಸಿದ್ದವಿರುವ ಇಚ್ಚೆಯನ್ನು ವ್ಯಕ್ತಪಡಿಸಿತ್ತು. ಈ ಕುರಿತು ಮಾತನಾಡಲು ಎರಡೂ ಕಂಪೆನಿಗಳು ನಿರಾಕರಿಸುತ್ತಿವೆ.
ಸ್ಸಾಂಗ್ ಯೊಂಗ್ ಕಂಪೆನಿ 4+4 ಕ್ರೀಡಾ ಉಪಯುಕ್ತ ವಾಹನ(SUV) ಮತ್ತು ಮನರಂಜನಾ ವಾಹನಗಳನ್ನು ತಯಾರಿಸುತ್ತಿದೆ. ಮರ್ಸಿಡಿಸ್ ಬೆಂಜ್ ಈ ಕಂಪೆನಿಯಲ್ಲಿ ದೊಡ್ಡ ಮೊತ್ತದ ಬಂಡವಾಳ ತೊಡಗಿಸಿದೆ. ಚೀನಾದ ಅತೀ ದೊಡ್ಡ ವಾಹನ ತಯಾರಕ ಕಂಪೆನಿ ಶಾಂಘೈ ಆಟೋಮೋಟಿವ್ ಇಂಡಸ್ಟ್ರಿ ಕಾರ್ಪೊರೇಷನ್ 2004 ರಲ್ಲಿ 500 ಮಿಲಿಯನ್ ಡಾಲರ್ ನೀಡಿ ಸಾಲ ಪೀಡಿತವಾಗಿದ್ದ ಸ್ಸಾಂಗ್ ಯೊಂಗ್ ಮೋಟಾರ್ ನಲ್ಲಿ ಶೇ.49 ಪಾಲು ಖರೀದಿಸಿದ್ದು ಸದ್ಯ ಕಂಪನಿಯ ಪ್ರವರ್ತಕನಾಗಿಯೂ ಕಾರ್ಯ ನಿರ್ವಹಿಸುತ್ತಿದೆ.
ಶಾಂಘೈ ಆಟೋಮೋಟಿವ್ ಜನರಲ್ ಮೋಟಾರ್‍ಸ್ ನ ಭಾರತದ ವಹಿವಾಟಿನ ಪಾಲುದಾರನೂ ಆಗಿದೆ. 2003 ರಲ್ಲಿ ಕೂಡ ಸ್ಸಾಂಗ್ ಯಂಗ್ ನ ಅಂದಿನ ಪ್ರವರ್ತಕರಾಗಿದ್ದ ದೇವೂ ಮೋಟಾರ್ಸ್ ಕಂಪೆನಿಯ ಶೇ 53 ಪಾಲನ್ನು ಮಾರಾಟ ಮಾಡಲು ಮುಂದಾಗಿತ್ತು. ನಂತರ ಹಿಂದೇಟು ಹಾಕಿತ್ತು.
ಈ ತಿಂಗಳ ಮೊದಲ ಭಾಗದಲ್ಲಿ ಸ್ಸಾಂಗ್ ಯೊಂಗ್ ನ ವಕ್ತಾರರು ಕಂಪೆನಿಯ ಪಾಲನ್ನು ಮಾರಾಟ ಮಾಡಲು ಶೀಘ್ರದಲ್ಲಿ ಅಧಿಕೃತ ಪ್ರಕಟಣೆ ನೀಡಲಾಗುವುದು ಎಂದು ಹೇಳಿದ್ದರು. ಕೆಲ ವಿದೇಶೀ ಕಂಪೆನಿಗಳೂ ಈ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿದ್ದವು. ಕೊರಿಯಾದ ಸ್ಥಳಿಯ ಪತ್ರಿಕಾ ವರದಿಗಳ ಪ್ರಕಾರ ವಿದೇಶೀ ಕಂಪೆನಿಯೊಂದು ಪಾಲನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿ ಪತ್ರ ಬರೆದಿದ್ದು ಸ್ಸಾಂಗ್ ಯೊಂಗ್ ನ ಆಡಳಿತ ಮಂಡಳಿ ಅದನ್ನು ಪರಿಶೀಲಿಸುತ್ತಿದೆ.


Click it and Unblock the Notifications








