ಮಾರುತಿ ಕಿಝಾಷಿಗೆ ಆರತಿ ಎತ್ತಿರೇ...
image-03-24-maruti-kizashi.jpg kannada.drivespark.com}ಬಹುನಿರೀಕ್ಷಿತ ಐಷಾರಾಮಿ ಸೆಡಾನ್ ಕಾರ್ "ಕಿಝಾಷಿ"ಯನ್ನು ದೇಶದ ಬೃಹತ್ ಕಾರ್ ತಯಾರಿಕಾ ಕಂಪನಿ ಮಾರುತಿ ಸುಜುಕಿ ಅನಾವರಣ ಮಾಡಿದೆ. ನೂತನ ಕಿಝಾಷಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎಂಬ ಎರಡು ಆವೃತ್ತಿಗಳಲ್ಲಿ ದೊರಕಲಿದೆ.
ದೇಶದ ಶ್ರೀಮಂತ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಲಕ್ಷುರಿ ಸೆಡಾನ್ ಕಾರನ್ನು ಹೊರತರಲಾಗಿದೆ. ಇದು ಜಾಗತಿಕ ಸ್ಟಾಂಡರ್ಡ್ ಹೊಂದಿದ್ದು, ಅತ್ಯುತ್ತಮ ಫೀಚರ್ ಗಳನ್ನು ಹೊಂದಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹೇಳುತ್ತಾರೆ.
ದರವೆಷ್ಟು?: ನೂತನ ಕಿಝಾಷಿ ಮ್ಯಾನುಯಲ್ ಟ್ರಾನ್ಸ್ ಮಿಷನ್ ಆವೃತ್ತಿ ದರ ಸುಮಾರು 16.5 ಲಕ್ಷ ರೂಪಾಯಿ. ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸೆಡಾನ್ ಕಾರ್ ದರ 17.5 ಲಕ್ಷ ರೂ ರೂ.
ಮಾರುತಿ ಕಿಝಾಷಿಯು ಎ4 ಮಾದರಿಯಾದರೂ ಎ 5ನಲ್ಲಿರುವ ಫೀಚರ್ ಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ಕಿಝಾಷಿ 2.4 ಲೀಟರ್ ಎಂಜಿನ್ ಹೊಂದಿದ್ದು, ಲಕ್ಷುರಿ ಸ್ಪೋರ್ಟ್ಸ್ ಲಕ್ಷುರಿ ಕಾರ್ ಸೆಗ್ಮೆಂಟ್ ಕಾರಿನಂತೆ ಭಾಸವಾಗುತ್ತದೆ. ಇದರಲ್ಲಿ ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಕ್ರೂಸ್ ಕಂಟ್ರೊಲ್, ಇಬಿಡಿ ಮತ್ತು 10 ಹಂತದ ಸೀಟ್ ಹೊಂದಾಣಿಕೆ ಫೀಚರ್ ಗಳಿವೆ.
ಕಿಝಾಷಿ ಮ್ಯಾನುಯಲ್ ಆವೃತ್ತಿಯಲ್ಲಿ 7.8 ಸೆಕೆಂಡ್ ನಲ್ಲಿ ಸೊನ್ನೆಯಿಂದ 100 ಆಕ್ಸಿಲೆರೇಷನ್ ಪಡೆಯಬಹುದಾಗಿದೆ. ಆದರೆ ಸಿವಿಟಿ ಆವೃತ್ತಿಯಲ್ಲಿ 8.8 ಸೆಕೆಂಡ್ ಬೇಕಾಗುತ್ತದೆ. ಮ್ಯಾನುಯಲ್ ಆವೃತ್ತಿ ಸೆಡಾನ್ ಕಾರ್ ಪ್ರತಿಗಂಟೆಗೆ 215 ಕಿ.ಮೀ. ವೇಗ ಹೊಂದಿದೆ. ಸಿವಿಟಿ ಆವೃತ್ತಿ ಪ್ರತಿಗಂಟೆಗೆ 205 ಕಿ.ಮೀ ವೇಗ ಹೊಂದಿದೆ. ಮೈಲೇಜ್ ವಿಷಯಕ್ಕೆ ಬಂದರೆ ಸಿವಿಟಿ ಆವೃತ್ತಿ ಪ್ರತಿಲೀಟರ್ ಗೆ 12.53 ಕಿ.ಮೀ. ಸಾಗುತ್ತದೆ. ಕಿಝಾಷಿ ಮ್ಯಾನುಯಲ್ ಆವೃತ್ತಿ ಪ್ರತಿಲೀಟರ್ ಗೆ 12.45 ಮೈಲೇಜ್ ನೀಡುತ್ತದೆ.
ನೂತನ ಕಿಝಾಷಿ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಮಾರ್ಚ್ ವೇಳೆಗೆ ಗ್ರಾಹಕರ ಕೈ ಸೇರಲಿದೆ. ನೂತನ ಕಾರ್ ಹೋಂಡಾ ಅಕೋರ್ಡ್, ವೋಕ್ಸ್ ವ್ಯಾಗನ್ ಜೆಟ್ಟಾ, ಸ್ಕೋಡಾ ಲೌರಾ ಕಾರ್ ಗಳಿಗೆ ಕಿಝಾಷಿ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಕಂಪನಿಯು ಇನ್ನು ಮುಂದೆ ಪ್ರತಿವರ್ಷ ಹೊಸ ಮಾದರಿಗಳನ್ನು ಪರಿಚಯಿಸುವ ಗುರಿಹೊಂದಿದೆ. ಈ ವರ್ಷ ಹೊಸ ಸ್ವಿಫ್ಟ್ ಮತ್ತು ಎಸ್ಎಕ್ಸ್ 4 ಡೀಸಲ್ ಆವೃತ್ತಿಯನ್ನು ಪರಿಚಯಿಸಲು ಕಂಪನಿ ಯೋಜಿಸಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಹೇಳಿದ್ದಾರೆ.


Click it and Unblock the Notifications








