ಟಾಟಾ ಶೋರೂಂಗಳಿಗೆ ಫಿಯೆಟ್ ಗುಡ್ ಬೈ
ಟಾಟಾ ಜೊತೆಗಿನ ಕಾರು ಮಾರಾಟ ಸಹವಾಸ ಫಿಯೆಟ್ ಇಂಡಿಯಾಕ್ಕೆ ಸಾಕೆನಿಸಿದಂತಿದೆ. ಫಿಯೆಟ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಡೀಲರುಗಳನ್ನು ಎಲಿಮಿನೆಟ್ ಮಾಡಲು ಫಿಯೆಟ್ ಆರಂಭಿಸಿದ್ದು, ಸ್ವಂತ ಡೀಲರ್ಷಿಪ್ ಗಳನ್ನು ಸ್ಥಾಪಿಸಲು ತೊಡಗಿದೆ.
ಟಾಟಾ ಜೊತೆಗಿನ ಮಾರಾಟ, ವಹಿವಾಟು ಮೈತ್ರಿ ಕೊನೆಗಣಿಸುವ ಮೊದಲ ಹೆಜ್ಜೆಯಾಗಿ ಫಿಯೆಟ್ ಇಂಡಿಯಾ ಹೈದರಾಬಾದಿನಲ್ಲಿ ಸ್ವತಂತ್ರ ಡೀಲರ್ಷಿಪ್ ತೆರೆದಿದೆ. ಈಗಾಗಲೇ ಫಿಯೆಟ್ ಕಾರುಗಳನ್ನು ಮಾರಾಟದಲ್ಲಿ ಅನುಭವ ಪಡೆದಿರುವ ಟಾಟಾ ಡೀಲರುಗಳಿಗೆ ಇದರಿಂದ ಹಿನ್ನಡೆಯಾಗಲಿದೆ.
ಡೀಲರ್ಷಿಪ್ ಕೇಂದ್ರಗಳನ್ನು ಸ್ಥಾಪಿಸುವ ಆರಂಭಿಕ ಹಂತದಲ್ಲಿ ಕಂಪನಿಯಿದೆ. ಕಂಪನಿಯ ಘನತೆಗೆ ತಕ್ಕಂತೆ ಟಾಟಾ ಡೀಲರುಗಳು ವರ್ತಿಸದೆ ಇರುವುದು ಫಿಯೆಟ್ ಇಂಡಿಯಾದ ಈ ನಿರ್ಧಾರಕ್ಕೆ ಕಾರಣವೆನ್ನಲಾಗಿದೆ. ಅಂದರೆ ಟಾಟಾ ಡೀಲರುಗಳು ಫಿಯೆಟ್ ಕಾರುಗಳನ್ನು ಮಾರಾಟ ಮಾಡಲು ಅಸಡ್ಡೆ ವಹಿಸುತ್ತಿದ್ದಾರೆ ಎಂದು ಫಿಯೆಟ್ ಭಾವಿಸಿದೆ.
ದೇಶದಲ್ಲಿ ಫಿಯೆಟ್ ಇಂಡಿಯಾ ಕಂಪನಿಯು 174 ಟಾಟಾ ಬ್ರಾಂಡೆಡ್ ಶೋರೂಂಗಳನ್ನು ಹೊಂದಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಕಡಿಮೆಯೆಂದರೂ ಸುಮಾರು 67 ನಗರಗಳಲ್ಲಿ ಸ್ವತಂತ್ರ ಶೋರೂಂಗಳನ್ನು ತೆರೆಯಲು ಫಿಯೆಟ್ ಯೋಜಿಸಿದೆ. ಇದಕ್ಕಾಗಿ ಕಂಪನಿಯು ಹೊಸ ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯನ್ನೂ ಆರಂಭಿಸಲಿದೆ.


Click it and Unblock the Notifications









