ನಿಮ್ಮ ಕಾರು ನಿಮ್ಮದಲ್ಲ; ಕಳ್ಳ ಮಾಲಾಗಿರಬಹುದು ಎಚ್ಚರಿಕೆ!

ರೋಲ್ಸ್ ರಾಯ್ಸ್, ಬೆಂಟ್ಲಿ, ಫೆರಾರಿ, ಲಂಬೋರ್ಗಿನಿ, ಹಮ್ಮರ್ಸ್ ಮತ್ತು ಆಸ್ಟನ್ ಮಾರ್ಟಿನ್ ಇತ್ಯಾದಿ ಹೆಚ್ಚಿನ ಐಷಾರಾಮಿ ಕಾರುಗಳೆಲ್ಲವನ್ನು ಖದೀಮರು ಯುರೋಪ್ ಮತ್ತು ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಂದ ಕದ್ದು ಭಾರತದ ಮುಗ್ಧ ಜನರಿಗೆ ಮಾರಾಟ ಮಾಡುತ್ತಿದ್ದರಂತೆ!
ಬಾಲಿವುಡ್ ನಟರು, ರಾಜಕಾರಣಿಗಳು, ಆಟಗಾರರು, ಉದ್ಯಮಿಗಳು ಕೂಡ ಗೊತ್ತಿಲ್ಲದೆ ಇಂತಹ ಕಳ್ಳ ಮಾಲುಗಳ ಒಡೆಯರಾಗುತ್ತಾರೆ. ಆಮೇಲೆ ವಶಪಡಿಸಿಕೊಂಡಾಗ ಕಂಗಲಾಗುತ್ತಾರೆ. ದೆಹಲಿಯಲ್ಲಿ ಈಗಾಗಲೇ ಇಂತಹ 40 ಕದ್ದ ಕಾರುಗಳನ್ನು ಡಿಆರ್ಐ ವಶಪಡಿಸಿಕೊಂಡಿದೆ.
ಉದಾಹರಣೆಗೆ ವಾಲಿಯ ಎಂಬಾತ ಯುರೋಪ್ ನಿಂದ ಖರೀದಿಸಿದ ಲಕ್ಷುರಿ ಕಾರು ಕಳ್ಳಮಾಲೆಂದು ಡಿಆರ್ಐ ವಶಪಡಿಸಿಕೊಂಡಿದೆ. ಆತನಿಗೆ ಖದೀಮರು ಸುಳ್ಳು ಆಮದು ದಾಖಲೆಗಳನ್ನು ಸೃಷ್ಟಿಸಿಕೊಟ್ಟಿದ್ದರು.
ಇಂಗ್ಲೆಂಡ್ ಮತ್ತು ಐರ್ಲಾಂಡ್ ದೇಶಗಳಿಂದ ಇಂತಹ ಕಾರುಗಳು ಆಮದಾಗುವುದು ಕಡಿಮೆ. ಯಾಕೆಂದರೆ ಅಲ್ಲಿರೋದೆಲ್ಲ ರೈಟ್ ಹ್ಯಾಂಡ್ ಡ್ರೈವಿಂಗ್ ಕಾರಗಳು. ಆದರೆ ದಕ್ಷಿಣ ಆಫ್ರಿಕಾ ಮುಂತಾದ ದೇಶಗಳಿಂದ ಲೆಫ್ಟ್ ಹ್ಯಾಂಡ್ ಡ್ರೈವಿಂಗ್ ಕಾರುಗಳನ್ನು ಕದ್ದು ದುಬೈಗೆ ಸಾಗಿಸಿ ಅಲ್ಲಿ ಅದನ್ನು ಮತ್ತೆ ಜೋಡಿಸಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭಾರತಕ್ಕೆ ರಫ್ತು ಮಾಡಲಾಗುತ್ತಿದೆ ಎನ್ನಲಾಗಿದೆ.
