ಇಂಡಿಯಾ ಗೇಟ್ ಬಳಿ ನಡೆದ ಅತಿವೇಗದ ಅಪಘಾತ!

ಆಗ ಸರಿಯಾಗಿ ಕಾರೊಂದು ವೇಗವಾಗಿ ಸಾಗಿಬಂತು. ಕರೆಕ್ಟ್ 180 ಕಿ.ಮೀ. ಸ್ಪೀಡಲ್ಲಿ. ಒಮ್ಮೆಗೆ ಚಾಲಕ ಕಾರಿನ ಹಿಡಿತ ಕಳೆದುಕೊಂಡ. ಅಷ್ಟು ವೇಗದಲ್ಲಿ ಆ ರಸ್ತೆಯಲ್ಲಿ ಹಿಡಿತ ತಪ್ಪುವುದು ಗ್ಯಾರಂಟಿ. ಒಮ್ಮೆಗೆ ಹುಚ್ಚು ಹಿಡಿದ ಗೂಳಿಯಂತೆ ವೇಗವಾಗಿ ಸಾಗಿ ಅಲ್ಲೇ ಮಕ್ಕಳ ಪಾರ್ಕ್ ಅತ್ತ ಮುನ್ನಗಿತು.
ಧಡಿಲ್...!
ಆ ರಾತ್ರಿ ಆ ಸದ್ದಿಗೆ ಎಲ್ಲರೂ ಬೆಚ್ಚಿ ಬಿದ್ದರು. ಕೆಲವರು ನಿದ್ದೆಯಿಂದ ಎದ್ದು ಕಣ್ಣು ಒರೆಸಿಕೊಂಡರು. ಆ ಕಾರು ಭೀಕರವಾಗಿ ಅಪಘಾತಗೊಂಡಿತ್ತು. ಅಲ್ಲೇ ಬೀಟ್ ನಲ್ಲಿದ್ದ ಪೊಲೀಸರು ಸ್ವಲ್ಪ ಹೊತ್ತಿನಲ್ಲಿ ಆಗಮಿಸಿದರು. ಅಂಬ್ಯುಲೆನ್ಸ್ ಗೂ ಕರೆ ಹೋಯಿತು. ಆದರೆ ಕಾರಿನೊಳಗಿದ್ದ ಇಬ್ಬರೂ ಕೊಂಚ ಹೊತ್ತಲ್ಲಿ ಸುಧಾರಿಸಿಕೊಂಡು ಹೊರಗೆ ಬಂದರು.
ಪೊಲೀಸ್ ಸಿಬ್ಬಂದಿ ಕಣ್ಣೊರೆಸಿಕೊಂಡು ನೋಡಿದರು. ತಾವು ನೋಡುತ್ತಿರುವುದು ನಿಜವೋ ಸುಳ್ಳೋ ಎಂದು ನಂಬಲು ಅವರು ಸಿದ್ಧರಿರಲಿಲ್ಲ. ಕಾರಿನ ಸ್ಪೀಡೊ ಮೀಟರ್ ನೋಡಿದಾಗ ವೇಗ 180 ಕಿ.ಮೀ. ತಲುಪಿರುವುದು ಸ್ಪಷ್ಟವಾಗಿತ್ತು.
ಕಾರಿನಲ್ಲಿ ಇಬ್ಬರಿದ್ದರು. ಆನಂದ್ ಸಿಂಗ್(23) ಮತ್ತು ಶೆರ್ರಿ ಸಿಂಗ್. ಆನಂದ್ ಡ್ರೈವಿಂಗ್ ಮಾಡುತ್ತಿದ್ದ. ಆತ ಕುಡಿದಿರಲಿಲ್ಲ.
ಅವರು ಡ್ರೈವ್ ಮಾಡುತ್ತಿದ್ದದ್ದು ಪೋರ್ಷ್ ಕರೆರಾ ಎಸ್ ಸ್ಪೋರ್ಟ್ಸ್ ಕಾರು. ಇಂಡಿಯಾ ಗೇಟ್ ಬಳಿ ಅಪಘಾತವಾದಾಗ ಅದರ ವೇಗ ಗಂಟೆಗೆ 180 ಕಿ.ಮೀ. ಕಾರಿನ ಹಿಡಿತ ತಪ್ಪಿದ ಡ್ರೈವರ್ ಕಣ್ಣುಮುಚ್ಚಿಬಿಟ್ಟ. ಆಯ್ತು.. ನಮ್ಮ ಬದುಕು ಮುಗಿಯಿತು ಅಂದು ಕೊಂಡಿದ್ದರು. ಡಬ್ ಅಂತ ಕಾರು ಗುದ್ದಿಯೂ ಆಯಿತು. ಅವರಿಗೆ ಸ್ವರ್ಗ ನರಕ ದರ್ಶನವೂ ಆಯಿತು.
