ವಾಹನ ಮಾಲೀಕರಿಗೆ ಕಹಿ ಸುದ್ದಿ; ವಿಮಾ ಪಾಲಿಸಿ ದುಬಾರಿ

ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರ ಈ ಹಿಂದೆ ನಾಲ್ಕು ವರ್ಷಗಳಿಗೊಮ್ಮೆ ಬದಲಾಗುತ್ತಿತ್ತು. ಆದರೆ ಇನ್ನು ಮುಂದೆ ಹಣದುಬ್ಬರ ದರ ಮತ್ತು ವಾಹನದ ಸೆಗ್ಮೆಂಟ್ ಗೆ ಅನುಗುಣವಾಗಿ ಪ್ರತಿವರ್ಷ ಪಾಲಿಸಿದರ ಹೆಚ್ಚಿಸಲು ದೇಶದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎ) ನಿರ್ಧರಿಸಿದೆ.
ರಸ್ತೆ ಅಪಘಾತದಲ್ಲಿ ತೊಂದರೆಗೊಳಗಾಗ ವ್ಯಕ್ತಿಗೆ ಪ್ರತಿ ವಾಹನ ಮಾಲೀಕ ನೀಡುವ ಪರಿಹಾರ (ಥರ್ಡ್ ಪಾರ್ಟಿ) ವಿಮಾ ಪಾಲಿಸಿಯ ನೂತನ ಟಾರೀಫ್ ನ್ನು ಐಆರ್ ಡಿಎ ಪ್ರಕಟಿಸಿದೆ. ಆದರೆ ನೂತನ ಹೆಚ್ಚಳ ಕಳೆದ ಜನವರಿಯಲ್ಲಿ ಐಆರ್ ಡಿರ ಪ್ರಸ್ತಾಪಿಸಿದ ದರಕ್ಕಿಂತ ಕಡಿಮೆಯಾಗಿದೆ. ಉದಾಹರಣೆಗೆ ಕಳೆದ ಜನವರಿಯಲ್ಲಿ ಭಾರಿ ವಾಹನಗಳಿಗೆ ಶೇ. 80ರಷ್ಟು ವಿಮಾ ಪಾಲಿಸಿ ದರ ಹೆಚ್ಚಳ ಮಾಡುವುದಾಗಿ ಐಆರ್ ಡಿಎ ತಿಳಿಸಿತ್ತು. ಆದರೆ ಈಗ ಶೇ. 60ರಷ್ಟು ಮಾತ್ರ ಏರಿಕೆ ಮಾಡಿದೆ.
ನೂತನ ಪರಿಷ್ಕೃತ ಥರ್ಡ್ ಪಾರ್ಟಿ ವಿಮಾ ಪಾಲಿಸಿ ದರಗಳು ಇಂತಿವೆ. 1 ಸಾವಿರ ಸಿಸಿಗಿಂತ ಕಡಿಮೆಯ ಕಾರುಗಳ ದರ 672 ರೂ.ನಿಂದ 740 ರೂ.ಗೆ ಏರಿಕೆಯಾಗಿದೆ. 1 ಸಾವಿರ ಸಿಸಿಯಿಂದ 1,500 ಸಿಸಿವರೆಗಿನ ಕಾರುಗಳ ಪಾಲಿಸಿ ದರ 880 ರೂ.ಗೆ ಹೆಚ್ಚಾಗಿದೆ. ಈ ಹಿಂದೆ ಇದು 800 ರೂ. ಆಗಿತ್ತು. ದ್ವಿಚಕ್ರ ವಾಹನ ವಿಭಾಗದಲ್ಲಿ 350 ಸಿಸಿಗಿಂತ ಹೆಚ್ಚಿನ ಬೈಕ್ ಗಳ ಪಾಲಿಸಿ ದರಗಳು ಶೇ. 10ರಷ್ಟು ಹೆಚ್ಚಾಗಿದ್ದು 330 ರೂ.ಗೆ ತಲುಪಿದೆ. ಏಳುವರೆ ಸಾವಿರ ಕೆ.ಜಿ.ಗಿಂತ ಹೆಚ್ಚು ತೂಕದ ಭಾರಿ ವಾಹನಗಳ ಪಾಲಿಸಿ ದರಗಳು ಮಾತ್ರ 5 ಸಾವಿರ ರೂ. ಇದ್ದದ್ದು 8,420 ರೂ.ಗೆ ತಲುಪಿದೆ.
ಮೋಟರ್-ಥರ್ಡ್ ಪಾರ್ಟಿ ವಿಮಾ ನೀತಿಯ ಮೂಲಕ ನಷ್ಟವನ್ನು ಅನುಭವಿಸುತ್ತಿದ್ದ ವಿಮಾ ಕಂಪನಿಗಳು ನೂತನ ಹೆಚ್ಚಳದಿಂದ ಖುಷಿಗೊಂಡಿವೆ. ಈ ಹಿಂದೆ ವಿಮಾ ದರಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿತ್ತು. ಇನ್ನು ಮುಂದೆ ವರ್ಷಕ್ಕೊಮ್ಮೆ ವಿಮಾ ಪಾಲಿಸಿ ದರಗಳು ಹೆಚ್ಚಾಗಲಿವೆ. ಪ್ರತಿ ವರ್ಷ ದರ ಹೆಚ್ಚಳಕ್ಕೆ ಐಆರ್ ಡಿಎ ವಿಶೇಷ ಫಾರ್ಮುಲಾ ವೊಂದನ್ನು ರೂಪಿಸಿದೆ. ಅಂದರೆ ಹಣದುಬ್ಬರ ದರ, ವಾಹನಗಳ ದರವನ್ನು ಆಧರಿಸಿ ಪಾಲಿಸಿ ದರ ಪರಿಷ್ಕರಿಸಲಿದೆ.


Click it and Unblock the Notifications








