ಗ್ರಾಹಕರಿಗೆ ನ್ಯಾನೊ ಇಷ್ಟ ಇಲ್ವಂತೆ! ಆಲ್ಟೊ ಇಷ್ಟವಂತೆ..

ಟಿಎನ್ಎಸ್ ಸಮೀಕ್ಷೆಯಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರ್ ಗ್ರಾಹಕರಿಗೆ ಹೆಚ್ಚು ಇಷ್ಟವಾದ ಕಾರ್. ಓಮ್ನಿ, ಮಾರುತಿ 800 ನಂತರದ ಸ್ಥಾನ ಪಡೆದಿವೆ. "ಈಗ ಗ್ರಾಹಕರ ನಿರೀಕ್ಷೆಯಲ್ಲಿ ಗಮನಾರ್ಹ ಏರಕೆ ಕಾಣುತ್ತಿದೆ. ಹೀಗಾಗಿ ಅವರಿಗೆ ವಿನ್ಯಾಸ ಸೇರಿದಂತೆ ಇತರ ವಿಷಯಗಳಲ್ಲಿ ನ್ಯಾನೋ ಇಷ್ಟವಾಗಿಲ್ಲ. ಮಾರುತಿ 800 ಮಾಲಿಕರು ಕಂಪನಿಯಿಂದ ಇನ್ನಷ್ಟು ಉತ್ತಮವಾದ ಸೇವೆಯನ್ನು ಬಯಸುತ್ತಿದ್ದಾರೆ" ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯಲ್ಲಿ ಆಲ್ಟೊಗೆ 91 ಅಂಕ ದೊರಕಿದರೆ, ನ್ಯಾನೊಗೆ ಸಮೀಕ್ಷೆಯಲ್ಲಿ ಕಡಿಮೆ ಅಂದರೆ 70 ಅಂಕ ದೊರಕಿದೆ.
2009ರಲ್ಲಿ ರಸ್ತೆಗಿಳಿದ ಪುಟ್ಟ ಕಾರ್ ನ್ಯಾನೊ ಬೆಂಕಿ ಹತ್ತಿಕೊಳ್ಳುವ ಪ್ರಕರಣಗಳಿಂದ ಸುದ್ದಿಯಾಗಿತ್ತು. ಸುಮಾರು 6 ನ್ಯಾನೊ ಕಾರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಈ ಸಮಸ್ಯೆ ಸರಿಪಡಿಸಿದ ಕಂಪನಿ ಸುರಕ್ಷತೆಯ ಫೀಚರ್ ಗಳಿಗೆ ಹೆಚ್ಚಿನ ಒತ್ತು ನೀಡಿ "ಈಗ ನ್ಯಾನೊ ಸೇಫ್ ಕಾರ್" ಎಂದು ಪ್ರತಿಪಾದಿಸಿತ್ತು. ಆದರೂ ಒಟ್ಟಾರೆಯಾಗಿ ನ್ಯಾನೊ ಕಾರ್ ಗಳು ಗ್ರಾಹಕರಿಗೆ ಹೆಚ್ಚು ತೃಪ್ತಿ ನೀಡಿಲ್ಲವೆಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ತೃಪ್ತಿ ವಿಷಯದಲ್ಲಿ ಉತ್ತರ ಭಾರತದ ಗ್ರಾಹಕರು ಹೆಚ್ಚು ತೃಪ್ತರಾಗಿಲ್ಲ. ಕಾರ್ ಬೇಡಿಕೆಗೆ ಪೂರಕವಾಗಿ ಮಾರಾಟ ಸೇವೆಗಳು ಇಲ್ಲದಿರುವುದೇ ಇವರ ಅತೃಪ್ತಿಗೆ ಕಾರಣ ಎಂದು ಟಿಎನ್ಎಸ್ ಹೇಳಿದೆ. "ದೇಶದ ಮಹಾನಗರಗಳಲ್ಲಿನ ಗ್ರಾಹಕರು ಸಣ್ಣ ನಗರಗಳ ಗ್ರಾಹಕರಿಗಿಂತ ವಾಹನ ಸೇವೆಗಳ ಕುರಿತು ಹೆಚ್ಚು ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಣ್ಣ ನಗರಗಳಲ್ಲಿ ಗ್ರಾಹಕರ ನಿರೀಕ್ಷೆ ಹೆಚ್ಚಾಗುತ್ತಿರುವುದು ಇದರಿಂದ ತಿಳಿದು ಬಂದಿದೆ. ಇದನ್ನು ವಾಹನ ತಯಾರಿಕಾ ಕಂಪನಿಗಳು ಅರ್ಥ ಮಾಡಿಕೊಳ್ಳಬೇಕು" ಎಂದು ಟಿಎನ್ಎಸ್ ತಿಳಿಸಿದೆ.
ಉಳಿದ ಸೆಗ್ಮೆಂಟ್ ಗಳಲ್ಲಿ ಗ್ರಾಹಕರಿಗೆ ಹೆಚ್ಚು ತೃಪ್ತಿ ನೀಡಿರುವ ಕಾರ್ ಗಳು ಇಂತಿವೆ. ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಕಾರಾಗಿ ಮಾರುತಿ ಝೆನ್ ಎಸ್ಟಿಲೊ ಮತ್ತು ಎ-ಸ್ಟಾರ್ ಟಾಪ್ಒನ್ ಸ್ಥಾನ ಪಡೆದಿವೆ. ವೋಕ್ಸ್ ವ್ಯಾಗನ್ ಪೊಲೊ ಮತ್ತು ಮಾರುತಿ ಸ್ವಿಫ್ಟ್ ಗ್ರಾಹಕರಿಗೆ ಒಂದೇ ರೀತಿಯ ತೃಪ್ತಿ ನೀಡಿದೆ. ಮಧ್ಯಮ ಗಾತ್ರದ ಸೆಡಾನ್ ಕಾರ್ ಗಳಲ್ಲಿ ಟೊಯೊಟಾ ಕೊರೊಲಾ ಆಲ್ಟಿಸ್ಟ್ ಮೊದಲ ಸ್ಥಾನ ಪಡೆದಿದೆ.
ಎಂಟ್ರಿ ಲೆವೆಲ್ ಲಕ್ಷುರಿ ಸೆಡಾನ್ ವಿಭಾಗದಲ್ಲಿ ವೋಕ್ಸ್ ವ್ಯಾಗನ್ ಪಸ್ಸಾಟ್ ಗ್ರಾಹಕರಿಗೆ ಹೆಚ್ಚು ಇಷ್ಟವಾಗಿದೆ. ಸ್ಪೋರ್ಟ್ಸ್ ಯುಟಿಲಿಟಿ ಸೆಗ್ಮೆಂಟ್ ನಲ್ಲಿ ಟೊಯೊಟಾ ಇನ್ನೋವಾ ಮತ್ತು ಮಹೀಂದ್ರ ಸ್ಕಾರ್ಪಿಯೊ ಒಂದೇ ಶ್ರೇಣಿಯನ್ನು ಪಡೆದಿದೆ. ಪ್ರೀಮಿಯಂ ಎಸ್ ಯುವಿ ಸೆಗ್ಮೆಂಟ್ ನಲ್ಲಿ ಹೋಂಡಾ ಸಿಆರ್-ವಿ ಮೊದಲ ಸ್ಥಾನ ಪಡೆದಿದೆ. ವಿವಿಧ 56 ಮಾಡೆಲ್ ಕಾರ್ ಹೊಂದಿರುವ 9,300 ಗ್ರಾಹಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.


Click it and Unblock the Notifications







