ಬೆಂಗಳೂರು ಕ್ಷೌರಿಕನೊಬ್ಬನ ಬಳಿ ಲಕ್ಷುರಿ ಕಾರುಗಳ ಸಂತೆ

ಮುಗಿಲಲ್ಲಿ ಎದ್ದನು
ಕತ್ಲಲ್ಲಿ ಇದ್ದನು
ಬಂಗಾರ ಗೆದ್ದನು
ಹೇಗಿದ್ದ ಹೇಗಾದ ಗೊತ್ತಾ
ನಮ್ಮ ಚಿನ್ನಾರಿ ಮುತ್ತ
ನಮ್ಮ ಚಿನ್ನಾರಿ ಮುತ್ತ ...
ಆ ಸುದ್ದಿ ಓದಿದ ತಕ್ಷಣ ಈ ಹಾಡು ಪದೇ ಪದೇ ಕಾಡಲಾರಂಬಿಸಿತ್ತು. ಅದು ನಿನ್ನೆಯ ಬೆಂಗಳೂರು ಮಿರರ್ ನಲ್ಲಿ ಪ್ರಕಟಗೊಂಡ ಲೇಖನ. ಅದನ್ನು ಓದಿದಾಗ ಅಚ್ಚರಿ, ಖುಷಿ, ಹೀಗೂ ಉಂಟೆ ಎಂಬೆಲ್ಲ ಪದಗಳು ಮನಸ್ಸಿನಲ್ಲಿ ಮೂಡಿದ್ದೂ ಸುಳ್ಳಲ್ಲ.
ಬೆಂಗಳೂರಿನಲ್ಲಿರುವ ಬಾರ್ಬರ್ ಒಬ್ಬರ ಬಳಿ ಕೋಟ್ಯಾಧಿಪತಿಗಳಲ್ಲಿ ಮಾತ್ರ ಕಾಣ ಸಿಗುವ ರೋಲ್ಸ್ ರಾಯ್ಸಿ ಮತ್ತು ಬಿಎಂಡಬ್ಲ್ಯು ಕಾರುಗಳಿವೆ ಎಂಬ ಸುದ್ದಿ ಓದಿದಾಗ "ಅಬ್ಬಾ" ಅನಿಸಿದ್ದು ಮಾತ್ರ ನಿಜ. ಉದ್ಯಾನನಗರಿಯ ಶ್ರೀಮಂತ ಭಾಗವೊಂದಾದ "ಬ್ರಿಗೆಡ್ ಇನ್ಶುಟ್ಯೂಟ್" ಬಳಿಯಿರುವ ಬಾರ್ಬರ್ ರಮೇಶ್ ಬಾಬು ಎಂಬವರ ಬಳಿ ಲಕ್ಷುರಿ ಕಾರುಗಳು ಸಾಕಷ್ಟಿವೆ. ರಮೇಶ್ ವೃತ್ತಿಪರ ಬಾರ್ಬರ್. ಐಷಾರಾಮಿ ಕಾರುಗಳ ಸಂಗ್ರಹದ ಹವ್ಯಾಸವೂ ಇವರಿಗಿದೆ. ಅವರ ವಯಸ್ಸು 40.
ತಾನು ಕಷ್ಟಪಟ್ಟು ಗಳಿಸಿ ಕೂಡಿಟ್ಟ ಹಣವನ್ನು ಐಷಾರಾಮಿ ಕಾರುಗಳಿಗೆ ಸುರಿದಿದ್ದಾರೆ. ಇದಕ್ಕಾಗಿ ದೊಡ್ಡ ಮೊತ್ತದ ಬ್ಯಾಂಕ್ ಸಾಲವನ್ನೂ ಪಡೆದಿದ್ದಾರೆ. ಬ್ಯಾಂಕ್ ಗೆ ಪ್ರತಿತಿಂಗಳೂ ಸುಮಾರು 7 ಲಕ್ಷ ರೂಪಾಯಿಯಷ್ಟು ಪಾವತಿಸುತ್ತಿದ್ದಾರಂತೆ. ಅವರಿಗೆ ಸಾಕಷ್ಟು ಶ್ರೀಮಂತ ಗ್ರಾಹಕರಿದ್ದಾರೆ. ಬಾಲಿವುಡ್, ಟಾಲಿವುಡ್ ನ ಸಾಕಷ್ಟು ಗ್ರಾಹಕರೂ ಇವರಲ್ಲಿಗೆ ಬರುತ್ತಾರೆ. ಇವರು ರೆಗ್ಯುಲರ್ ಗ್ರಾಹಕರಿಗೆ ಹೇರ್ ಕಟ್ಟಿಂಗ್ ಗೆ ಜಾಸ್ತಿ ದುಡ್ಡು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಬೇಡಿ. ಅವರಿಂದ ಕ್ಷೌರಕ್ಕೆ ಈಗಲೂ ಅವರು ತೆಗೆದುಕೊಳ್ಳುವುದು 65 ರೂಪಾಯಿಯಂತೆ.
