ವಿಶ್ವದ "ಕೋಟಿ ಕ್ಲಬ್" ಸೇರಿದ ಭಾರತದ "ಕಿರೂತಿ"

ಮಾರುತಿ ಸುಜುಕಿಯ ಈ ಹೊಸ ಮೈಲಿಗಲ್ಲಿನಿಂದಾಗಿ ಕಂಪನಿಯು ವಿಶ್ವದ ಕೋಟಿ ಕೂಟ ಸೇರಿದೆ. ಅಂದರೆ ಈಗಾಗಲೇ ಒಂದು ಕೋಟಿ ವಾಹನ ಉತ್ಪಾದಿಸಿರುವ ಜಗತ್ತಿನ ಬೆರಳೆಣಿಕೆಯ ಕಂಪನಿಗಳ ಕ್ಲಬ್ ನಲ್ಲಿ ಭಾರತದ ಕಂಪನಿಯೂ ಸೇರಿದೆ. ಅಂದಹಾಗೇ ಈ ಸಾಧನೆ ಮಾಡಿರುವ ಭಾರತದ ಮೊದಲ ಕಂಪನಿ ಕೂಡ ಮಾರುತಿ ಸುಜುಕಿ.
"ಈ ಐತಿಹಾಸಿಕ ಮೈಲುಗಲ್ಲು ಇಂದು ನಾವು ಸಾಧಿಸಿದ್ದೇವೆ. ಇದಕ್ಕಾಗಿ ಈ ಕಂಪನಿಯ ಸಂಸ್ಥಾಪಕರಿಗೆ, ನಮ್ಮ ಅಮೂಲ್ಯ ಗ್ರಾಹಕರಿಗೆ, ಉದ್ಯೋಗಿಗಳ ಬದ್ಧತೆಗೆ, ಡೀಲರ್ ಗಳಿಗೆ, ನಮ್ಮೊಂದಿಗೆ ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದಗಳು" ಎಂದು ಕಂಪನಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ. ಕಂಪನಿಯು ಕಳೆದ 6 ವರ್ಷಗಳಲ್ಲಿ ಸುಮಾರು 50 ಲಕ್ಷ ವಾಹನ ಉತ್ಪಾದಿಸಿತ್ತು.
ಸಣ್ಣ ಫ್ಲಾಷ್ ಬ್ಯಾಕ್: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಭಾರತದಲ್ಲಿ ವಹಿವಾಟು ಆರಂಭಿಸಿದ್ದು 1983ರಲ್ಲಿ. ಆಗ ಕಂಪನಿಯ ಹೆಸರು ಮಾರುತಿ ಉದ್ಯೋಗ್ ಲಿಮಿಟೆಡ್ ಎಂದಾಗಿತ್ತು. ಜಪಾನಿನ ಸುಜುಕಿ ಮೋಟರ್ ಕಾರ್ಪೊರೇಷನ್ ನೊಂದಿಗೆ ಭಾರತ ಸರಕಾರದ ಸಹಯೋಗದಲ್ಲಿ ಈ ಕಂಪನಿ ಆರಂಭವಾಗಿತ್ತು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಕಂಪನಿಯ ಮೊದಲ ಕಾರನ್ನು ಕಂಪನಿಯ ಮುಖ್ಯಸ್ಥರಾದ ಆರ್. ಸಿ. ಭಾರ್ಗವ ಅವರಿಗೆ ಹಸ್ತಾಂತರಿಸಿದ್ದರು.
ಈಗ ಕಂಪನಿ ಒಂದು ಕೋಟಿ ಮೈಲಿಗಲ್ಲು ಸಾಧಿಸಿದೆ. ಕಂಪನಿಯು ತನ್ನ ಮಾರಾಟ ಹೆಚ್ಚಿಸಿಕೊಳ್ಳಲು ಘಟಕಗಳ ಉತ್ಪಾದನೆ ಸಾಮರ್ಥ್ಯ ಹೆಚ್ಚಳ, ಹೆಚ್ಚಿನ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಹೆಚ್ಚಿನ ಪ್ರಾಧನ್ಯತೆ ನೀಡಿತ್ತು. ಕಂಪನಿಯು ಹಲವು ವಿನೂತನ ಮಾದರಿಗಳನ್ನೂ ಪರಿಚಯಿಸಿತ್ತು. ಸ್ವಿಫ್ಟ್, ಎಸ್ಎಕ್ಸ್4, ಎ-ಸ್ಟಾರ್, ರಿಟ್ಜ್ ಮತ್ತು ವ್ಯಾಗನಾರ್ ಮುಂತಾದ ಕಾರ್ ಗಳೂ ಕಂಪನಿಯ ಮಾರಾಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಇವೆಲ್ಲ ಗ್ರಾಹಕರಿಗೂ ಅತ್ಯಂತ ಇಷ್ಟದ ಕಾರ್ ಮಾದರಿಗಳೂ ಹೌದು. ಕಂಪನಿ ಈಗ ಸುಮಾರು 16 ಪ್ರಯಾಣಿಕ ವಾಹನ ಮಾಡೆಲ್ ಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯು ದೇಶದ ವಾಹನ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪಾಲು ಹೊಂದಿದೆ.
ಕಂಪನಿಯು 1983ರ ಡಿಸೆಂಬರ್ ನಲ್ಲಿ ಮೊದಲ ಮಾರುತಿ 800 ಉತ್ಪಾದಿಸಿತ್ತು. 1994ರಲ್ಲಿ ಇದರ ಸಂಖ್ಯೆ 10 ಲಕ್ಷಕ್ಕೆ ಮುಟ್ಟಿತು. 2005ಕ್ಕೆ 50 ಲಕ್ಷಕ್ಕೆ ಕಂಪನಿಯ ಕಾರ್ ಉತ್ಪಾದನೆ ತಲುಪಿತ್ತು. ಈಗ ಒಂದು ಕೋಟಿ ದಾಟಿದ ಸಂಭ್ರಮ ಕಂಪನಿಗೆ. ಕಂಪನಿಯ ಕಣ್ಣಲ್ಲಿ ಗ ಕೋಟಿ ನವಿಲುಗರಿ ರೆಕ್ಕೆ ಬಿಚ್ಚಿ ಕುಣಿಯುತ್ತಿದೆ.


Click it and Unblock the Notifications








