ನಿರೀಕ್ಷಿಸಿ ದೇಶದ ರಸ್ತೆಗಿಳಿಯಲಿದೆ ಬಿಎಂಡಬ್ಲ್ಯು ಮಿನಿ

ಬಿಎಂಡಬ್ಲ್ಯು ಸಣ್ಣಕಾರು ಪರಿಚಯಿಸುವುದರಿಂದ ಮರ್ಸಿಡಿಸ್ ಬೆಂಝ್ ಮತ್ತು ಆಡಿ ಕೂಡ ಸಣ್ಣ ಕಾರು ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಇದರಲ್ಲಿ ಮರ್ಸಿಡಿಸ್ ಈಗಾಗಲೇ ಎಕ್ಲಾಸ್ ಮತ್ತು ಬಿಕ್ಲಾಸ್ ಕಾರುಗಳನ್ನು ಪರಿಚಯಿಸುವುದಾಗಿ ಹೇಳಿದೆ.
"ದೇಶದ ರಸ್ತೆಗೆ ಮಿನಿ ಕಾರುಗಳನ್ನು ಪರಿಚಯಿಸುವ ಕುರಿತು ಜರ್ಮನಿಯಲ್ಲಿರುವ ತನ್ನ ಬಾಸ್ ಗಳೊಂದಿಗೆ ಮಾತನಾಡಿದ್ದೇನೆ" ಎಂದು ಬಿಎಂಡಬ್ಲ್ಯು ಇಂಡಿಯಾ ಮುಖ್ಯಸ್ಥ ಡಾ. ಆಂಡ್ರಿಯಸ್ ಸ್ಕಾಫ್ ಹೇಳಿದ್ದಾರೆ.
ಕೆಲವು ವರದಿಗಳ ಪ್ರಕಾರ ಮಿನಿ ಸಣ್ಣ ಕಾರು 2012ರ ವೇಳೆಗೆ ರಸ್ತೆಗಿಳಿಯಲಿದೆ. ಆದರೆ ಇಲ್ಲಿನ ರಸ್ತೆಗೆ ಕಂಪನಿಯು ಯಾವ ಎಂಜಿನ್ ಕಾರು ಹೊರತರಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.
ಮಿನಿ ಬ್ರಾಂಡಿನಲ್ಲಿ ಈಗ ಮಿನಿ ಕ್ಲಾಸಿಕ್ ಕೂಪರ್, ಮಿನಿ ಕೂಪ್, ಕನ್ವರ್ಟಿಬಲ್, ಕ್ಲಬ್ ಮ್ಯಾನ್ ಮತ್ತು ಕಂಟ್ರಿಮ್ಯಾನ್ ಕಾರುಗಳು ಜಾಗತಿಕ ರಸ್ತೆಗಳಲ್ಲಿವೆ. ಮಿನಿ ಕಾರು ವಿಶ್ವದ ಜನಪ್ರಿಯ ಐಕಾನಿಕ್ ಕಾರಾಗಿದೆ.
ದೇಶದ ಜನರಿಗೂ ಮಿನಿ ಕಾರು ಪರಿಚಿತ. ಯಾಕೆಂದರೆ ಟೆಲಿವಿಷನ್ ನಲ್ಲಿ ಮಿಸ್ಟರ್ ಬೀನ್ ಪ್ರಯಾಣಿಸುತ್ತಿರುವುದನ್ನು ನೋಡಿದವರಿಗೆ ಖಂಡಿತ ಮಿನಿ ಪರಿಚಯವಿರುತ್ತದೆ. ಮಿನಿ ಹಲವು ಪ್ರಮುಖ ಕಾರು ರಾಲಿಗಳಲ್ಲೂ ಭಾಗವಹಿಸಿದ ಖ್ಯಾತಿ ಪಡೆದಿದೆ.
ಬಿಎಂಡಬ್ಲ್ಯು ಕಾರುಗಳು ಯಾವತ್ತಿಗೂ ದುಬಾರಿ. ಮಿನಿ ಸಣ್ಣಕಾರು ಕೂಡ ದುಬಾರಿಯಾಗಿಯೇ ಉಳಿಯುವ ನಿರೀಕ್ಷೆಯಿದೆ. ಕಂಪನಿ ಮೂಲಗಳ ಪ್ರಕಾರ ಭಾರತದಲ್ಲಿ ಸಣ್ಣಕಾರು ಮಿನಿದರ ಸುಮಾರು 20 ಲಕ್ಷ ರು. ಇರಲಿದೆ.


Click it and Unblock the Notifications








