ಕಾರು ಕಂಪನಿಗಳ ದೀಪಾವಳಿ ಪಟಾಕಿ ಮೇಲೆ ತಣ್ಣೀರು

ಅತ್ಯಧಿಕ ಮಾರಾಟವಾಗಬೇಕಿದ್ದ ಜುಲೈ ತಿಂಗಳಲ್ಲಿ ವಾಹನ ಮಾರಾಟ ಇಳಿಕೆ ಕಂಡಿದೆ. ಆದರೆ ರಿಸರ್ವ್ ಬ್ಯಾಂಕ್ ಈ ಸೆಪ್ಟಂಬರ್ ನಲ್ಲಿ ಮತ್ತೆ ಬಡ್ಡಿದರ ಹೆಚ್ಚಿಸುವ ನಿರೀಕ್ಷೆಯನ್ನು ವಾಹನ ವಿಶ್ಲೇಷಕರು ವ್ಯಕ್ತಪಡಿಸುತ್ತಾರೆ. ಈಗಾಗಲೇ ಬಡ್ಡಿದರ ಹೆಚ್ಚಳ ಮತ್ತು ಇಂಧನ ದರ ಹೆಚ್ಚಳದಿಂದ ವಾಹನ ಕಂಪನಿಗಳು ಮಂಕಾಗಿವೆ.
ಮಾರುತಿ ಸುಜುಕಿ, ಹೋಂಡಾ ಮತ್ತು ಟಾಟಾ ಸೇರಿದಂತೆ ಕಳೆದ ತಿಂಗಳು ಹೆಚ್ಚಿನ ವಾಹನ ಕಂಪನಿಗಳ ಮಾರಾಟ ಇಳಿಕೆ ಕಂಡಿತ್ತು. ಹಬ್ಬದ ಸೀಸನ್ ನಿರೀಕ್ಷೆಯಲ್ಲಿ ಹೋಂಡಾ ಕಂಪನಿಯು ನೂತನ ಜಾಝ್ ಹೊರತಂದಿದೆ. ಮಾರುತಿಯ ಹೊಸ ಸ್ವಿಫ್ಟ್ ಬಂದಿದೆ. ಆದರೆ ಈ ಹಬ್ಬದ ಸೀಸನ್ ಗೆ ಬಡ್ಡಿದರ ಹೆಚ್ಚಾದರೆ ಮಾರಾಟ ಹೆಚ್ಚಿಸಿಕೊಳ್ಳುವುದು ಕಂಪನಿಗಳಿಗೆ ನಿಜಕ್ಕೂ ಸವಾಲಿನ ವಿಷಯವಾಗಿದೆ.
"ಹಬ್ಬದ ಸೀಸನ್ ಗೆ ಹೆಚ್ಚು ವಾಹನ ಮಾರಾಟವಾಗುವ ಯಾವುದೇ ನಿರೀಕ್ಷೆ ನಮಗಿಲ್ಲ" ಎಂದು ವಾಹನ ಕ್ಷೇತ್ರದ ಹಿರಿಯ ವಿಶ್ಲೇಷಕರೊಬ್ಬರು ಹೇಳುತ್ತಾರೆ. "ಇನ್ನೊಂದು ಬಾರಿ ಬಡ್ಡಿದರ ಹೆಚ್ಚಿಸುವುದು ವಾಹನ ಕ್ಷೇತ್ರದ ಹಬ್ಬದ ಸೀಸನ್ ಮಾರಾಟಕ್ಕೆ ಹಿನ್ನಡೆಯಾಗಲಿದೆ" ಎಂದು ಪ್ರೈಸ್ ವಾಟರ್ ಕೂಪರ್ಸ್ ಇಂಡಿಯಾ ಮುಖ್ಯಸ್ಥ ಅಬ್ದುಲ್ ಮಜೀದ್ ಹೇಳುತ್ತಾರೆ.
ಆದರೂ ವಾಹನ ಕಂಪನಿಗಳು ಮಾರಾಟ ಹೆಚ್ಚಿಸಲು ಹಲವು ಕಾರ್ಯತಂತ್ರ ರೂಪಿಸುವ ನಿರೀಕ್ಷೆಯಿದೆ. ಹಬ್ಬದ ಆಫರ್ ಜೋರಾಗಿಯೇ ಇರುವ ಸಾಧ್ಯತೆಯಿದೆ. ಬಡ್ಡಿದರ ಹೆಚ್ಚಾದರೆ ಮಾತ್ರ ಇಂತಹ ಆಫರ್ ನೀಡಲು ಕೂಡ ಕಾರು ಕಂಪನಿಗಳು ಹಿಂದುಮುಂದು ನೋಡಲಿವೆ. ವಾಹನ ಕಂಪನಿಗಳ ಹಬ್ಬದ ಪಟಾಕಿ ಮೂಡಿಗೆ ಆರ್ ಬಿಐ ತಣ್ಣೀರು ಎರಚುವುದೇ ಕಾದು ನೋಡಬೇಕಿದೆ.


Click it and Unblock the Notifications








