ಹೊಸ ಡೀಸೆಲ್ ನೀತಿಗೆ ಕಾರು ಕಂಪನಿಗಳ ವಿರೋಧ

ಜುಲೈ ತಿಂಗಳ ಕಾರು ಮಾರಾಟ ಈಗಾಗಲೇ ಇಳಿಕೆ ಕಂಡಿದೆ. ಕಳೆದ ವರ್ಷದ ಕಾರು ಮಾರಾಟಕ್ಕೆ ಹೋಲಿಸಿದರೆ ಜುಲೈನಲ್ಲಿ ಶೇಕಡ 10ರಷ್ಟು ಇಳಿಕೆಯಾಗಿದೆ. ದೇಶದ ಪ್ರಯಾಣಿಕ ಕಾರು ಮಾರಾಟದಲ್ಲಿ ಶೇಕಡ 35ರಷ್ಟು ಡೀಸೆಲ್ ಕಾರು ಮಾರಾಟವಾಗುತ್ತಿದೆ. ಪೆಟ್ರೊಲ್ ಗಿಂತ ಡೀಸೆಲ್ ದರ ಸುಮಾರು 40 ರು. ಅಗ್ಗವಾಗಿರುವುದರಿಂದ ಗ್ರಾಹಕರು ಡೀಸೆಲ್ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.
ಈಗ ಸರಕಾರವು ಪ್ರತಿಲೀಟರ್ ಡೀಸೆಲ್ ಗೆ 6.08 ರು. ಸಬ್ಸಿಡಿ ನೀಡುತ್ತಿದೆ. ಇನ್ನು ಮುಂದೆ ಡೀಸೆಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲು ನಿರ್ಧರಿಸಿದೆ. ಇದರಿಂದ ಈಗಾಗಲೇ ಮಾರಾಟ ಇಳಿಕೆಯಿಂದ ಕಂಗಲಾಗಿರುವ ಉದ್ಯಮವನ್ನು ಪಾತಾಳಕ್ಕೆ ತಳ್ಳಲಿದೆ ಎಂದು ಕಾರು ಕಂಪನಿಗಳು ಅಭಿಪ್ರಾಯಪಟ್ಟಿವೆ.
"ಸರಕಾರದ ನೀತಿ ಕಾರು ಮಾರಾಟದ ಮೇಲೆ ಭಾರಿ ಪರಿಣಾಮ ಬೀರಲಿದೆ" ಎಂದು ಜನರಲ್ ಮೋಟರ್ಸ್ ಆಧ್ಯಕ್ಷ ಕಾರ್ಲ್ ಶ್ಯಾಮ್ ಅಭಿಪ್ರಾಯಪಟ್ಟಿದ್ದಾರೆ. ಮಾರುತಿ ಸುಜುಕಿ ಕೂಡ ಇದನ್ನು ಒಪ್ಪಿದೆ. ಕಂಪನಿಯು ಈಗಾಗಲೇ ಇತರ ಕಂಪನಿಗಳಿಂದ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದೆ. ಡೀಸೆಲ್ ಕಾರು ಮಾರಾಟ ಹೆಚ್ಚಿಸಲು ಹಂಗೇರಿಗೆ ಡೀಸೆಲ್ ಎಂಜಿನ್ ರಫ್ತು ಮಾಡಲು ಕೂಡ ಕಂಪನಿ ನಿರ್ಧರಿಸಿದೆ.
ಆದರೂ ದೇಶದ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್ಐಎಎಂ) ಸರಕಾರದ ನೂತನ ಪ್ರಸ್ತಾಪವನ್ನು ಸ್ವಾಗತಿಸಿದೆ. ಸಬ್ಸಿಡಿ ತೆಗೆದು ಹಾಕುವುದು ನಿಜಕ್ಕೂ ಸರಿಯಾದ ಕ್ರಮ. ಮಾರುಕಟ್ಟೆ ಆಧರಿತ ಡೀಸೆಲ್ ದರ ಸೂಕ್ತವಾಗಿದೆ" ಎಂದು ಎಸ್ಐಎಎಂ ಅಧ್ಯಕ್ಷ ಪವನ್ ಗೋಯೆಂಕಾ ಹೇಳಿದ್ದಾರೆ.


Click it and Unblock the Notifications








