ಅರೇ, ಹೋಂಡಾ ಸಿಟಿ ಕಾರು ದರ ಇಷ್ಟು ಕಡಿಮೆನಾ?!

ನಿಮಗೆ ನೆನಪಿರಬಹುದು. ನೂತನ ಹೋಂಡಾ ಸಿಟಿ ಆವೃತ್ತಿ ಮುಂದಿನ ತಿಂಗಳು ರಸ್ತೆಗಿಳಿಯಲಿದೆ ಎಂದು ನಾವು ವರದಿ ಮಾಡಿದ್ದೇವು. ಆದರೆ ಗೋಡಾನಿನಲ್ಲಿ ಹಳೆಯ ಕಾರುಗಳ ರಾಶಿಯನ್ನಿಟ್ಟುಕೊಂಡು ಹೊಸ ಆವೃತ್ತಿ ಹೊರತರುವುದು ಕಂಪನಿಗೆ ಯಾಕೋ ಸರಿಬಂದಾಂಗಿಲ್ಲ.
ಹೀಗಾಗಿ ಕಂಪನಿಯು ಹಳೆಯ ಸಿಟಿ ಕಾರುಗಳಿಗೆ ಬಂಪರ್ ದರ ಕಡಿತ ಮಾಡಲು ತೀರ್ಮಾನಿಸಿದೆಯಂತೆ. ಕೆಲವು ಟಿವಿ ವಾಹಿನಿಗಳ ವರದಿ ಪ್ರಕಾರ ಸಿಟಿ ಕಾರಿಗೆ ಕಂಪನಿಯು 70 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ದರ ಕಡಿಮೆ ಮಾಡಲಿದೆಯಂತೆ. ಬಾಪ್ ರೇ....!
ಕಂಪನಿಯ ದರ ಕಡಿತ ಮಾಡುವ ಟ್ರೆಂಡ್ ಬರೀ ಸಿಟಿ ಕಾರಿಗೆ ಸೀಮಿತವಾಗಿಸಿಲ್ಲ. ಈ ಹಿಂದೆ ನೂತನ ಫೇಸ್ ಲಿಫ್ಟೆಡ್ ಜಾಝ್ ಕಾರು ಅನಾವರಣ ಮಾಡುವ ಸಂದರ್ಭದಲ್ಲಿ ಜಾಝ್ ಗೂ ಸುಮಾರು ಒಂದುವರೆ ಲಕ್ಷ ರು. ದರ ಕಡಿತ ಮಾಡಿತ್ತು. ಈ ಭಾರಿ ಡಿಸ್ಕೌಂಟಿನಿಂದ ಗೋಡಾನಿನಲ್ಲಿದ್ದ ಹಳೆಯ ಜಾಝ್ ರಾಶಿಯನ್ನು ಮೂರು ದಿನಗಳಲ್ಲಿ ಮಾರಾಟ ಮಾಡಿ ಕೈತೊಳೆದುಕೊಂಡಿತ್ತು.
ಹೋಂಡಾ ಸಿಟಿ ಕಾರು ದೇಶದಲ್ಲಿ ಅತ್ಯಧಿಕವಾಗಿ ಮಾರಾಟವಾಗುವ ಮಧ್ಯಮ ಗಾತ್ರದ ಸೆಡಾನ್ ಕಾರು. ಆದರೆ ವೆಂಟೊ ಮತ್ತು ವೆರ್ನಾ ಕಾರುಗಳು ರಸ್ತೆಗಿಳಿದ ನಂತರ ಸಿಟಿ ಕಾರು ಮಾರಾಟಕ್ಕೆ ಗ್ರಹಣ ಬಡಿದಿತ್ತು. ಇತ್ತೀಚೆಗೆ ಮತ್ತೆ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಹೋಂಡಾ ಸಿಟಿ ಮುಂದುವರೆದಿದೆ.
ಸಿಟಿ ಕಾರುಗಳಿಗೆ ಭಾರಿ ಡಿಸ್ಕೌಂಟ್ ಇರುವ ಕಾರಣ ಸಿಕ್ಕಿದ್ದೇ ಲಾಭ ಅಂತ ನೀವು ಖರೀದಿಸಬಹುದು. ಅಥವಾ ಡಿಸ್ಕೌಂಟ್ ಯಾರಿಗೆ ಬೇಕು? ಮುಂದಿನ ತಿಂಗಳು ಹೊಸ ಸಿಟಿ ಕಾರನ್ನೇ ಖರೀದಿಸ್ತಿವಿ ಅಂತ ತೀರ್ಮಾನಿಸಿದರೆ ನಿಮಿಷ್ಟ. ಆದರೆ ಹೊಸ ಫೇಸ್ ಲಿಫ್ಟೆಡ್ ಸಿಟಿ ಕಾರಲ್ಲಿ ತಾಂತ್ರಿಕವಾಗಿ ಯಾವುದೇ ಬದಲಾವಣೆಯಿಲ್ಲ ಅನ್ನೋದನ್ನು ನೆನಪಿನಲ್ಲಿಟ್ಟುಕೊಂಡರೆ ಸಾಕು.
ಹೊಸ ಹೋಂಡಾ ಸಿಟಿ ಹೇಗಿರಲಿದೆ ಎಂಬ ಮಾಹಿತಿ, ವಿಮರ್ಶೆಗಳಿಗಾಗಿ ನಿಮ್ಮ ಕಣ್ಣು ಕನ್ನಡ ಡ್ರೈವ್ ಸ್ಪಾರ್ಕ್ ಮೇಲಿರಲಿ.


Click it and Unblock the Notifications








