ಎಲೆಕ್ಟ್ರಿಕ್ ವೆಹಿಕಲ್ ಗೆ ಭಾರತ ಸಣ್ಣ ಮಾರುಕಟ್ಟೆಯಂತೆ

ದೇಶದ ಗ್ರಾಹಕರು ದುಬಾರಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಆಸಕ್ತಿ ತೋರುತ್ತಿಲ್ಲ ಎಂದು ಅಧ್ಯಯನ ಕಂಡುಕೊಂಡಿದೆ. ಇಲ್ಲಿನ ಗ್ರಾಹಕರು ಪೆಟ್ರೊಲ್ ದರ ಲೀಟರಿಗೆ 85 ರುಪಾಯಿ ಮುಟ್ಟಿದಾಗ ಇ-ವೆಹಿಕಲ್ ಕುರಿತು ಹೆಚ್ಚು ಗಮನಹರಿಸಲಿದ್ದಾರೆ ಎಂದು ವರದಿ ಹೇಳಿದೆ. ದೇಶದ ಕಾರು ಖರೀದಿದಾರರ ಅಭಿಪ್ರಾಯಗಳನ್ನು ಆಧರಿಸಿ ಈ ಅಧ್ಯಯನ ಮಾಡಲಾಗಿದೆ.
ಅಧ್ಯಯನ ಇನ್ನೊಂದು ವಿಷಯವನ್ನು ಮುಂದಿಟ್ಟಿದೆ. ಭಾರತದ ಗ್ರಾಹಕರು ಕಡಿಮೆ ಸಮಯದಲ್ಲಿ ಚಾರ್ಜ್ ಆಗುವ ಎಲೆಕ್ಟ್ರಿಕ್ ಕಾರುಗಳನ್ನು ಎದುರು ನೋಡುತ್ತಿದ್ದಾರಂತೆ. ಒಂದೆರಡು ಗಂಟೆಯಾದರೆ ಚಾರ್ಜ್ ಮಾಡಬಹುದು. ರಾತ್ರಿಯಿಂದ ಬೆಳಗಿನ ತನಕ ಚಾರ್ಜ್ ಮಾಡುವ ಕಾರಿನ ಕುರಿತು ಜನರಿಗೆ ಆಸಕ್ತಿಯಿಲ್ಲ ಎಂದು ವರದಿ ಹೇಳಿದೆ.
ರೇವಾಐ ಹೀಗಿದೆ ನೋಡಿ: ರೇವಾ ಭಾರತದ ಮೊದಲ ಎಲೆಕ್ಟ್ರಿಕ್ ಕಾರು. ಇದು 2 ಡೋರಿನ ಸಣ್ಣ ಹ್ಯಾಚ್ ಬ್ಯಾಕ್ ಕಾರಾಗಿದ್ದು, ಕೇವಲ 2.6 ಮೀಟರ್ ಉದ್ದ, 1.3 ಮೀಟರ್ ಅಗಲ ಮತ್ತು 1.5 ಮೀಟರ್ ಎತ್ತರವಿದೆ. ಇದರ ತೂಕ 750 ಕೆ.ಜಿ ಇದೆ.
ರೇವಾಐ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 80 ಕಿ.ಮೀ. ಇದರ ಮುಂಬಾಗದ ಸೀಟ್ ನಲ್ಲಿ ಇಬ್ಬರು ದೊಡ್ಡವರು ಮತ್ತು ಹಿಂಬಾಗದಲ್ಲಿ ಇಬ್ಬರು ಮಕ್ಕಳು ಕುಳಿತುಕೊಳ್ಳಲು ಸಾಧ್ಯವಿದೆ. ಹಿಂಬಾಗದ ಸೀಟನ್ನು ಮಡುಚಿದರೆ ಲಗೇಜ್ ಸ್ಥಳಾವಕಾಶ ಸಾಕಷ್ಟಾಗುತ್ತದೆ. ಪ್ರಯಾಣಿಕರು ಮತ್ತು ಲಗೇಜ್ ಸೇರಿ 227 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಈ ಕಾರಿಗಿದೆ.
ಗುಬ್ಬಚ್ಚಿ ಗೂಡಿನಂತಹ ಈ ಪುಟ್ಟ ಕಾರು 6 ವೋಲ್ಟೆಜ್ ನ 8 ಆಸೀಡ್ ಬ್ಯಾಟರಿ ಹೊಂದಿದ್ದು ಒಟ್ಟಾರೆ 48 ವೋಲ್ಟೆಜ್ ಪವರ್ ನೀಡುತ್ತದೆ. ಇದರಲ್ಲಿ ಆನ್ ಬೋರ್ಡ್ ಚಾರ್ಜರ್ ಇದ್ದು, ಸುಲಭವಾಗಿ ಪ್ಲಗ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಎಂಟುಗಂಟೆ ಚಾರ್ಜ್ ಮಾಡಿದರೆ ಪೂರ್ತಿ ತುಂಬುತ್ತದೆ. ರಾತ್ರಿ ಚಾರ್ಜ್ ಇಟ್ಟು ಮಲಗಿದರೆ ಸಾಕು.


Click it and Unblock the Notifications








