ದೆಹಲಿ ವಾಹನ ಪ್ರದರ್ಶನಕ್ಕೆ ಹ್ಯುಂಡೈ ಹೊಸ ಕಾರು ಸಜ್ಜು

ದಕ್ಷಿಣ ಕೊರಿಯಾ ಮೂಲದ ಈ ಕಾರು ತಯಾರಕ ಕಂಪನಿ ಭಾರತಕ್ಕೆ ತನ್ನ ಅತ್ಯಾಕರ್ಷಕ ಕಾರುಗಳನ್ನು ಪ್ರದರ್ಶಿಸಲಿರುವುದು ಪ್ರದರ್ಶನದ ಮುಖ್ಯ ಆಕರ್ಷಣೆಯಾಗಲಿದೆ.
ಕಂಪನಿ ಹೊರತರುತ್ತಿರುವ ಹೊಸ ಮಾದರಿಗಳು HND-7 ಮಲ್ಟಿ ಪರ್ಪೋಸ್ ವಾಹನ, ಮೂರು ಡೋರಿನ ಕೂಪ್ ಆವೃತ್ತಿಯ ವೆಲೆಸ್ಟಾರ್, ಎಲೆಂಟ್ರಾ ಸೆಡನ್ ಆವೃತ್ತಿಯ ಕಾರುಗಳನ್ನು ಒಳಗೊಂಡಿದೆ. ಕಂಪನಿಯ ಹೊಸ ಮಾದರಿಗಳ ಬಗ್ಗೆ ಮಾತನಾಡಿದ ಹ್ಯುಂಡೈ ಮೊಟಾರ್ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ನಿರ್ದೇಶಕ ಅರವಿಂದ ಸಕ್ಸೇನಾ, ಮುಂಬರುತ್ತಿರುವ ವಾಹನ ಪ್ರದರ್ಶನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅತ್ಯಂತ ಆಕರ್ಷಿತ ಕಾರುಗಳನ್ನು ಪ್ರದರ್ಶನಕ್ಕಿಡುವುದಾಗಿ ತಿಳಿಸಿದರು.
ಅಷ್ಟೇ ಅಲ್ಲ, ಪ್ರದರ್ಶನದಲ್ಲಿ ಹಳೆಯ ಕಾರುಗಳನ್ನು, ಬಿಡುಗಡೆಗೊಂಡಿರುವ ಕಾರುಗಳನ್ನೂ ಇಡಲಾಗುವುದು. ಸಣ್ಣಕಾರು ಇಯಾನ್ ನಿಂದ ಸಾಂತಾ ಫೆ ವರೆಗಿನ ಕಂಪನಿಯ ಎಲ್ಲಾ ಕಾರುಗಳೂ ಪ್ರದರ್ಶನದಲ್ಲಿ ಭಾಗಿಯಾಗಲಿವೆ ಎಂದು ತಿಳಿಸಿದರು.
ಪ್ರದರ್ಶನದಲ್ಲಿ ಹೊಸದಾಗಿ ಕಾಣಿಸಿಕೊಳ್ಳಲು ಅಣಿಯಾಗಿರುವ ಎಲೆಂಟ್ರಾ ಸೆಡನ್ ಆವೃತ್ತಿಯಾಗಿದ್ದು, ಸಖತ್ ಲುಕ್ ಹೊಂದಿದೆ. ಮ್ಯಾನ್ಯುಯಲ್ ಮತ್ತು ಆಟೊಮೆಟಿಕ್ ಗೇರ್, ಎರಡೂ ಆಯ್ಕೆಯ ಇಂಜಿನ್ ಗಳಲ್ಲಿ ಲಭ್ಯವಾಗಲಿದೆ.
ವೆಲೆಸ್ಟರ್ ಅನೇಕ ಕಡೆಗಳಲ್ಲಿ ಪ್ರದರ್ಶಿಸಲಾಗಿದ್ದು, ಅದರ ವಿನ್ಯಾಸದಿಂದ ಹೆಚ್ಚು ಮನ್ನಣೆ ಪಡೆದುಕೊಂಡಿದೆ. ಎಲೆಂಟ್ರಾ ಮಾದರಿ ಯುರೋಪ್ ಮತ್ತು ಅಮೆರಿಕದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದು. ಹಾಗೆಯೇ ಈ HND-7 ಕಾರು ಭಾರತದಲ್ಲಿ ಭಾರೀ ಮಾರಾಟವಾಗುವ ನಿರೀಕ್ಷೆಯಿದೆ.
ಭಾರತದ ಅತ್ಯಂತ ಪ್ರತಿಷ್ಟಿತ ದೆಹಲಿ ವಾಹನ ಪ್ರದರ್ಶನ ಎರಡು ವರ್ಷಕ್ಕೊಮ್ಮೆ ನಡೆಸಲಾಗಿದ್ದು, ಈ ಬಾರಿ ಜನವರಿ 5 ರಿಂದ ಪ್ರಾರಂಭವಾಗಲಿದೆ. ಪ್ರದರ್ಶನದಲ್ಲಿ ಹಲವು ಕಂಪನಿಯ ಅತ್ಯಾಕರ್ಷಕ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ, ಮತ್ತು ಇನ್ನಿತರ ವಾಹನಗಳು ಹಾಗೂ ಬಿಡಿಭಾಗಗಳು ಲಭ್ಯವಾಗಲಿದೆ.


Click it and Unblock the Notifications








