ಟೊಯೊಟಾದಿಂದ ಕಾರು ಅಪಘಾತ ತಡೆ ತಂತ್ರಜ್ಞಾನ

ಅಪಘಾತ ತಡೆಗೆ ವಾಹನಗಳಲ್ಲಿ ಹಲವು ಸುರಕ್ಷಿತ ಫೀಚರ್ ಗಳಿವೆ. ಕಾರು ಬೈಕುಗಳಿಗೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಇದೆ. ಕಾರುಗಳಲ್ಲಿ ಏರ್ ಬ್ಯಾಗ್ ಇದೆ. ಇದೀಗ ಟೊಯೊಟಾ ನೂತನ ಸುರಕ್ಷತೆಯ ಸಾಧನವೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಅದರ ಹೆಸರು ಅಪಘಾತ ತಪ್ಪಿಸುವ ಸಾಧನ(crash avoidance system).
ಇಂತಹ ಸಾಧನವೊಂದನ್ನು ಈ ಹಿಂದೆ ವೊಲ್ವೊ ಅಭಿವೃದ್ಧಿಪಡಿಸಿತ್ತು. ಕಾರಿನ ಸುತ್ತಲತೆಯ ನಿಗದಿತ ವ್ಯಾಪ್ತಿಗೆ ಯಾವುದೇ ವಸ್ತು ಅಡ್ಡ ಬಂದರೂ ಸ್ವಯಂಚಾಲಿತವಾಗಿ ಬ್ರೇಕ್ ಹಾಕಲ್ಪಡುತ್ತದೆ. ಕಾರು ಚಲಿಸುತ್ತಿರುವಾಗ ಪಾದಚಾರಿ, ಬೇರೆ ವಾಹನ, ನಾಯಿ, ಬೆಕ್ಕು, ದನ ಅಡ್ಡ ಬಂದರೆ ಕಾರು ತನ್ನಷ್ಟಕ್ಕೆ ನಿಲ್ಲುತ್ತದೆ.
ಈ ಸಾಧನವನ್ನು ಕಾರಿನ ಎದುರು ಮತ್ತು ಹಿಂಬಾಗಕ್ಕೆ ಅಳವಡಿಸಲಾಗುವುದಂತೆ. ವೇವ್ ರಾಡರ್ ತಂತ್ರಜ್ಞಾನ, ಕ್ಯಾಮರಾ ಹೊಂದಿರುವ ಈ ಸಾಧನ ಅಪಘಾತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಟೊಯೊಟಾ ಸಾಧನದಲ್ಲಿ ಹಲವು ವಿಶೇಷತೆಗಳಿವೆ. ಈ ಸಾಧನ ಕೇವಲ ತುರ್ತು ಬ್ರೇಕ್ ಮಾತ್ರ ಹಾಕುತ್ತಿಲ್ಲ. ಸ್ಟೇರಿಂಗ್ ಹಿಡಿತವನ್ನೂ ನೀಡುತ್ತದೆ. ಅಂದರೆ ತುರ್ತಾಗಿ ಬ್ರೇಕ್ ಹಾಕಿದರೆ ವಾಹನ ಸ್ಕಿಡ್ ಆಗುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಈ ಸಾಧನ ಸ್ಟೇರಿಂಗ್ ವೀಲ್ ನಿಯಂತ್ರಣ ತಂತ್ರಜ್ಞಾನವನ್ನೂ ಹೊಂದಿದೆ.
ಕೆಲವರು ವಾಹನ ಡ್ರೈವಿಂಗ್ ಮಾಡುತ್ತ ಹೃದಯಾಘತಕ್ಕೆ ಈಡಾಗುತ್ತಾರೆ. ಇದನ್ನು ತಡೆಗಟ್ಟಲು ಇದು ಕೊಲಿಷನ್ ಇನ್ ಎಂಬ ತಂತ್ರಜ್ಞಾನವನ್ನು ಹೊಂದಿದೆ. ಈ ತಂತ್ರಜ್ಞಾನ ಚಾಲಕನ ಹೃದಯದ ಬಡಿತದ ಮೇಲೊಂದು ಕಿವಿಯಿಟ್ಟಿರುತ್ತದೆ. ಹೃದಯದ ಬಡಿತದಲ್ಲಿ ಏರುಪೇರಾದರೆ ಕಾರನ್ನು ನಿಲ್ಲಿಸುತ್ತದಂತೆ!
ನೂತನ ಸುರಕ್ಷಿತ ಸಾಧನ ಯಾವಾಗ ಮಾರುಕಟ್ಟೆಗೆ ತಲುಪಲಿದೆ ಎಂದು ಕಂಪನಿ ಸ್ಪಷ್ಟಪಡಿಸಿಲ್ಲ. ಆದರೆ ಇದರಲ್ಲಿರುವ ಫೀಚರ್ ಗಳನ್ನು ನೋಡಿದಾಗ ಇದು ದುಬಾರಿ ಸಾಧನವೆಂದು ಅರಿವಾಗುತ್ತದೆ. ಆದರೆ ಪ್ರಾಣಕ್ಕಿಂತ ದುಬಾರಿಯಾದದ್ದು ಯಾವುದೂ ಇಲ್ಲ ಅಲ್ಲವೇ?


Click it and Unblock the Notifications








