ದೇಶಕ್ಕೆ ಎಂಟ್ರಿ ಕೊಡಲಿರುವ 'ಫಾರ್ಮುಲಾ ಇ ಸಿರೀಸ್ ರೇಸ್'
ಗ್ರೇಟರ್ ನೋಯ್ಡಾದಲ್ಲಿ 2011ನೇ ಇಸವಿಯಲ್ಲಿ ಸಾಗಿದ ಚೊಚ್ಚಲ 'ಫಾರ್ಮುಲಾ ಒನ್ ಎಫ್-1 ರೇಸ್' ಭರ್ಜರಿ ಯಶಸ್ಸು ಕಂಡ ಬಳಿಕವಂತೂ ಅನೇಕ ರೇಸಿಂಗ್ ಟೂರ್ನಿಗಳು ಭಾರತವನ್ನು ಎದೆ ತಟ್ಟಿ ನೋಡಲಾರಂಭಿಸಿದೆ.
ಇದರಂತೆ ಮುಂಬರುವ ದಿನಗಳಲ್ಲಿ 'ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್'ಗೆ ಬುದ್ಧ ಇಂಟರ್‌ನ್ಯಾಷನಲ್ ಸೆರ್ಕ್ಯೂಟ್ ವೇದಿಕೆಯಾಗಲಿದೆ. ಇದರ ಬೆನ್ನಲ್ಲೇ 'ಎಫ್‌ಐಎ ಜಿಟಿ1 ವಿಶ್ವ ಚಾಂಪಿಯನ್‌ಶಿಪ್ ರೇಸ್' ಕೂಡಾ ಭಾರತವನ್ನು ಪ್ರವೇಶಿಸಲಿದೆ ಎಂದು ಸಹ ಮೂಲಗಳು ತಿಳಿಸಿವೆ.
'ಫಾರ್ಮುಲಾ ಇ ಸಿರೀಸ್' ರೇಸ್‌ನಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 20 ಚಾಲಕರನ್ನು ಒಳಗೊಂಡಿರಲಿದೆ. ಭಾರತ ಕೂಡಾ ಪ್ರಸ್ತುತ ಟೂರ್ನಿಯ ಭಾಗವಾಗಿರಲಿದೆ ಎಂದು 'ಫಾರ್ಮುಲಾ ಇ ಸಿರೀಸ್' ಸಿಇಒ ಅಲೆಜಾಂಡ್ರೊ ಅಗಾಗ್ ಸ್ಪಷ್ಟಪಡಿಸಿದ್ದಾರೆ.
ಚಾಂಪಿಯನ್‌ಶಿಪ್ ಅಭಿವೃದ್ಧಿಗಾಗಿ ಫಾರ್ಮುಲಾ ಒನ್ ಪ್ರಮುಖವಾಗಿ ಬೆಳೆದು ಬರುತ್ತಿರುವ ಮಾರುಕಟ್ಟೆಯನ್ನು ಗುರಿಯಿರಿಸಿಕೊಂಡಿದೆ. ಭಾರತದಲ್ಲೂ ನೆಲೆಯನ್ನು ಸ್ಥಾಪಿಸುವುದರಿಂದ ಕಾರ್ಯತಂತ್ರ ಪ್ರತಿಫಲಿಸಲಿದೆ. ಹಾಗೆಯೇ ರೇಸ್ ರೂಪಿಸುವ ನಿಟ್ಟಿನಲ್ಲಿ ಸ್ಥಳೀಯ ಪಾಲುದಾರರನ್ನು ಎದುರು ನೋಡುತ್ತಿದ್ದೇವೆ ಎಂದು ಅಗಾಗ್ ವಿವರಣೆ ನೀಡಿದ್ದಾರೆ.
ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್ (ಬಿಐಸಿ) ಮಾಲೀಕರು ಕೂಡಾ ಇದನ್ನೇ ಪ್ರತಿಪಾದಿಸಿದ್ದು, ಇಂತಹದೊಂದು ಮಹಾಕೂಟಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದ್ದೇವೆ ಎಂದಿದ್ದಾರೆ.
ಆದರೆ ಈ ವರೆಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಹಾಗಿದ್ದರೂ ಭವಿಷ್ಯದಲ್ಲಿ ಇಂತಹ ಹಲವಾರು ರೇಸ್‌ಗಳು ನಡೆಯಲಿರುವುದಂತೂ ಖಚಿತ. ಹಾಗಿದ್ದರೆ ಮೈ ಜುಮ್ ಎನಿಸುವ 'ಫಾರ್ಮುಲಾ ಇ ರೇಸ್' ಮಜಾ ಸವಿಯಲು ನೀವು ರೆಡಿನಾ..!


Click it and Unblock the Notifications









