ಹೋಂಡಾ ಸಣ್ಣ ಕಾರ್ ಬ್ರಿಯೊ ಕೆಲವೇ ದಿನಗಳಲ್ಲಿ ರಸ್ತೆಗಿಳಿಯುತ್ತಂತೆ!

ಕಂಪನಿಯ ಮೂಲಗಳ ಪ್ರಕಾರ ಟೊಯೊಟಾ ಕಂಪನಿಯ ಎಟಿಯಾಸ್ ನ ಸಣ್ಣ ಕಾರ್ ಆವೃತ್ತಿ ರಸ್ತೆಗಿಳಿಯುವ ಮುನ್ನವೇ ಬ್ರಿಯೊ ರಸ್ತೆಗಿಳಿಯಲಿದೆ. ಇದರೊಂದಿಗೆ ಥೈಲಾಂಡ್ ನಲ್ಲೂ ಎಕೊ ಕಾರೊಂದನ್ನು ಇದೇ ವೇಳೆಗೆ ಕಂಪನಿ ಹೊರತರಲಿದೆ. ಮಾರ್ಚ್ 17ಕ್ಕೆ ಕಂಪನಿಯು ಭಾರತದಲ್ಲಿ ಬ್ರಿಯೊ ಕಾರನ್ನು ಹೊರತರಲಿದ್ದರೂ, ಅದರ ಡ್ರೈವಿಂಗ್ ಭಾಗ್ಯ ದೊರಕುವುದು ಸುಮಾರು ಆಗಸ್ಟ್-ಸೆಪ್ಟಂಬರ್ ವೇಳೆಗೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಅಂದರೆ ಮುಂದಿನ ತಿಂಗಳು ಕಂಪನಿಯು ಔಪಚಾರಿಕವಾಗಿ ಬ್ರಿಯೊ ಕಾರನ್ನು ಅನಾವರಣ ಮಾಡಲಿದೆ.
ಜಾಗತಿಕವಾಗಿ ವೇಗವಾಗಿ ಪ್ರಗತಿ ಕಾಣುತ್ತಿರುವ ದೇಶದ ವಾಹನ ಮಾರುಕಟ್ಟೆಯಲ್ಲಿ ಪಾಲನ್ನು ಹೆಚ್ಚಿಸಿಕೊಳ್ಳುವ ಹವಣಿಕೆಯಲ್ಲಿ ಹೋಂಡಾ ಕಂಪನಿಯಿದೆ. ಹ್ಯುಂಡೈ ಐ20, ಮಾರುತಿ ಸ್ವಿಫ್ಟ್, ಫೋರ್ಡ್ ಫಿಗೊ ಮತ್ತು ಫೋಕ್ಸ್ ವ್ಯಾಗನ್ ಪೊಲೊಗಳಿಗೆ ಹೋಲಿಸಿದರೆ ಕಂಪನಿಯ ಜಾಝ್ ಕಾರ್ ನ ಮಾರಾಟ ಅತ್ಯುತ್ತಮವಾಗಿರದಿದ್ದರಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ನೂತನ ಬ್ರಿಯೊ ಈ ಎಲ್ಲ ಕಾರ್ ಗಳೊಂದಿಗೆ ಸಮರ್ಥವಾಗಿ ಪೈಪೋಟಿ ನಡೆಸುವ ನಿರೀಕ್ಷೆ ಕಂಪನಿಯದ್ದು.
ದೇಶದ ರಸ್ತೆಯಲ್ಲಿ ಜಾಝ್ ಹಿನ್ನಡೆಗೆ ಅದರ ದರ ಕೂಡ ಕಾರಣವಾಗಿದೆ. ಹ್ಯಾಚ್ ಬ್ಯಾಕ್ ಜಾಝ್ ದರ ಸುಮಾರು 7 ಲಕ್ಷ ರೂ. ಆಗಿದ್ದು, ಅದಕ್ಕಿಂತ ಕಡಿಮೆ ದರದ ಸ್ವಿಫ್ಟ್, ಫಿಗೊ ಇತ್ಯಾದಿಗಳತ್ತ ಗ್ರಾಹಕರು ಆಕರ್ಷಿತರಾಗಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಸ್ವಿಫ್ಟ್ ಮತ್ತು ಹ್ಯುಂಡೈ ಐ20ಗಳೊಂದಿಗೆ ಪೈಪೋಟಿ ನಡೆಸುವ ಉದ್ದೇಶದಿಂದ ನೂತನ ಬ್ರಿಯೊ ಕಾರ್ ದರ 4ರಿಂದ 5 ಲಕ್ಷ ರೂಪಾಯಿ ಆಸುಪಾಸಿನಲ್ಲಿರಲಿದೆ ಎಂದು ವಾಹನ ವಿಶ್ಲೇಷಕರು ಅಂದಾಜಿಸಿದ್ದಾರೆ. ಮೂಲಗಳ ಮಾಹಿತಿ ಎಷ್ಟು ಸರಿ ಎಷ್ಟು ಸುಳ್ಳು ಎಂಬುದು ತಿಳಿಯಲು ನಾಡಿದ್ದು 17ರವರೆಗೆ ಕಾಯುವುದು ಅನಿವಾರ್ಯವಾಗಿದೆ.


Click it and Unblock the Notifications







