ದುಡ್ಡು ಉಳಿಸೋ ಮಾರ್ಚ್; ಯಾರಿಗುಂಟು ಯಾರಿಗಿಲ್ಲ..!!

ಈ ತಿಂಗಳಲ್ಲಿ ದೇಶದ ಪ್ರಮುಖ ಕಾರ್ ಕಂಪನಿಗಳು ಗ್ರಾಹಕರಿಗೆ ಬಂಪರ್ ದರ ವಿನಾಯಿತಿ ನೀಡಿವೆ. ಈಗ ಯಾರು ವಾಹನ ಖರೀದಿಸುತ್ತಾರೋ ಅವರು ಒಂದಿಷ್ಟು ದುಡ್ಡು ಉಳಿಸಬಹುದು ಎಂದು ಕಂಪನಿಗಳು ಹೇಳುತ್ತಿವೆ. ಕಳೆದ 2010ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಕಾರ್ ಖರೀದಿದಾರರಿಗೆ ಸಾಕಷ್ಟು ದರ ವಿನಾಯಿತಿ ನೀಡಲಾಗಿದೆ.
ಈ ತಿಂಗಳು ಮಾರಾಟ ಪ್ರಮಾಣ ಈಗಾಗಲೇ 1.89 ಲಕ್ಷ ಯೂನಿಟ್ ತಲುಪಿದೆ. ಆದರೆ ಡೀಲರ್ ಗಳ ಬಳಿ ಮಾರಾಟ ಮಾಡಲು ಸಾಕಷ್ಟುಸ್ಟಾಕ್ ಉಳಿದುಕೊಂಡಿದೆ. ಡೀಲರ್ ಗಳನ್ನು ಬಚಾವ್ ಮಾಡಲು ಕಂಪನಿಗಳು ಈಗ ದರ ವಿನಾಯಿತಿ ಯೋಜನೆ ಹಮ್ಮಿ ಕೊಂಡಿವೆ. ಮಾರುತಿ ಸುಜುಕಿ ತನ್ನ ಕಾರ್ ಗಳಿಗೆ ಸುಮಾರು 40 ಸಾವಿರ ರೂ.ನಷ್ಟು, ಹ್ಯುಂಡೈ ಸುಮಾರು 45 ಸಾವಿರ ರೂ. ಮತ್ತು ಹೋಂಡಾ ಸುಮಾರು 55 ಸಾವಿರ ರೂ. ಡಿಸ್ಕೌಂಟ್ ಮಾಡಲಿದೆ.
ಮಾರುತಿ ಸುಜುಕಿ ತನ್ನ ಆಲ್ಟೊ ಕೆ10ಗೆ ಸುಮಾರು 30 ಸಾವಿರ ರೂ.ವಿನಷ್ಟು, ಎ-ಸ್ಟಾರ್ ಮತ್ತು ವ್ಯಾಗನಾರ್ ಗೆ 35 ಸಾವಿರ ರೂ ಕಡಿಮೆ ಮಾಡಿದೆ. ಇದರಲ್ಲಿ ತನ್ನ ಸೆಡಾನ್ ಕಾರ್ ಎಸ್ಎಕ್ಸ್4 ಕಾರಿಗೆ ಗರಿಷ್ಟ ಅಂದರೆ ಸುಮಾರು 40 ಸಾವಿರ ರೂ. ವಿನಾಯಿತಿ ನೀಡಿದೆ. ಇದು ಈ ಆರ್ಥಿಕ ವರ್ಷದಲ್ಲಿ ನೀಡಿದ ಅತ್ಯಧಿಕ ದರ ವಿನಾಯಿತಿಯಾಗಿದ್ದು ಶೋರೂಂಗಳಲ್ಲಿ ಉಳಿದ ಸಂಗ್ರಹವನ್ನು ತ್ವರಿತವಾಗಿ ಮಾರಾಟ ಮಾಡಲು ಮತ್ತು ಮಾರಾಟ ಪ್ರಮಾಣ ಹೆಚ್ಚಿಸಲು ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ ಎಂದು ದೆಹಲಿಯ ಡೀಲರೊಬ್ಬರು ಹೇಳಿದ್ದಾರೆ. ಈ ತಿಂಗಳು ನಿಜವಾಗಿ ಗೆದ್ದವರೆಂದರೆ ಕಾರ್ ಗ್ರಾಹಕರು.


Click it and Unblock the Notifications







