ಮಾರುತಿ ಸುಜುಕಿ ಬುಕ್ಕಿಂಗ್ ಸ್ಥಗಿತ! ವೇಟಿಂಗ್ ಅವಧಿ ಹೆಚ್ಚಳ

ಮಾನೆಸರ್ ಘಟಕದಲ್ಲಿ ಉತ್ಪಾದನೆ ಕಡಿಮೆಯಾಗಿರುವುದರಿಂದ ಮತ್ತು ಈಗಾಗಲೇ 90 ಸಾವಿರಕ್ಕೂ ಹೆಚ್ಚು ಜನರು ಬುಕ್ಕಿಂಗ್ ಮಾಡಿರುವುದರಿಂದ ಕೆಲವು ದಿನಗಳ ಮಟ್ಟಿಗೆ ಬುಕ್ಕಿಂಗ್ ಮಾಡುವುದಿಲ್ಲ ಎಂದು ಡೀಲರುಗಳು ಕೈಚೆಲ್ಲಿದ್ದಾರೆ.
ಡೀಲರುಗಳು ಬುಕ್ಕಿಂಗ್ ನಿಲ್ಲಿಸಲು ಇನ್ನೊಂದು ಪ್ರಮುಖ ಕಾರಣವಿದೆ. ಈಗಾಗಲೇ ಬುಕ್ಕಿಂಗ್ ಮಾಡಿರುವ ಗ್ರಾಹಕರು "ಯಾವಾಗ ಬರುತ್ರಿ ಸ್ವಿಫ್ಟ್" ಅಂತ ಸಾವಿರ ಸಾರಿ ಕೇಳುತ್ತಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸಿ ಅವರಿಗೆ ಸಾಕಾಗಿದೆ. ಬೇಡಿಕೆಗೆ ತಕ್ಕಂತೆ ಪೂರೈಸಲಾಗದ ಒತ್ತಡಕ್ಕೆ ಕಂಪನಿ ಸಿಲುಕಿದೆ.
ಕಳೆದ ಹತ್ತು ದಿನಗಳಲ್ಲಿ ಮಾನೆಸರ್ ಘಟಕದಲ್ಲಿ ಕಾರ್ಮಿಕರ ಸಮಸ್ಯೆಗಳಿಂದ ಕೇವಲ 1,515 ಸ್ವಿಫ್ಟ್ ಕಾರುಗಳನ್ನು ಉತ್ಪಾದಿಸಲಾಗಿದೆ. ಇಷ್ಟು ದಿನದಲ್ಲಿ ಸುಮಾರು 7,192 ಕಾರುಗಳನ್ನು ಉತ್ಪಾದಿಸಬೇಕಿತ್ತು. ಒಂದು ವರದಿಯ ಪ್ರಕಾರ ನೂತನ ಸ್ವಿಫ್ಟ್ ವೇಟಿಂಗ್ ಅವಧಿ ಈಗಾಗಲೇ 8 ತಿಂಗಳು ದಾಟಿದೆಯಂತೆ!!
ಫೇಸ್ ಬುಕ್ ಮಾರುತಿ ಸ್ವಿಫ್ಟ್ ಫ್ಯಾನ್ ಪೇಜ್ ಪೂರ್ತಿಯಾಗಿ ಗ್ರಾಹಕರ "ವರಿ"ಗಳಿಂದ ತುಂಬಿದೆ. ನಾವು ಬುಕ್ಕಿಂಗ್ ಮಾಡಿದ್ದೇವೆ... ಯಾವಾಗ ಬರುತ್ತೆ? ಇನ್ನು ಎಷ್ಟು ತಿಂಗಳು ಕಾಯಬೇಕು? ನಾವು ಬುಕ್ಕಿಂಗ್ ಮಾಡಬಹುದೇ? ಹೀಗೆ ಸಾಲು ಸಾಲು ಪ್ರಶ್ನೆಗಳಲ್ಲಿ ಗ್ರಾಹಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮಾರುತಿ ಸುಜುಕಿ ಈಗಾಗಲೇ ಗುರ್ ಗಾಂವ್ ಘಟಕದಲ್ಲಿಯೂ ಹೊಸ ಸ್ವಿಫ್ಟ್ ಉತ್ಪಾದನೆ ಆರಂಭಿಸುತ್ತಿದೆ. ಮಂಗಳವಾರ ಅಂದ್ರೆ ನಿನ್ನೆ ಕಂಪನಿಯು ಕೇವಲ 90 ಕಾರು ಉತ್ಪಾದಿಸಿದೆ. "ಕೆಲವು ದಿನಗಳ ಕಾಲ ಕಂಪನಿಯು ನೌಕರರಿಗೆ ತರಬೇತಿ ನೀಡುವುದನ್ನು ಮುಂದುವರೆಸುತ್ತದೆ" ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.


Click it and Unblock the Notifications








