ಹೈಬ್ರಿಡ್ ಕಾರಿಗೆ ಹಾಯ್ ಎನ್ನೋಣ, ಎಲ್ಲರೂ ಬನ್ನಿ

ದೇಶದಲ್ಲಿ ಪೆಟ್ರೋಲ್, ಡೀಸಲ್ ದರ ದಿನೇ ದಿನೇ ದುಬಾರಿಯಾಗುತ್ತಿದೆ. ಈಗಾಗಲೇ ಐಒಸಿಯಂತಹ ಕಂಪನಿಗಳು ನಷ್ಟದಲ್ಲಿರುವುದಾಗಿ ಬೊಬ್ಬೆ ಹೊಡೆಯುತ್ತಿವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪೆಟ್ರೋಲ್, ಡೀಸೆಲ್ ಹೊರತುಪಡಿಸಿದ ಆಯ್ಕೆಗಳತ್ತ ಜನರು ಮರಳುವುದರಲ್ಲಿ ಯಾವುದೇ ಸಂಶಯವಿಲ್ಲ. ತೆರಿಗೆ ವಿನಾಯಿತಿ ಕೆಲವೊಂದು ರಾಜ್ಯಗಳು ಈಗಾಗಲೇ ಹೈಬ್ರಿಡ್ ವೆಹಿಕಲ್ ಗಳಿಗೆ ತೆರಿಗೆ, ವ್ಯಾಟ್ ವಿನಾಯಿತಿ ನೀಡಲು ಆರಂಭಿಸಿವೆ. ಹೈಬ್ರಿಡ್ ಕಾರ್ ಗಳಿಗೆ ಆಮದು ಸುಂಕ ಕಡಿತ ಮಾಡುವ ಯೋಜನೆ ಇರುವುದಾಗಿ ಮತ್ತು ಈ ವಿಭಾಗದಲ್ಲಿನ ವಾಹನಗಳ ಕುರಿತು ಮೃದು ನೀತಿ ಅನುಸರಿಸುವುದಾಗಿ ಕೇಂದ್ರ ಸರಕಾರ ಇತ್ತೀಚೆಗೆ ಹೇಳಿತ್ತು. ಮುಂದಿನ ದಿನಗಳಲ್ಲಿ ಹಸಿರು ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಇದು ಒಂದು ಕಾರಣವಾಗಬಹುದು.
ಪರಿಸರ ಸ್ನೇಹಿ : ಜಾಗತಿಕ ತಾಪಮಾನ ಏರಿಕೆಯಾಗುವಲ್ಲಿ, ಓಝೋನ್ ಪರದೆಯಲ್ಲಿ ರಂಧ್ರವುಂಟಾಗುವಲ್ಲಿ ವಾಹನೋದ್ಯಮದ ಕೊಡುಗೆ ಅಪಾರ. ಒಟ್ಟಾರೆ ವಾಯುಮಾಲಿನ್ಯದಲ್ಲಿ ಕಾರ್, ಟ್ರಕ್ ಮತ್ತು ಇತರ ವಾಹನಗಳ ಕೊಡುಗೆ ಅರ್ಧದಷ್ಟಿದೆ. ಹೀಗಾಗಿ ಹೈಬ್ರಿಡ್ ವಾಹನಗಳ ಬಳಕೆ ಹೆಚ್ಚಾದಂತೆ ಹವಾಮಾನ ಮಾಲಿನ್ಯ ನಿಯಂತ್ರಿಸಬಹುದು. ಪರಿಸರಕ್ಕೆ ನೀವು ಹೀಗೂ ಕೊಡುಗೆ ನೀಡಬಹುದು. ಬೆರಳೆಣಿಕೆಯಷ್ಟು ಹೈಬ್ರಿಡ್ ಕಾರ್ ಗಳಿವೆ ಅಷ್ಟೇ! ಇಂಧನ ದರದ ನಾಗಲೋಟ, ತೆರಿಗೆ ವಿನಾಯಿತಿ ಮತ್ತು ಪರಿಸರ ಸ್ನೇಹಿ ಫೀಚರ್ ಗಳಿಂದ ನಿಮಗೂ ಹೈಬ್ರಿಡ್ ಕಾರ್ ಖರೀದಿಸುವ ಬಯಕೆಯಾಗಿರಬಹುದು. ಆದರೆ, ನೆನಪಿಡಿ ಈಗ ದೇಶದಲ್ಲಿ ಸಾಕಷ್ಟು ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಕಾರ್ ಗಳು ಲಭ್ಯವಿಲ್ಲ. ನೀವು ಬೆಂಗಳೂರಿನವರಾದರೆ ಗಮನಿಸಿರಬಹುದು. ಇಲ್ಲೂ ಬೆರಳೆಣಿಕೆಯಷ್ಟು ಮಾತ್ರ ರೇವಾ ಅಥವಾ ರೇವಾಐ ಕಾರ್ ಗಳು ಕಾಣಸಿಗುತ್ತವೆ. ಆದರೆ ಪರಿಸರ ಸ್ನೇಹಿ ಮನಸ್ಸು ನಿಮ್ಮಲ್ಲಿದ್ದರೆ, ದಿನನಿತ್ಯ ಕಡಿಮೆ ದೂರ ಪ್ರಯಾಣಿಸುವವರು ನೀವಾಗಿದ್ದರೆ ಖಂಡಿತವಾಗಿಯೂ ನೀವು ಹೈಬ್ರಿಡ್ ವಾಹನಕ್ಕೆ ಹಾಯ್ ಹೇಳಬಹುದು.
ದೀರ್ಘಾವಧಿಗೆ ದುಬಾರಿಯಲ್ಲ : ಹೈಬ್ರಿಡ್ ಕಾರ್ ಖರೀದಿಸಬೇಕೆಂದಿದ್ದೇ ಆದರೆ ಅದು ದುಬಾರಿ ಎಂದು ನೀವು ಹೇಳಬಹುದು. ನಿಜ. ಇತರ ವಾಹನಗಳಿಗೆ ಹೋಲಿಸಿದರೆ ಇದು ಒಂದಿಷ್ಟು ದುಬಾರಿಯೇ. ಆದರೆ ದೀರ್ಘಾವಧಿ ಕುರಿತು ನೀವು ಯೋಚಿಸಿದ್ದರೆ, ಅಂದರೆ ದಿನನಿತ್ಯ ನೀವು ಪೆಟ್ರೋಲ್, ಡೀಸಲ್ ಗೆ ಸುರಿಯುವ ಹಣವನ್ನು ಲೆಕ್ಕ ಹಾಕಿದರೆ ಇದು ದುಬಾರಿಯಲ್ಲ. ಹೀಗಾಗಿ ಪರಿಸರ ರಕ್ಷಣೆಯೊಂದಿಗೆ ಹಣವನ್ನು ಉಳಿತಾಯ ಮಾಡಲು ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ ಸಾಧ್ಯವಿದೆ. ಇನ್ನೇಕೆ ತಡ, ಹೈಬ್ರಿಡ್ ವೆಹಿಕಲ್ ಗಳಿಗೆ ಹಾಯ್ ಹೇಳೋಣ, ಬನ್ನಿ. [ಆಟೋಮೊಬೈಲ್]


Click it and Unblock the Notifications








