ನೂತನ ಸ್ವಿಫ್ಟ್ ಬುಕ್ಕಿಂಗ್ 25 ಸಾವಿರ ದಾಟಿದೆಯಂತೆ!

ಹಬ್ಬದ ಸೀಸನ್ ಗೆ ರಸ್ತೆಗಿಳಿಯಲಿರುವ ನೂತನ ಸ್ವಿಫ್ಟ್ ನತ್ತ ಗ್ರಾಹಕರು ಈಗಾಗಲೇ ಮುಗಿಬಿದ್ದಿದ್ದಾರೆ. ಎನ್ ಡಿ ಟಿವಿ ಕಾರುಬೈಕ್ ಶೋನಲ್ಲಿ ಗೊತ್ತಾದ ಮಾಹಿತಿಯ ಪ್ರಕಾರ ನೂತನ ಸ್ವಿಫ್ಟ್ ಬುಕ್ಕಿಂಗ್ ಈಗಾಗಲೇ 25 ಸಾವಿರ ಗಡಿ ದಾಟಿದೆಯಂತೆ!
ವಿಶೇಷವೆಂದರೆ ಈ ಕಾರು ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಕಂಪನಿ ನೀಡಿಲ್ಲ. ಇದರ ಸ್ಪಷ್ಟ ದರವೆಷ್ಟು? ಏನೆಲ್ಲ ವಿಶೇಷತೆಗಳಿರಲಿವೆ ಎಂಬ ಖಚಿತ ಮಾಹಿತಿಯೂ ಗ್ರಾಹಕರಿಗೆ ದೊರಕಿಲ್ಲ. ಆದರೂ 25 ಸಾವಿರ ಗ್ರಾಹಕರು ತಮ್ಮ ಹತ್ತಿರದ ಶೋರೂಂಗಳಲ್ಲಿ "ನಮಗೊಂದು ಹೊಸ ಸ್ವಿಫ್ಟ್ ಇರಲಿ" ಎಂದು ಕಾದಿರಿಸಿದರೆಂದರೆ ಅದೊಂದು ವಿಶೇಷತೆಯೇ ಸರಿ.
ಇದಕ್ಕೆಲ್ಲ ಕಾರಣವಾಗಿರುವುದು ಭಾರತೀಯರ ನಂಬಿಕೆ. ಮಾರುತಿ ಬ್ರಾಂಡ್ ಮೇಲೆ ಅವರಿಗಿರುವ ಅಚಲ ವಿಶ್ವಾಸ ಪ್ರತೀಕ ಇದೆನ್ನಬಹುದು. ಇತ್ತೀಚೆಗೆ ಉತ್ಪಾದನೆ ನಿಲ್ಲಿಸಿದ ಸ್ವಿಫ್ಟ್ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಕಂಪನಿ ಹೊರತರಲಿರುವ ನೂತನ ಸ್ವಿಫ್ಟ್ ಅದಕ್ಕಿಂತಲೂ ಭರ್ಜರಿಯಾಗಿರಲಿದೆ ಎಂಬ ವಿಶ್ವಾಸ ಗ್ರಾಹಕರಿಗಿದೆ. ಹೀಗಾಗಿ ಗ್ರಾಹಕರು ನಂಬಿಕೆಯ ಮೇಲೆ ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಹೊಸ ಸ್ವಿಫ್ಟ್ ಬಗ್ಗೆ ಕೊಂಚ ಮಾಹಿತಿ: ಮಾರುತಿ ಸುಜುಕಿ ಸ್ವಿಫ್ಟ್ ರಸ್ತೆಗಿಳಿದು ಸುಮಾರು 6 ವರ್ಷ ಕಳೆದ ನಂತರ ಮೊದಲ ಬಾರಿಗೆ ಸ್ವಿಫ್ಟ್ ಫೇಸ್ ಲಿಫ್ಟ್ ಮಾಡುತ್ತಿದೆ. ನೂತನ ಸ್ವಿಫ್ಟ್ ದರದ ಕುರಿತು ಕಂಪನಿ ಮಾಹಿತಿ ನೀಡಿಲ್ಲ.
ನೂತನ ಪೆಟ್ರೋಲ್ ಆವೃತ್ತಿ ಪ್ರತಿಲೀಟರ್ ಗೆ ಸುಮಾರು 20 ಕಿ.ಮೀ. ಮೈಲೇಜ್ ನೀಡಲಿದೆ. ಸದ್ಯ ರಸ್ತೆಯಲ್ಲಿರುವ ಪೆಟ್ರೋಲ್ ಸ್ವಿಫ್ಟ್ ಲೀಟರ್ ಗೆ 17.9 ಕಿ.ಮೀ. ಮೈಲೇಜ್ ನೀಡುತ್ತಿದೆ. ನೂತನ ಡೀಸಲ್ ಆವೃತ್ತಿ ಕೂಡ ಪ್ರತಿಲೀಟರ್ ಗೆ 23.8 ಕಿ.ಮೀ. ಮೈಲೇಜ್ ನೀಡುತ್ತದೆ. ಸದ್ಯ ರಸ್ತೆಯಲ್ಲಿರುವ ಡೀಸಲ್ ಸ್ವಿಫ್ಟ್ ಪ್ರತಿಲೀಟರ್ ಗೆ 21 ಕಿ.ಮೀ. ಮೈಲೇಜ್ ನೀಡುತ್ತಿದೆ.
ನೂತನ ಸ್ವಿಫ್ಟ್ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ ಎಂದು ವರದಿಗಳು ಹೇಳಿವೆ. ಈಗ ರಸ್ತೆಯಲ್ಲಿರುವ ಸ್ವಿಫ್ಟ್ ಕಾರುಗಳು 5 ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿವೆ.
ಈಗ ಸ್ವಿಫ್ಟ್ ಕಾರುಗಳು ಪೆಟ್ರೋಲ್, ಡೀಸಲ್ ಮತ್ತು ಸಿಎನ್ ಜಿ ವರ್ಷನ್ ಗಳಲ್ಲಿ ದೊರಕುತ್ತಿವೆ. ಇವುಗಳ ದರ 3.9 ಲಕ್ಷ ರು.ನಿಂದ 5.5 ಲಕ್ಷ ರು.ವರೆಗಿವೆ. ಕಂಪನಿಯು ಪ್ರತಿತಿಂಗಳು ಸುಮಾರು 12 ಸಾವಿರ ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡುತ್ತಿದೆ.


Click it and Unblock the Notifications








