ಜಿಎಂ ಎಲೆಕ್ಟ್ರಿಕ್ ಕಾರು: ಒಂದು ಚಾರ್ಜಿಗೆ 321 ಕಿ.ಮೀ.!
ಜನರಲ್ ಮೋಟರ್ಸ್ ಕಂಪನಿಯು ಮುಂದಿನ ಕೆಲವೇ ವರ್ಷಗಳಲ್ಲಿ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಪರಿಚಯಿಸಲು ನಿರ್ಧರಿಸಿದೆ. ಈ ಎಲೆಕ್ಟ್ರಿಕ್ ಕಾರನ್ನು ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 321.8 ಕಿ.ಮೀ. ದೂರ ಸಾಗಬಹುದಂತೆ.
"ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಬದಲಾವಣೆಯ ಹರಿಕಾರನಾಗುವಂತಹ ಕಾರೊಂದನ್ನು ಮುಂದಿನ ಎರಡರಿಂದ ನಾಲ್ಕು ವರ್ಷಗಳೊಳಗೆ ಪರಿಚಯಿಸಲಿದ್ದೇವೆ" ಎಂದು ಜನರಲ್ ಮೋಟರ್ಸ್ ಕಂಪನಿಯ ಸಿಇಒ ಡಾನ್ ಅಕರ್ಸನ್ ಹೇಳಿದ್ದಾರೆ.
ಜನರಲ್ ಮೋಟರ್ಸ್ ಕಂಪನಿಗೆ ಕಾಲಿಫ್ ಮೂಲದ ಎನ್ವಿಯಾ ಸಿಸ್ಟಮ್ಸ್ ಈ ಶಕ್ತಿಶಾಲಿ ಬ್ಯಾಟರಿ ಅಭಿವೃದ್ಧಿಪಡಿಸಿಕೊಡಲಿದೆ. ಇದು ಲೀಥಿಯಂ ಐಆನ್ ಬ್ಯಾಟರಿಯಾಗಿದೆ. ಆದರೆ ಇದರ ಪವರ್ ಸದ್ಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಕಾರುಗಳಿಗಿಂತ ಎರಡು ಪಟ್ಟು ಹೆಚ್ಚಿರಲಿದೆ.
ಜನರಲ್ ಮೋಟರ್ಸ್ ಕಂಪನಿಯು ಈಗ ವೋಲ್ಟ್ ಎಂಬ ಎಲೆಕ್ಟ್ರಿಕ್ ಕಾರು ಮಾರಾಟ ಮಾಡುತ್ತಿದೆ. ಇದು ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಸುಮಾರು 35 ಮೈಲು ಸಾಗುತ್ತದೆ.
ಈಗಾಗಲೇ ಕೆಲವು ಕಂಪನಿಗಳು 100 ಮೈಲು ಸಾಮರ್ಥ್ಯದ ಎಲೆಕ್ಟ್ರಿಕ್ ಕಾರು ಪರಿಚಯಿಸಿವೆ. ಆದರೆ ಇವೆಲ್ಲ ದುಬಾರಿ ದರದ ಕಾರುಗಳಾಗಿವೆ. ಆದರೆ ಜನರಲ್ ಮೋಟರ್ಸ್ ಕಂಪನಿಯ ನೂತನ ಕಾರಿನ ದರ ಅಗ್ಗವಾಗಿರಲಿದೆ ಎಂದು ಮೂಲಗಳು ಹೇಳಿವೆ.


Click it and Unblock the Notifications









