ಡೀಸೆಲ್ ಕಾರು ಉತ್ಪಾದಿಸುವುದೋ? ಬೇಡವೋ?
ಯಾಕೆಂದರೆ ಡೀಸೆಲ್ ದರ ಅನಿಯಂತ್ರಣಗೊಂಡರೆ ಡೀಸೆಲ್ ಕಾರಿಗೆ ಬೇಡಿಕೆ ಕಡಿಮೆಯಾಗಬಹುದು ಎನ್ನುವ ಆತಂಕ ಹೆಚ್ಚಿನ ಕಾರು ಕಂಪನಿಗಳಿಗಿದೆ. ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸುವ ಕುರಿತು ಸರಕಾರದ ನೀತಿ ಇನ್ನೂ ಸ್ಪಷ್ಟವಾಗದೆ ಇರುವುದು ಹೆಚ್ಚಿನ ಕಾರು ಕಂಪನಿಗಳನ್ನು ಚಿಂತೆಗೀಡು ಮಾಡಿದೆ.
ಡೀಸೆಲ್ ದರವನ್ನು ಅನಿಯಂತ್ರಣಗೊಳಿಸುವ ಸಾಧ್ಯತೆಯನ್ನು ಮಾತ್ರ ಸರಕಾರ ಹೇಳಿದೆ. ಆದರೆ ಯಾವಾಗ ಅನಿಯಂತ್ರಣಗೊಳಿಸಲಾಗುವುದು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಹೆಚ್ಚಿನ ಕಾರು ಕಂಪನಿಗಳು ಡೀಸೆಲ್ ಕಾರು ಉತ್ಪಾದನೆಗೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ.
ಕಳೆದ ಎರಡು ವರ್ಷಗಳಿಂದ ಡೀಸೆಲ್ ಕಾರುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಸಹಜವಾಗಿ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಕಾರು ಕಂಪನಿಗಳು ತಮ್ಮ ಗಮನವನ್ನು ಡೀಸೆಲ್ ಕಾರುಗಳತ್ತ ತಿರುಗಿಸಿದ್ದಾರೆ. ಆದರೆ ಇದೀಗ ಡೀಸೆಲ್ ಬೆಲೆ ನಿಯಂತ್ರಣ ಮುಕ್ತವಾಗುವುದು ಕಾರು ಕಂಪನಿಗಳಿಗೆ ಆತಂಕ ತಂದಿದೆ.
ಡೀಸೆಲ್ ದರ ನಿಯಂತ್ರಣ ಮುಕ್ತಗೊಳಿಸಿದರೆ ಹೆಚ್ಚು ಬೀಳೋದು ಮಾರುತಿ ಸುಜುಕಿ ಕಂಪನಿಗೆ. ಕಂಪನಿಯು ಪ್ರಮುಖವಾಗಿ ಪೆಟ್ರೋಲ್ ಕಾರು ಉತ್ಪಾದನಾ ಕಂಪನಿಯಾಗಿದ್ದರೂ, ಡೀಸೆಲ್ ಎಂಜಿನಿಗಾಗಿ ಈಗಾಗಲೇ ಫಿಯೆಟ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ಗುರ್ ಗಾಂವ್ ಘಟಕದಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಹೆಚ್ಚಿಸಿದೆ.
ಈಗ ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರ್ ಕಾರು ಬುಕ್ಕಿಂಗಿನಲ್ಲಿ ಶೇಕಡ 80ರಷ್ಟು ಪಾಲು ಡೀಸೆಲ್ ಆವೃತ್ತಿಗಳಾಗಿವೆ. ಎಲ್ಲಾದರೂ ಡೀಸೆಲ್ ದರ ಹೆಚ್ಚಳ ಆರಂಭವಾದರೆ ಹೆಚ್ಚಿನ ಜನರು ಮತ್ತೆ ಪೆಟ್ರೋಲ್ ಕಾರುಗಳತ್ತ ಮುಖ ಮಾಡಲಿದ್ದಾರೆ. ಆಗ ಎಲ್ಲವೂ ಉಲ್ಟಾ ಆಗಲಿದೆ.
ದೇಶದ ಎರಡನೇ ಬೃಹತ್ ಕಾರು ತಯಾರಕಾ ಕಂಪನಿ ಹ್ಯುಂಡೈ ಮೋಟರ್ಸ್‌ಗೂ ಡೀಸೆಲ್ ಕಾರು ಚಿಂತೆ ಶುರುವಾಗಿದೆ. ಕಂಪನಿಯು ಈಗಾಗಲೇ ಚೆನ್ನೈನಲ್ಲಿ ಡೀಸೆಲ್ ಕಾರು ಉತ್ಪಾದನೆ ಘಟಕ ಆರಂಭಿಸಿದೆ. ಕೇಂದ್ರ ಬಜೆಟಿನಲ್ಲಿ ಡೀಸೆಲಿಗೆ ಹೆಚ್ಚುವರಿ ಸುಂಕ ವಿಧಿಸದೆ ಇದ್ದ ಹಿನ್ನಲೆಯಲ್ಲಿ ಕಂಪನಿಯು ನಿಶ್ಚಿಂತೆಯಿಂದ ಘಟಕ ಆರಂಭಿಸಿತ್ತು. ಕಂಪನಿಯು ಇತ್ತೀಚೆಗೆ ಐ20 ಮತ್ತು ವೆರ್ನಾ ಡೀಸೆಲ್ ಆವೃತ್ತಿಗಳ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸಿತ್ತು.
ಅತ್ಯಧಿಕ ಮೈಲೇಜ್ ಮತ್ತು ಇಂಧನ ದರ ಕಡಿಮೆಯಾಗಿರುವುದು ಸದ್ಯ ಡೀಸೆಲ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.


Click it and Unblock the Notifications









