ವಾಹನ ಸವಾರಿಯಲ್ಲಿ ಪುರುಷ ಚಂಚಲ, ಮಹಿಳೆ ಅಚಲ!

ವಾಹನ ಚಲಾಯಿಸುವಾಗ ಉಂಟಾಗುವ ಸಣ್ಣ ಅಪಘಾತಗಳನ್ನು ಉಂಟು ಮಾಡುವಲ್ಲಿ ಪುರುಷರದ್ದು ಎತ್ತಿದ ಕೈ. ಹತ್ತರಲ್ಲಿ ಒಬ್ಬ ಪುರುಷರು ಇಂತಹ ನಿರ್ಲಕ್ಷ್ಯದ ವಾಹನ ಚಾಲನೆ ಮಾಡುತ್ತಾರೆ. ಹಾಗಂತ ಮಹಿಳೆಯರಿಗೆ ಜಾಸ್ತಿ ಏಕಾಗ್ರತೆ ಇದೆ ಎಂದು ಬೀಗಬೇಕಿಲ್ಲ. 20ರಲ್ಲಿ ಒಬ್ಬಳು ಇಂತಹ ನಿರ್ಲಕ್ಷ್ಯದ ವಾಹನ ಚಾಲನೆ ಮಾಡುತ್ತಾಳೆ. ಇಲ್ಲೂ ಮಹಿಳೆಯರಿಗಿಂತ ಪುರುಷರು ಅರ್ಧಪಟ್ಟು ಕಡಿಮೆ ಮಾರ್ಕ್ಸ್ ಪಡೆದಿದ್ದಾರೆ ಎಂಬುದೇ ಸದ್ಯ ಪುರುಷರನ್ನು ಚಂಚಲರನ್ನಾಗಿಸೋ ವಿಷಯ.
ಏಕಾಗ್ರತೆ ಕಳೆದುಕೊಳ್ಳುವ ವಿಷಯದಲ್ಲೂ ಪುರುಷರು ಮುಂದಿದ್ದಾರೆ. ಚಿತ್ತ ಕೆಡಿಸುವ ಸಾವಿರಾರು ವಿಷಯಗಳಲ್ಲಿ ಅವರು ಮಗ್ನರಾಗುತ್ತಾರೆ. ರಸ್ತೆ ಬದಿಯ ಮಾಡೆಲ್ ಒಬ್ಬಳ ದೊಡ್ಡ ಚಿತ್ರ, ಅರೆನಗ್ನ ಜಾಹೀರಾತುಗಳು ಅವನ ಚಿತ್ತ ಕೆಡಿಸುವುದು ಸಾಮಾನ್ಯ. ಹಾಗಂತ ಪುರುಷರು ಸಮಾಧಾನ ಮಾಡಿಕೊಳ್ಳಬೇಕಾಷ್ಟೇ!
ಕಾರು ಚಾಲನೆ ಮಾಡುವಾಗ ಪುರುಷರು ಸುಮ್ಮನಿರೋದಿಲ್ಲವಂತೆ. ಅವರ ಕೈ ಹೆಚ್ಚು ಬಾರಿ ಹೋಗೋದು ಸ್ಟಿರೀಯೋ ಬಳಿಯಂತೆ. ಅದರ ಬಟನ್ ಒತ್ತುವುದು, ಹಾಡು ಬದಲಾಯಿವುದು, ಆಫ್ ಮಾಡೋದು ಮತ್ತೆ ಆನ್ ಮಾಡೋದು, ಸಿಡಿ ಬದಲಾಯಿಸೋದು, ಹೀಗೆ ಸದಾ ಚಾಲನೆಯಲ್ಲಿ ಚಂಚಲತೆಯಿಂದ ಪುರುಷ ಚಾಲಕರು ವರ್ತಿಸುವುದಾಗಿ ಸಾಂಟೆಡರ್ ಎಂಬ ವಿದೇಶಿ ವಿಮಾ ಕಂಪನಿಯ ಸಮೀಕ್ಷೆ ಜಾಹೀರು ಪಡಿಸಿದೆ.
ಹೆಚ್ಚಿನ ಪುರುಷರು ಫೋನ್ ನಲ್ಲಿ ಮಾತನಾಡುತ್ತ, ಸಿಡಿ ಬದಲಾಯಿಸುತ್ತ, ತಿಂಡಿ ಮೆಲ್ಲುತ್ತ, ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತ ವಾಹನ ಚಾಲನೆಯಲ್ಲಿ ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಇದರಿಂದ ಅಪಘಾತದಂತಹ ಅಪಾಯಗಳು ಹೆಚ್ಚು ಎಂದು ಸಮೀಕ್ಷೆ ತಿಳಿಸಿದೆ. ಮಹಿಳೆಯರು ಆಗಾಗ ಮಿರರ್ ನಲ್ಲಿ ತಮ್ಮ ಮುಖ ನೋಡುತ್ತ ಬಿಂದಿ, ಲಿಫ್ ಸ್ಟಿಕ್ ಪರಿಶೀಲಿಸುತ್ತ ಚಂಚಲರಾಗುತ್ತಾರೆ ಎಂಬುದಾಗಿ ಸಮೀಕ್ಷೆ ತಿಳಿಸಿಲ್ಲವೆಂದು ಪುರುಷ ಪುಂಗವರು ಕೋಪಗೊಂಡಿದ್ದಾರಂತೆ!


Click it and Unblock the Notifications








