ಕಾರಿನ ಬಣ್ಣಕ್ಕೂ ಅಪಘಾತಕ್ಕೂ ಸಂಬಂಧವಿದೆಯಾ...?!

ಕಾರಿನ ಕಲರ್ ಎಂಬುದು ಸುರಕ್ಷತೆಯ ಫೀಚರ್ ರೀತಿ ಕಾಣಿಸದಿರಬಹುದು. ಆದರೆ ತಿಳಿ ಬಣ್ಣದ ಕಾರ್ ಗಳು ಕ್ರಾಷ್ ಆಗುವುದು ಕಡಿಮೆಯಂತೆ. ಡಾರ್ಕ್ ಬಣ್ಣದ ಕಾರ್ ಅಪಘಾತಕ್ಕೀಡಾಗುವುದು ಜಾಸ್ತಿಯಂತೆ. ಹೀಗಂತ ಕಂಡುಕೊಂಡಿರುವುದು ಸ್ವಿಡನ್ ನಲ್ಲಿ ನಡೆಸಿದ ಒಂದು ಅಧ್ಯಯನ. ಇಲ್ಲೂ ಎಲ್ಲ ಕಾರಿನ ಬಾಡಿ ಬಣ್ಣವನ್ನು ಮತ್ತು ನಡೆದಿರುವ ಅಪಘಾತಗಳನ್ನು ಪರಿಶೀಲಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಿಲ್ವರ್ ಬಣ್ಣದ ಕಾರ್ ಗಳು ಅಪಘಾತವಾಗೋದು ಗಣನೀಯವಾಗಿ ಕಡಿಮೆ ಎಂದು ನ್ಯೂಜಿಲ್ಯಾಂಡ್ ಸಂಶೋಧಕರು ಹೇಳುತ್ತಾರೆ. ಅವರ ಅಧ್ಯಯನ ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲೂ ಪ್ರಕಟಗೊಂಡಿತ್ತು. ಕಪ್ಪು, ಕಂದು ಮತ್ತು ಹಸಿರು ಬಣ್ಣದ ಕಾರ್ ಗಳು ಹೆಚ್ಚು ಅಪಘಾತವಾಗಿದ್ದು ಅದರಲ್ಲಿ ತೀವ್ರ ಪ್ರಮಾಣದ ಗಾಯಗೊಂಡಿದ್ದಾರಂತೆ! ಇದರ ಮುಂದುವರೆದ ಅಧ್ಯಯನದಂತೆ ಆಸ್ಟ್ರೇಲಿಯಾದ ಮೊನಾಷ್ ಯುನಿವರ್ಸಿಟಿ "ಆಕ್ಸಿಡೆಂಟ್ ರಿಸರ್ಚ್" ಮಾಡಿತ್ತು. ಸುಮಾರು 8 ಲಕ್ಷ ಕಾರ್ ಅಪಘಾತಗಳನ್ನು ಅವಲೋಕಿಸಿದಾಗ ಅವರಿಗೆ ತಿಳಿದುಬಂದದ್ದೇನೆಂದರೆ ಗಾಢವಾದ ಬಣ್ಣದಿಂದ ಅಪಘಾತ ನಡೆಯೋದು ಹೆಚ್ಚು ಅಂತ. ಅಪಘಾತ ಸೂಚಿಯಲ್ಲಿ ಬಿಳಿ ಇತ್ಯಾದಿ ಮಂದ ಬಣ್ಣಗಳ ಕಾರ್ ಅಪಘಾತ ನಡೆದಿರುವುದು ಕಡಿಮೆಯಂತೆ!
ನ್ಯೂಜಿಲ್ಯಾಂಡ್ ನಲ್ಲೂ ಇಂತಹ ಅಧ್ಯಯನವೊಂದು ನಡೆದಿದೆ. 1988ರಿಂದ 1999ರ ನಡುವೆ ನಡೆದ ಕಾರ್ ಅಪಘಾತಗಳನ್ನು ಅಧ್ಯಯನ ಮಾಡಲಾಯಿತು. ಇದರಲ್ಲಿ ತಿಳಿದುಬಂದದ್ದೇನೆಂದರೆ ಕಂದು ಬಣ್ಣದ ಕಾರ್ ಅಪಘಾತಗೊಂಡರೆ ಸೀರಿಯಸ್ ಆಗಿ ಗಾಯಗೊಳ್ಳುವುದು ಜಾಸ್ತಿಯಂತೆ. ಕಪ್ಪು ಮತ್ತು ಹಸಿರು ಬಣ್ಣದ ಕಾರ್ ನಲ್ಲೂ ರಿಸ್ಕ್ ಹೆಚ್ಚಂತೆ. ಹಾಗಂತ ಅವರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಹಾಗಾದರೆ ಸುರಕ್ಷತೆಯ ಕಾರ್ ಬಣ್ಣ ಯಾವುದು?: ಅವರ ಅಧ್ಯಯನದಲ್ಲಿ ಸುರಕ್ಷತೆಯ ಬಣ್ಣವಾಗಿ ಗೋಚರಿಸಿದ್ದು ಬಿಳಿ ಮತ್ತು ಸಿಲ್ವರ್ ಬಣ್ಣದ ಕಾರ್ ಗಳು. ಇವೆರಡು ಬಣ್ಣದ ಕಾರ್ ಗಳಲ್ಲಿ ಸಂಭವಿಸುವ ಅಪಘಾತಗಳು ಉಳಿದ ಬಣ್ಣದ ಕಾರ್ ಗಳಿಗೆ ಹೋಲಿಸಿದರೆ ಶೇ. 50ರಷ್ಟು ಕಡಿಮೆಯಂತೆ.
ಬಿಳಿ ಬಣ್ಣ ಶಾಂತಿಯ ಸಂಕೇತ. ಅಮೆರಿಕದಲ್ಲಿ ಹೆಚ್ಚಿನವರ ಮೆಚ್ಚಿನ ಕಾರ್ ಗಳು ಬಿಳಿಬಣ್ಣದ್ದು. ಬಿಳಿ ಎಂಬುದು ಎಂತಹ ಸನ್ನಿವೇಶಗಳಲ್ಲೂ ಒಂದಿಷ್ಟು ಸ್ಪಷ್ಟವಾಗಿ ಕಾಣುವುದರಿಂದ ಅಪಘಾತಗಳು ಸಂಭವಿಸುವುದು ಕಡಿಮೆ ಎನ್ನಲಾಗಿದೆ.


Click it and Unblock the Notifications