ಆ ಕಾರಿನ ದರ 1.5 ಕೋಟಿ ರುಪಾಯಿ. ಅಷ್ಟು ವೇಗದಲ್ಲಿ ಅಪಘಾತವಾಗಿದ್ದರೂ ಕಾರಿಗೆ ಹೆಚ್ಚು ಹಾನಿಯಾಗಿರಲಿಲ್ಲ. ಹೆಡ್ ಲ್ಯಾಂಪ್ ಕೊಂಚ ಹಾನಿಯಾಗಿತ್ತು. ಕಾರಿನ ಮುಂಬಾಗ ನಜ್ಜಾಗಿತ್ತು. ಆನಂದ್ ನನ್ನು ಪೊಲೀಸರು ಬಂಧಿಸಿದರು. ಬೇಲ್ ಮೇಲೆ ಬಿಡುಗಡೆಯೂ ಆಯಿತು.
ನೋಯಿಡಾದಲ್ಲಿ ನಡೆಯಲಿರುವ ಫಾರ್ಮುಲಾ ಒನ್ ರಸ್ತೆಯ ಮೇಲೆಯೇ ನಡೆಯುತ್ತಿದೆಯಲ್ವ ಎಂದು ರಾಜಧಾನಿ ದೆಹಲಿ ಜನರು ಮಾತನಾಡಿಕೊಳ್ಳಲಾರಂಭಿಸಿದರು.
ಆದರೆ ಅಷ್ಟು ವೇಗದಲ್ಲಿ ಸಾಗಿ, ಅಪಘಾತಕ್ಕೀಡಾದರೂ ಅವರು ಬದುಕಿದ್ದು ಹೇಗೆ ಅಂತ ಎಲ್ಲರೂ ಮಾತನಾಡಿಕೊಳ್ಳಲಾರಂಬಿಸಿದರು.
ಅಲ್ಲಿನ ಸ್ಥಳದಲ್ಲಿದ್ದ ಯಾವುದೇ ದೈವಿಶಕ್ತಿ ಬದುಕಿಸಿರಬಹುದು ಅಂತ ಒಬ್ಬರು ಅಂದರು.
ಕತ್ತಲಲ್ಲಿ ಆ ರಸ್ತೆಯಲ್ಲಿ ಸಾಗುವುದು ಅಪಾಯಕಾರಿ. ಅಲ್ಲಿ ಹಿಂದೊಮ್ಮೆ ನಡೆದ ಅಪಘಾತದಲ್ಲಿ ಸತ್ತ ಹೆಣ್ಣು ಮಗಳೊಬ್ಬಳು ದೆವ್ವವಾಗಿ ಕಾಡುತ್ತಿದ್ದಾಳೆ ಅಂತ ಮತ್ತೊಬ್ಬ ಪುಂಗಿಯೂದಿದ.
ಹೀಗೆ ಜನ ಚಿತ್ರವಿಚಿತ್ರವಾಗಿ ಮಾತನಾಡುತ್ತಿದ್ದರು.
ಆದರೆ ಅಪಘಾತವಾದ ಆನಂದ್ ತಿಳಿಸಿದ ಪ್ರಕಾರ ಆವರಿಬ್ಬರನ್ನು ಬದುಕಿಸಿದು ಕಾರಿನಲ್ಲಿದ್ದ ಸುರಕ್ಷತೆಯ ಫೀಚರು ಅಂತೆ.
ಅದರ ಹೆಸರು ಏರ್ ಬ್ಯಾಗ್.
(ಜಸ್ಟ್ ಫಾರ್ ಚೇಂಜ್: ನಿನ್ನೆ ಇಂಡಿಯಾ ಗೇಟ್ ಬಳಿ ನಡೆದ ಲಕ್ಷುರಿ ಸ್ಪೋರ್ಟ್ಸ್ ಕಾರೊಂದರ ಅಪಘಾತ ಹಿನ್ನಲೆಯಾಗಿಟ್ಟು ಕೊಂಡು ಬರೆದ ಉತ್ಪ್ರಕ್ಷಿತ ವರದಿಯಿದು)


Click it and Unblock the Notifications