ರಾಜ್ಯದಲ್ಲಿ ವ್ಯಾಟ್ ದರ ಹೆಚ್ಚಳ: ವಾಹನಗಳಿನ್ನೂ ದುಬಾರಿ

ಈ ಹಿಂದೆ 5 ಲಕ್ಷ ರೂಪಾಯಿಗಿಂತ ಕಡಿಮೆ ದರದ ವಾಹನಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇದು ಇಂದಿನಿಂದ ಶೇ. 13ಕ್ಕೆ ಏರಿಕೆ ಕಾಣಲಿದೆ. 5 ಲಕ್ಷ ರೂ. ನಿಂದ 10 ಲಕ್ಷ ರೂ.ವರೆಗಿನ ವಾಹನಗಳ ತೆರಿಗೆ ದರ ಶೇ. 13ರಿಂದ ಶೇ. 14ಕ್ಕೆ ಏರಿಕೆ ಕಾಣಲಿದೆ. 10 ಲಕ್ಷ ರೂ.ನಿಂದ 20 ಲಕ್ಷ ರೂ.ವರೆಗಿನ ವಾಹನಗಳ ತೆರಿಗೆ ದರ ಶೇ. 16ರಿಂದ ಶೇಕಡಾ 17ಕ್ಕೆ ತಲುಪಲಿದೆ. 20 ಲಕ್ಷ ರೂ.ಗಿಂತ ಹೆಚ್ಚಿನ ಕಾರ್, ಜೀಪು ತೆರಿಗೆ ದರಗಳು ಶೇಕಡಾ 16ರಿಂದ ಶೇಕಡಾ 18ಕ್ಕೆ ನೆಗೆಯಲಿದೆ.
ವಾಹನ ಕಂಪನಿಗಳಿಂದ ದರ ಹೆಚ್ಚಳ: ಏಪ್ರಿಲ್ ಒಂದರಿಂದ ಕಾರ್ ದರಗಳನ್ನು ಹೆಚ್ಚಿಸುವುದಾಗಿ ಹೆಚ್ಚಿನ ಕಂಪನಿಗಳು ಈ ಹಿಂದೆಯೇ ಪ್ರಕಟಿಸಿದ್ದವು. ಕಚ್ಚಾ ಸಾಮಾಗ್ರಿಗಳ ದರ ಹೆಚ್ಚಳದ ಹಿನ್ನಲೆಯಲ್ಲಿ ಹೆಚ್ಚಿನ ವಾಹನ ಕಂಪನಿಗಳು ದರ ಹೆಚ್ಚಳ ಮಾಡಿವೆ. ಇತ್ತೀಚಿನ ತಿಂಗಳಲ್ಲಿ ತಾಮ್ರ, ಅಲ್ಯುಮಿನಿಯಂ ದರಗಳು ಶೇ. 20ರಿಂದ ಶೇ. 45ರಷ್ಟು ಏರಿಕೆ ಕಂಡಿವೆ. ಮಾರುತಿ ಸ್ವಿಫ್ಟ್, ಹೋಂಡಾ ಜಾಝ್ ಮತ್ತು ಹ್ಯುಂಡೈ ಐ10 ಕಾರ್ ದರಗಳು 10 ಸಾವಿರ ರೂ. ಹೆಚ್ಚಾಗಲಿದೆ. ಸ್ಕೋಡಾ ಸೂಪರ್ಬ್ ಮತ್ತು ಟೊಯೊಟಾ ಕೊರೊಲಾ ದರಗಳು 25 ಸಾವಿರ ರೂ.ಗಿಂತಲೂ ದುಬಾರಿಯಾಗಲಿವೆ.
ಕಚ್ಚಾ ಸಾಮಾಗ್ರಿ ದುಬಾರಿಯಾಗಿರುವುದರಿಂದ ಟಾಟಾ ಮೋಟರ್ಸ್ ತನ್ನ ಪ್ರಯಾಣಿಕ ಕಾರ್ ದರಗಳನ್ನು ಹೆಚ್ಚಿಸಲಿದೆ. ಇಂಡಿಕಾ ಕಾರ್ ದರ 7 ಸಾವಿರ ರೂಪಾಯಿಯಿಂದ 9 ಸಾವಿರ ರೂ. ವರೆಗೆ ಹೆಚ್ಚಾಗಲಿದೆ. ವಿಸ್ಟಾ ಮತ್ತು ಇಂಡಿಗೊ ದರಗಳು 8 ಸಾವಿರ ರೂ.ನಿಂದ 11 ಸಾವಿರ ರೂ. ತನಕ ಏರಿಕೆ ಕಾಣಲಿದೆ. ಟಾಟಾ ಮಾಂಝಾ 10,000 ರೂ.ನಿಂದ 15 ಸಾವಿರ ರೂ.ವರೆಗೆ ದುಬಾರಿಯಾಗಲಿದೆ. ಟಾಟಾ ಸುಮೊ ದರ 13,000 ರೂ.ನಿಂದ 15 ಸಾವಿರ ರೂ.ವರೆಗೆ ಏರಿಕೆ ಕಾಣಲಿದೆ. ಟಾಟಾ ಸಫಾರಿ 18 ಸಾವಿರ ರೂ.ನಿಂದ 29 ಸಾವಿರ ರೂ.ನಷ್ಟು ದುಬಾರಿಯಾಗಲಿದೆ. ಟಾಟಾ ಆರಿಯಾ 30 ಸಾವಿರ ರೂ.ನಿಂದ 36 ಸಾವಿರ ರೂ.ವರೆಗೆ ದುಬಾರಿಯಾಗಲಿದೆ.


Click it and Unblock the Notifications