ಭಾರತದಲ್ಲಿ ಸುಮಾರು 300ರಿಂದ 400ರಷ್ಟು ಕದ್ದ ಐಷಾರಾಮಿ ಕಾರುಗಳಿರುವ ಸಾಧ್ಯತೆಗಳಿರುವುದಾಗಿ ಡಿಆರ್ಐ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ. ಭಾರತದಲ್ಲಿರುವ ವಿದೇಶಿ ರಾಯಭಾರಿಯೊಬ್ಬರ ಬಳಿಯಿದ್ದ ಇಂತಹ ಎರಡು ಕೋಟಿ ರೂ. ಮೌಲ್ಯದ ಆಸ್ಟಿನ್ ಮಾರ್ಟಿನ್ ಕಾರೊಂದನ್ನು ವಶಪಡಿಸಿಕೊಂಡಿರುವುದಾಗಿ ಡಿಆರ್ಐ ಅಧಿಕಾರಿಯೊಬ್ಬರು ಹೇಳುತ್ತಾರೆ.
ಖದೀಮರು ಗ್ರಾಹಕರಿಗೆ ಸುಲಭದಲ್ಲಿ ಮೋಸ ಮಾಡುತ್ತಾರೆ. ಸಾಕಷ್ಟು ದಾಖಲೆಗಳನ್ನು ನೀಡುವುದರೊಂದಿಗೆ ಗ್ರಾಹಕರಿಗೆ ಎಳ್ಳಷ್ಟು ಅನುಮಾನ ಬರದಂತೆ ನೋಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಇಂತಹ ಕಾರುಗಳನ್ನು ಖರೀದಿಸುವ ಮುನ್ನ ಒಂದಿಷ್ಟು ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಇದಕ್ಕಾಗಿ ಡಿಆರ್ಐ ಕೆಲವು ಸಲಹೆಗಳನ್ನು ನೀಡಿದೆ.
* ಕದ್ದ ಕಾರಾಗಿರಬಹುದೇ ಎಂಬ ಅನುಮಾನ ನಿಮಗೆ ಬಂದರೆ ನೇರವಾಗಿ ಕಾರು ಉತ್ಪಾದಿಸಿದ ಕಂಪನಿಯನ್ನು ಸಂಪರ್ಕಿಸಿರಿ
* ಇಂಟರ್ ನೆಟ್ ಮೂಲಕ ಕಂಪನಿಯ ಅಧಿಕೃತ ಡೀಲರ್ ಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ
* ಕಾರು ಸಂಬಂಧಿ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿರಿ.
ಐಷಾರಾಮಿ ಕಾರುಗಳೆಂದರೆ ದುಬಾರಿ ದರ ಪಾವತಿಸಬೇಕು. ಇಷ್ಟು ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಿದ ಮೇಲೆ ಮೋಸ ಹೋದರೆ ಸುಧಾರಿಸಿಕೊಳ್ಳುವುದು ತುಂಬಾ ಕಷ್ಟ. ಯಾಕೆಂದರೆ ಕದ್ದ ಮಾಲು ವಶಪಡಿಸಿಕೊಂಡರೆ ನಿಮಗೆ ಮತ್ತೆ ಅದು ದೊರಕದು. ದೇಶದ ಸದ್ಯದ ಕಾನೂನಿನ ಪ್ರಕಾರ ಇಂತಹ ಕಳ್ಳ ಮಾಲು/ಕಾರುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಕಾರು ಮಾಲಿಕನಿಗೆ ಯಾವುದೇ ಪರಿಹಾರಗಳನ್ನು ನೀಡಲಾಗುವುದಿಲ್ಲ. ಹಾಗಾಗಿ ಖರೀದಿಸುವ ಮುನ್ನ ಎಚ್ಚರಿಕೆ ಎಷ್ಟಿದ್ದರೂ ಸಾಲದು. ಬೀ ಕೇರ್ ಫುಲ್.


Click it and Unblock the Notifications