ಅಂದಹಾಗೇ ತನ್ನ ರೋಲ್ಸ್ ರಾಯ್ಸಿ ಕಾರನ್ನು ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬಾಡಿಗೆಗೆ ನೀಡುತ್ತಾರೆ. ಇದರಿಂದ ದಿನಕ್ಕೆ ಸುಮಾರು 75 ಸಾವಿರ ರೂಪಾಯಿ ಬಾಡಿಗೆ ದೊರಕುತ್ತದೆಯಂತೆ! ಇಂತಹ ಕಾರನ್ನು ಬೆಂಗಳೂರಿನಲ್ಲಿ ಹೊಂದಿರುವುದು ಕೇವಲ ನಾಲ್ಕೇ ಜನ. ದಯಾನಂದ ಪೈ, ರಾಯಲ್ ಆರ್ಕಿಡ್ ಹೋಟೆಲ್ ನ ಮಾಲೀಕರಾದ ಬಾಲ್ಜಿ ಮತ್ತು ಗೋಲ್ಡ್ ಪಿಂಚ್ ಹೋಟೆಲ್ ನ ಪ್ರಕಾಶ್ ಶೆಟ್ಟಿಯಲ್ಲೂ ಇಂತಹ ಕಾರುಗಳಿವೆ. ಮೊನ್ನೆ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸಂದರ್ಭದಲ್ಲಿ ಹೀರೋ ಹೋಂಡಾ ಚೇರ್ಮನ್ ರೋಲ್ಸ್ ರಾಯ್ಸಿ ಘೋಸ್ಟ್ ಕಾರನ್ನು ಬಾಡಿಗೆಗೆ ತೆಗೆದುಕೊಂಡಿದ್ದರಂತೆ.
ಮುಂದಿನ ವರ್ಷ ಸುಮಾರು 8ರಿಂದ 9 ಕೋಟಿ ರೂಪಾಯಿಯ ಐಷಾರಾಮಿ ಕಾರೊಂದನ್ನು ಖರೀದಿಸುವ ಯೋಚನೆಯೂ ಇವರಿಗಿದೆಯಂತೆ! ಈಗ ಇವರಲ್ಲಿ ಇಎಸ್ ಮತ್ತು ವಿಯಾನೊ ಸರಣಿಯ ಮರ್ಸಿಡಿಸ್ ಬೆಂಝ್ ಮತ್ತು 5, 7 ಸೀರಿಸ್ ನ ಬಿಎಂಡಬ್ಲ್ಯು ಕಾರುಗಳಿವೆ. ಜೊತೆಗೆ ಸುಮಾರು 16 ಲಕ್ಷ ರೂಪಾಯಿಯ ಸುಜುಕಿ ಇಂಟ್ರಡರ್ ಎಂಬ ಬೈಕ್ ಕೂಡ ಇದೆ. ಅದನ್ನು ತನ್ನ ಸ್ನೇಹಿತರೊಂದಿಗೆ ವಾರಾಂತ್ಯದ ರೈಡ್ ಗೆ ಬಳಸುತ್ತಾರಂತೆ.
1979ರಲ್ಲಿ ಇವರ ತಂದೆ ಸತ್ತ ನಂತರ ಬ್ರಿಗೆಡ್ ರಸ್ತೆಯಲ್ಲಿರುವ ಬಾರ್ಬರ್ ಷಾಪ್ ನಿಂದ ಇವರು ಗಳಿಸುತ್ತಿದ್ದದ್ದು ದಿನಕ್ಕೆ ಕೇವಲ 5 ರೂಪಾಯಿ. ಈಗ ಇವರ ಬಳಿ 5 ಕೋಟಿ ರೂ.ಗೆ ಹತ್ತಿರವಿರುವ ಐಷಾರಾಮಿ ಕಾರುಗಳು ಬಾಡಿಗೆಗಿದೆ. ಮಿರರ್ ನಲ್ಲಿ ಬಂದ ಆ ಸುದ್ದಿ ಓದಿದ ನಂತರ ಚಿನ್ನಾರಿ ಮುತ್ತಾ ಹಾಡು ಮತ್ತೆ ಮತ್ತೆ ಕಾಡುತ್ತಿದೆ. ಹೇಗಿದ್ದ ಹೇಗಾದ ಗೊತ್ತಾ...


Click it and Unblock the Notifications








